ಐದಾರು ವರ್ಷಗಳಿಂದ ಒಣಗಿದ್ದ ಚಾನಲ್‍ಗೆ ವಿವಿ ಸಾಗರ ಜಲಾಶಯದಿಂದ ನೀರು

Public TV
2 Min Read

– ರೈತರ ಮೊಗದಲ್ಲಿ ಮಂದಹಾಸ

ಚಿತ್ರದುರ್ಗ: ಕಳೆದ ಐದಾರು ವರ್ಷಗಳಿಂದ ಮಳೆಯಾಗಿಲ್ಲ ಅಂತ ನಿಲ್ಲಿಸಲಾಗಿದ್ದ ವಾಣಿವಿಲಾಸ ಸಾಗರ ಜಲಾಶಯದ ನೀರನ್ನು ಇಂದು ಚಾನಲ್ ಮೂಲಕ ಹೊರಬಿಡಲಾಯಿತು. ಹೀಗಾಗಿ ನೀರಿಲ್ಲದೇ ವಿನಾಶದ ಅಂಚಿನಲ್ಲಿದ್ದ ಬರದನಾಡಿನ ಜಮೀನುಗಳ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಹಿರಿಯೂರು ಕ್ಷೇತ್ರದ ಶಾಸಕಿ ಪೂರ್ಣಿಮಾ ಹಾಗೂ ಜಿಲ್ಲೆಯ ಮುರಘಾ ಶ್ರೀಗಳು ಸೇರಿದಂತೆ ವಿವಿಧ ಮಠಗಳ ಮಠಾಧೀಶರು ಇದಕ್ಕೂ ಮುನ್ನ ಜಲಾಶಯದ ಆವರಣದಲ್ಲಿರುವ ಕಣಿವೆ ಮಾರಮ್ಮ ದೇಗುಲದ ಬಳಿ ಹೋಮಹವನ, ವಿಶೇಷ ಪೂಜಾಕಾರ್ಯ ಹಾಗೂ ಗಂಗಾ ಪೂಜೆ ಸಲ್ಲಿಸಿದ್ದಾರೆ. ನಂತರ ಎಲ್ಲರೂ ಸೇರಿ ಚಾನಲ್ ಮೂಲಕ ನೀರು ಹರಿಸಲು ಜಾಕ್‍ವಾಲ್ ಎತ್ತಿದರು.

ಹೀಗಾಗಿ ಸುಮಾರು ಐದಾರು ವರ್ಷಗಳಿಂದ ಖಾಲಿಯಾಗಿ ಒಣಗಿ ಹೋಗಿದ್ದ ಚಾನಲ್‍ಗಳಲ್ಲಿ ರಭಸವಾಗಿ ನೀರು ಹರಿಯುತ್ತಿದೆ. ಕಳೆದ ಐದಾರು ವರ್ಷಗಳಿಂದ ಮಳೆ ಇಲ್ಲದೇ ಈ ಭಾಗದ ಕೊಳವೆ ಬಾವಿಗಳೆಲ್ಲ ಬತ್ತಿ ಬರಿದಾಗಿದ್ದವು. ವಿವಿಸಾಗರ ಜಲಾಶಯದಲ್ಲಿನ ನೀರು ಸಹ ಡೆಡ್ ಸ್ಟೋರೇಜ್ ಮಟ್ಟಕ್ಕೆ ತಲುಪಿತ್ತು. ಹೀಗಾಗಿ ಎಚ್ಚೆತ್ತ ಜಿಲ್ಲಾಡಳಿತ ಕಳೆದ ನಾಲ್ಕು ವರ್ಷದ ಹಿಂದೆಯೇ ಚಾನಲ್ ಮೂಲಕ ನೀರು ಹರಿಯದಂತೆ ನಿಲ್ಲಿಸಲಾಗಿತ್ತು.

ಪರಿಣಾಮ ಹಿರಿಯೂರು ತಾಲೂಕಿನ ರೈತರ ತೋಟಗಳಲ್ಲಿದ್ದ ಅಡಿಕೆ, ತೆಂಗು, ದಾಳಿಂಬೆ ಬೆಳೆಗಳು ಒಣಗಿ ರೈತರು ಕಂಗಾಲಾಗಿದ್ದರು. ಹೀಗಾಗಿ ರೈತರು ನೀರು ಬಿಟ್ಟು ರೈತರನ್ನು ಉಳಿಸಿ ಅಂತ ಹೋರಾಟ ಕೂಡ ನಡೆಸಿದ್ದರು. ರೈತರ ಕಷ್ಟ ನೋಡಲಾರದ ವರುಣ ಕೃಪೆತೋರಿ ಉತ್ತಮಮಳೆಯಾದ ಹಿನ್ನೆಲೆಯಲ್ಲಿ 101.65 ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಹೀಗಾಗಿ ಇಂದು ಜಿಲ್ಲೆಯ ಮಠಾಧೀಶರ ನೇತೃತ್ವದಲ್ಲಿ ಹೋಮಹವನ ನಡೆಸಿ ಚಾನಲ್ ಮೂಲಕ ರೈತರ ಬಳಕೆಗಾಗಿ ನೀರು ಹರಿಸಲಾಯಿತು.

ರೈತರ ತೋಟಗಳಿಗೆ ಚಾನಲ್ ಮೂಲಕ ವಿವಿ ಸಾಗರ ಜಲಾಶಯದ 1.21 ಟಿ.ಎಂಸಿ ನೀರನ್ನು ಇಂದು ಹರಿಸಲಾಗಿದೆ. ಅಲ್ಲದೇ ಎಡನಾಲೆ ಹಾಗೂ ಬಲನಾಲೆ ಎರಡರಲ್ಲೂ ನೀರು ಹರಿಯುತ್ತಿದ್ದು, ಒಂದು ಹೊಸ ಫಾಲ್ಸ್ ಧುಮುಕುವಂತೆ ಹರಿಯುತ್ತಿರುವ ಚಾನಲ್ ನೋಡಲು ಜನಸಾಗರವೇ ವಿವಿಸಾಗರದತ್ತ ಹರಿದು ಬರುತ್ತಿದೆ.

ಈ ನೀರು ಹಿರಿಯೂರು ತಾಲೂಕಿನ ಜಾನುವಾರುಗಳಿಗೆ ಕುಡಿಯುವ ನೀರು, ಅಚ್ಚುಕಟ್ಟು ಪ್ರದೇಶದ ರೈತರ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಹಾಗೂ 38 ಗ್ರಾಮಗಳ ಜನತೆಗೆ ತುಂಬಾ ಅನುಕೂಲವಾಗಲಿದೆ ಎಂದು ಶಾಸಕಿ ಪೂರ್ಣಿಮಾ ಪ್ರತಿಕ್ರಿಯಿಸಿದರು.

Share This Article
Leave a Comment

Leave a Reply

Your email address will not be published. Required fields are marked *