ವಾರಣಾಸಿಯಲ್ಲಿ EVM ಕಳವು: ಅಖಿಲೇಶ್‌ ಯಾದವ್‌ ಗಂಭೀರ ಆರೋಪ

Public TV
1 Min Read

ಲಕ್ನೋ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮತ ಎಣಿಕೆಗೆ ಎರಡು ದಿನ ಬಾಕಿ ಇರುವಾಗಲೇ ವಾರಣಾಸಿಯ ಮತ ಎಣಿಕೆ ಕೇಂದ್ರದಿಂದ ಇವಿಎಂಗಳನ್ನು ಸ್ಥಳೀಯ ಅಭ್ಯರ್ಥಿಗಳಿಗೆ ಮಾಹಿತಿ ನೀಡದೆಯೇ ಸಾಗಿಸಲಾಗುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಗಂಭೀರ ಆರೋಪ ಮಾಡಿದ್ದಾರೆ.

ಮತ ಎಣಿಕೆ ಕೇಂದ್ರದಿಂದ ಇವಿಎಂ ತೆಗೆದುಕೊಂಡು ಹೋಗಿರುವ ಸಂಬಂಧ ವೀಡಿಯೋ ಎಲ್ಲೆಡೆ ವೈರಲ್‌ ಆಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಅಖಿಲೇಶ್‌ ಯಾದವ್‌, ವಾರಣಾಸಿಯ ಡಿಎಂ ಸ್ಥಳೀಯ ಅಭ್ಯರ್ಥಿಗಳಿಗೆ ಮಾಹಿತಿ ನೀಡದೆಯೇ ಮತಗಟ್ಟೆಗಳಿಂದ ಇವಿಎಂ ಸಾಗಿಸುತ್ತಿದ್ದಾರೆ. ಚುನಾವಣಾ ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೈಲಾದಷ್ಟು ಹೋರಾಡಿದ್ದೇವೆ, ಫಲಿತಾಂಶವನ್ನು ಕಾದು ನೋಡುತ್ತೇವೆ: ಪ್ರಿಯಾಂಕಾ ಗಾಂಧಿ

ಇವಿಎಂಗಳನ್ನು ಈ ರೀತಿ ಸಾಗಿಸುತ್ತಿದ್ದರೆ ನಾವು ಎಚ್ಚರದಿಂದಿರಬೇಕು. ಇದು ಕಳ್ಳತನ. ನಮ್ಮ ಮತಗಳನ್ನು ಉಳಿಸಬೇಕು. ನಾವು ಇಂತಹ ಘಟನೆಗಳ ವಿರುದ್ಧ ನ್ಯಾಯಾಲಯದ ಮೊರೆ ಹೋಗಬಹುದು. ಆದರೆ ಅದಕ್ಕೂ ಮೊದಲು ಪ್ರಜಾಪ್ರಭುತ್ವವನ್ನು ಉಳಿಸಲು ನಾವು ಜನರಲ್ಲಿ ಮನವಿ ಮಾಡಲು ಬಯಸುತ್ತೇವೆ ಎಂದು ಹೇಳಿದ್ದಾರೆ.

ಅಯೋಧ್ಯೆಯಲ್ಲಿ ಸಮಾಜವಾದಿ ಪಕ್ಷ ಗೆಲ್ಲುತ್ತದೆ. ಹೀಗಾಗಿ ಬಿಜೆಪಿಗೆ ಭಯವಾಗಿದೆ. ಚುನಾವಣಾ ಆಯೋಗದ ಅಧಿಕಾರಿಗಳು ಇವಿಎಂಗಳನ್ನು ಟ್ಯಾಂಪರಿಂಗ್‌ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ಗೆಲ್ಲುತ್ತದೆ ಎಂಬ ಗ್ರಹಿಕೆಯನ್ನು ಸೃಷ್ಟಿಸಲು ಬಯಸುತ್ತವೆ. ಇದು ಪ್ರಜಾಪ್ರಭುತ್ವದ ಹೋರಾಟವಾಗಿದೆ. ಅಭ್ಯರ್ಥಿಗಳಿಗೆ ಮಾಹಿತಿ ನೀಡದೆಯೇ ಇವಿಎಂ ಸಾಗಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಹಿಳೆಯರು ತಮ್ಮ ಶಕ್ತಿಯಿಂದ ಸಮಾಜವನ್ನು ಪರಿವರ್ತಿಸಬಲ್ಲರು: ರಾಹುಲ್

ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳಿಗೆ ಏಳು ಹಂತಗಳಲ್ಲಿ ಚುನಾವಣೆ ನಡೆದಿದೆ. ಮಾ.7ರಂದು ಕೊನೆಯ ಹಂತದ ಮತದಾನ ನಡೆಯಿತು. ಮಾ.10 ರಂದು ಚುನಾವಣೆ ಫಲಿತಾಂಶ ಹೊರಬೀಳಲಿದೆ. ಈ ಬಾರಿ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಸಮಾಜವಾದಿ ಪಕ್ಷ ಪ್ರಬಲ ಎದುರಾಳಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *