ವಾಲ್ಮೀಕಿ ಹಗರಣ – ನಾಗೇಂದ್ರಗೆ ಸೇರಿದ 8.07 ಕೋಟಿ ಮೌಲ್ಯದ ಸ್ಥಿರಾಸ್ತಿ ಮುಟ್ಟುಗೋಲು

2 Min Read

ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ‌ ನಿಗಮದ ಹಣ (Valmiki Board Scam) ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಮಾಜಿ‌ ಸಚಿವ ಬಿ.ನಾಗೇಂದ್ರ‌ಗೆ (B Nagendra) ಸೇರಿದ 8.07 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಯನ್ನು ಜಪ್ತಿ ಮಾಡಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (PMLA) ಸೆಕ್ಷನ್​ಗಳಡಿಯಲ್ಲಿ ವಸತಿ ಮತ್ತು ವಾಣಿಜ್ಯ ಆಸ್ತಿ ಸೇರಿದಂತೆ 4 ಸ್ಥಿರಾಸ್ತಿ ಮುಟ್ಟುಗೋಲು ಹಾಕಿದೆ. ಈ ಆಸ್ತಿಗಳನ್ನು PMLA ಅಡಿಯಲ್ಲಿ ‘ಅಪರಾಧದ ಆದಾಯ’ ಎಂದು ಇಡಿ ಕರೆದಿದೆ.

ಅಪರಾಧದ ಉಳಿದ ಆದಾಯವನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಅವುಗಳಿಗೆ ಬಿ ನಾಗೇಂದ್ರ ಈಗಾಗಲೇ ಬೇರೆ ವ್ಯವಸ್ಥೆ ಮಾಡಿರಬಹುದು ಅಥವಾ ಮರೆಮಾಡಿರಬಹುದು ಎಂದು ಇಡಿ ಹೇಳಿದೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ ಖಾತೆಗಳಿಂದ ಕೋಟ್ಯಂತರ ರೂಪಾಯಿ ಹಣವನ್ನು ನಕಲಿ ಖಾತೆಗಳಿಗೆ ವರ್ಗಾವಣೆ ಮಾಡಲಾಗಿತ್ತು. ನಂತರ ಶೆಲ್ ಘಟಕಗಳ ಮೂಲಕ ಅಕ್ರಮವಾಗಿ ಇತರೆಡೆ ವರ್ಗಾಯಿಸಲಾಗಿತ್ತು ಎಂಬ ಆರೋಪ ಕೇಳಿ ಬಂದಿದೆ.  ಇದನ್ನೂ ಓದಿ: ಶಬರಿಮಲೆ ಚಿನ್ನ ಕಳ್ಳತನ ಕೇಸ್‌ – ಬಳ್ಳಾರಿಯ ಆಭರಣ ವ್ಯಾಪಾರಿ ಅರೆಸ್ಟ್‌

 

ಏನಿದು ಪ್ರಕರಣ?
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರನ್‌ (Chandrashekaran) ಶಿವಮೊಗ್ಗದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಬರೆದಿದ್ದ ಡೆತ್‌ನೋಟ್‌ನಲ್ಲಿ ಮೂವರು ಹೆಸರು ಹಾಗೂ ಬಹುಕೋಟಿ ಹಗರಣ ನಡೆದಿರುವ ಬಗ್ಗೆ ಉಲ್ಲೇಖಿಸಿದ್ದರು.

ಈ ಬೆನ್ನಲ್ಲೇ ಬ್ಯಾಂಕ್‌ನಿಂದ 94 ಕೋಟಿ ರೂ. ಅಕ್ರಮವಾಗಿ ವರ್ಗಾವಣೆಯಾಗಿದೆ. ಹಣ ವರ್ಗಾವಣೆಯಾದ ಬಗ್ಗೆ ಯಾವುದೇ ಮೇಲ್‌, ಮೆಸೇಜ್‌ ಬಂದಿಲ್ಲ. ಬ್ಯಾಂಕ್‌ ಸಿಬ್ಬಂದಿಯಿಂದಲೇ ನಕಲಿ ದಾಖಲೆ ಸೃಷ್ಟಿಸಿ ವಂಚನೆ ಎಸಗಿದ್ದಾರೆ ಎಂದು ಆರೋಪಿಸಿ ನಿಗಮದ ಪ್ರಧಾನ ವ್ಯವಸ್ಥಾಪಕ ರಾಜಶೇಖರ್ ಅವರು ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಬ್ಯಾಕ್‌ನ 6 ಮಂದಿ ಸಿಬ್ಬಂದಿ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.

ಮಾಜಿ ಸಚಿವ ಹಾಗೂ ಕಾಂಗ್ರೆಸ್‌ ಶಾಸಕ ನಾಗೇಂದ್ರ ನಿಗಮದ ಅಧ್ಯಕ್ಷರಾದ, ಶಾಸಕ ಬಸನಗೌಡ ದದ್ದಲ್‌ ಅವರು ಈ ಹಣವನ್ನು ಲೋಕಸಭಾ ಚುನಾವಣೆಗೆ ಬಳಕೆ ಮಾಡಿರುವ ಬಗ್ಗೆ ಆರೋಪ ಬಂದಿದೆ. ಈ ಹಗರಣದ ಬಗ್ಗೆ ತನಿಖೆ ನಡೆಸಿದ್ದ ಎಸ್‌ಐಟಿ ನಾಗೇಂದ್ರ ಮತ್ತು ದದ್ದಲ್‌ ಅವರಿಗೆ ಕ್ಲಿನ್‌ ಚಿಟ್‌ ನೀಡಿತ್ತು. ಆದರೆ ಕರ್ನಾಟಕ ಹೈಕೋರ್ಟ್‌ ಎಸ್‌ಐಟಿಯನ್ನು ರದ್ದುಗೊಳಿಸಿ ಸಿಬಿಐ ತನಿಖೆಗೆ ಆದೇಶಿಸಿತ್ತು.

Share This Article