ಗುಲಾಬ್ ಜಾಮೂನ್ ಅಂತ ನಂಬರ್ ಸೇವ್ ಮಾಡಿಕೊಂಡಿದ್ದ ಶ್ವೇತಾ – ವರ್ತೂರ್‌ ಪ್ರಕಾಶ್‌ಗೆ ಬಂಧನ ಭೀತಿ?

Public TV
2 Min Read

– ಇಂದು ವರ್ತೂರು ಪ್ರಕಾಶ್‌ ವಿಚಾರಣೆಗೆ ಮತ್ತೆ ನೋಟಿಸ್‌

ಬೆಂಗಳೂರು: ಮಾಜಿ ಸಚಿವ ವರ್ತೂರು ಪ್ರಕಾಶ್‌ ಅವರಿಗೆ ಅವರ ಫೇಸ್‌ಬುಕ್‌ ಗೆಳತಿ (Facebook Friend) ಶ್ವೇತಾಗೌಡಳಿಂದಲೇ ಸಂಕಷ್ಟ ಬಂದೊದಗಿದೆ. ಇದೀಗ ಚಿನ್ನದ ವ್ಯಾಪಾರಿಯೊಬ್ಬರಿಗೆ ಕೋಟ್ಯಂತರ ರೂಪಾಯಿ ವಂಚನೆ ಎಸಗಿದ ಪ್ರಕರಣದಲ್ಲಿ ವರ್ತೂರು ಪ್ರಕಾಶ್‌ಗೆ (Varthur Prakash) ಬಂಧನ ಭೀತಿ ಶುರುವಾಗಿದೆ.

ಆರೋಪಿಯಾಗಿರುವ ಶ್ವೇತಾ ವಿಚಾರಣೆ ವೇಳೆ ಹಲವು ಸ್ಫೋಟಕ ಹೇಳಿಕೆಗಳನ್ನ ನೀಡಿದ್ದಾರೆ. ತಾನು ವಂಚಿಸಿದ ಚಿನ್ನದಲ್ಲಿ ವರ್ತೂರು ಪ್ರಕಾಶ್‌ಗೂ ಪಾಲು ನೀಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಪಿ ಕಚೇರಿಯಿಂದ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಲಾಗಿತ್ತು. ಆದ್ರೆ ದಿನವಿಡೀ ಕಳೆದರೂ ಕಚೇರಿಯತ್ತ‌ ವರ್ತೂರು ಸುಳಿಯದ ಹಿನ್ನೆಲೆ ಇಂದು ವಿಚಾರಣೆಗೆ ಹಾಜರಾಗುವಂತೆ ಮತ್ತೆ ನೋಟಿಸ್‌ ನೀಡಲಾಗಿದೆ. ಇಂದು ಎಸಿಪಿ ಗೀತಾ ಅವರ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ಉನ್ನತ ಪೊಲೀಸ್‌ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಹೊರರಾಜ್ಯದ ಯುವತಿಯರನ್ನ ಕರೆಸಿ ಬೆಂಗ್ಳೂರಲ್ಲಿ ಹೈಟೆಕ್ ವೇಶ್ಯವಾಟಿಕೆ ದಂಧೆ – ಆರೋಪಿ ಅಂದರ್‌

ವರ್ತೂರು ಪ್ರಕಾಶ್‌ಗೆ ಬಂಧನ ಭೀತಿ:
ವರ್ತೂರು ಪ್ರಕಾಶ್‌ಗೆ ತನ್ನ ಫೇಸ್‌ಬುಕ್‌ ಗೆಳತಿಯಿಂದಲೇ ಬಂಧನ ಭೀತಿ ಎದುರಾಗಿದೆ. ವಂಚಕಿ ಶ್ವೇತಾ ವಿಚಾರಣೆ ವೇಳೆ ಹಲವು ಸ್ಪೋಟಕ ಮಾಹಿತಿಗಳು ಬಹಿರಂಗವಾಗಿದೆ. ಶ್ವೇತಾಗೌಡ ಹಾಗೂ ವರ್ತೂರು ಪ್ರಕಾಶ್‌ಗೆ ನಿಕಟ ನಂಟಿರುವುದು ಪತ್ತೆಯಾಗಿದೆ. ಇಬ್ಬರೂ ಹಲವು ಬಾರಿ ಚಾಮುಂಡಿ ಬೆಟ್ಟಕ್ಕೆ ಹೋಗಿ ಬಂದಿದ್ದಾರೆ. ಅಲ್ಲದೇ ತಿರುಪತಿಗೆ ಹೋಗಲು ಸಹ ಟಿಕೆಟ್‌ ಬುಕ್‌ ಮಾಡಿರುವುದು ಬಹಿರಂಗವಾಗಿದೆ. ಇದಕ್ಕೆ ಪೂರಕವಾಗಿ ಶ್ವೇತಾ ಮೊಬೈಲ್‌ನಲ್ಲಿ ಹಲವು ಫೋಟೋ ಸಾಕ್ಷ್ಯಗಳು ಸಿಕ್ಕಿವೆ. 3 ಚಿನ್ನದ ಅಂಗಡಿ ಮಾಲೀಕರ ಜ್ಯುವೆಲ್ಲರಿ ಶಾಪ್‌ಗೆ ಶ್ವೇತಾ ಜೊತೆ ವರ್ತೂರು ಪ್ರಕಾಶ್ ಹೋಗಿರುವುದಕ್ಕೆ ಸಾಕ್ಷಿ ಸಿಕ್ಕಿದೆ. ಎರಡು ಬಾರಿ ನೋಟಿಸ್‌ ನೀಡಿದ್ದರೂ ವರ್ತೂರು ಪ್ರಕಾಶ್‌ ವಿಚಾರಣೆಗೆ ಹಾಜರಾಗದ ಕಾರಣ ಮೂರನೇ ನೋಟಿಸ್‌ ನೀಡಲಾಗಿದೆ. ವಿಚಾರಣೆಗೆ ಹಾಜರಾಗದಿದ್ದರೆ, ಯಾವುದೇ ಕ್ಷಣದಲ್ಲೂ ಬಂಧಿಸುವ ಸಾಧ್ಯತೆಗಳಿವೆ ಎಂದು ಪೊಲೀಸ್‌ ಮೂಲಗಳಿಂದ ತಿಳಿದುಬಂದಿದೆ.

ಗುಲಾಬ್‌ ಜಾಮೂನ್‌ ಅಂತ ನಂಬರ್‌ ಸೇವ್‌:
6 ತಿಂಗಳ ಹಿಂದೆಯಷ್ಟೇ ಶ್ವೇತಾ, ವರ್ತೂರು ಪ್ರಕಾಶ್‌ಗೆ ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದಳು, ತಾನೇ ರಿಕ್ವೆಸ್ಟ್‌ ಕಳಿಸಿ ಸ್ನೇಹದ ಬಲೆಗೆ ಬೀಳಿಸಿಕೊಂಡಿದ್ದಳು. ಬಳಿಕ ಮೆಸೆಂಜರ್‌ನಲ್ಲಿ ಚಾಟಿಂಗ್‌ ಶುರುವಾಗಿ ಇಬ್ಬರೂ ಮೊಬೈಲ್‌ನಂಬರ್‌ ವಿನಿಮಯ ಮಾಡಿಕೊಂಡಿದ್ದಾರೆ. ಬಳಿಕ ವಾಟ್ಸಪ್‌ನಲ್ಲೂ ಚಾಟಿಂಗ್‌ ಮುಂದುವರಿದಿದೆ. ಶ್ವೇತಾ ವರ್ತೂರು ಪ್ರಕಾಶ್‌ ನಂಬರ್‌ ಅನ್ನು ಗುಲಾಬ್‌ ಜಾಮೂನ್‌ ಎಂಬ ಹೆಸರಿನಿಂದ ಸೇವ್‌ ಮಾಡಿಕೊಂಡಿದ್ದಳು ಅನ್ನೋ ವಿಚಾರವೂ ತನಿಖೆ ವೇಳೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಚಿನ್ನದಂಗಡಿ ಮಾಲೀಕರಿಗೆ ಮಹಿಳೆಯಿಂದ ವಂಚನೆ – ಇಂದು ವರ್ತೂರ್ ಪ್ರಕಾಶ್ ವಿಚಾರಣೆಗೆ ಹಾಜರು

ಆತ್ಮೀಯತೆ ಮುಂದುವರಿದ ನಂತರ ಶ್ವೇತಾ ಬಳಿಯೇ ವರ್ತೂರು ಪ್ರಕಾಶ್‌ 10 ಲಕ್ಷ ರೂ. ಸಾಲ ಪಡೆದುಕೊಂಡಿದ್ದಾರೆ ಅನ್ನೋ ಆರೋಪವೂ ಶ್ವೇತಾಳಿಂದ ಕೇಳಿಬಂದಿದೆ. ಮೂರು ಬ್ರೇಸ್ಲೆಟ್‌, ಒಂದು ಉಂಗುರ ಸೇರಿ, ಬ್ಯಾಂಕ್‌ ಖಾತೆಗೆ 10 ಲಕ್ಷ ರೂ. ಹಾಕಿಸಿಕೊಂಡಿದ್ದರಂತೆ, ತಿರುಪತಿಗೆ ಹೋಗಲು ಶ್ವೇತಾ ಜೊತೆ ಟಿಕೆಟ್‌ ಕೂಡ ಬುಕ್‌ ಮಾಡಿದ್ದರಂತೆ, ಟಿಕೆಟ್‌ ಬುಕ್‌ ಮಾಡಿದ್ದ ಫೋಟೋ ಸಹ ಲಭ್ಯವಾಗಿದೆ. ಹೀಗೆ ಇಬ್ಬರೂ ಸೇರಿ ಕೋಟ್ಯಂತರ ರೂ. ವಂಚನೆ ಮಾಡಿದ್ದಾರೆ ಎಂಬ ಆರೋಪ ಬಹಿರಂಗವಾಗಿದೆ. ಇದನ್ನೂ ಓದಿ: ಬೆಂಗಳೂರು – ತುಮಕೂರು ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ನಿಯಂತ್ರಣಕ್ಕೆ ಬಿಬಿಎಂಪಿ ಪ್ಲ್ಯಾನ್‌

Share This Article