ವಾಲ್ಮೀಕಿ ಹಗರಣ – ಬಳ್ಳಾರಿಯಲ್ಲಿ ನಾಗೇಂದ್ರ ಆಪ್ತರಿಗೆ ಡ್ರಿಲ್‌, 2 ಬ್ಯಾಗ್‌ ದಾಖಲೆಯೊಂದಿಗೆ ತೆರಳಿದ ಅಧಿಕಾರಿಗಳು

Public TV
2 Min Read

ಬಳ್ಳಾರಿ: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿನ (Karnataka Maharshi Valmiki Scheduled Tribe Development Corporation Ltd) 187 ಕೋಟಿ ರೂ. ಹಗರಣಕ್ಕೆ ಸಂಬಂಧಿಸಿದಂತೆ ಗಣಿನಾಡು ಬಳ್ಳಾರಿಯಲ್ಲಿ (Ballari) ಮಾಜಿ ಸಚಿವ ಬಿ. ನಾಗೇಂದ್ರರ (B Nagendra) ಮನೆ ಮೇಲೆ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಬುಧವಾರ ಇಡೀ ದಿನ ದಾಳಿ ನಡೆಸಿ ಮಹತ್ವದ ದಾಖಲೆ ಸಂಗ್ರಹಿಸಿದರು. ಅಲ್ಲದೇ ನಾಗೇಂದ್ರ ಆಪ್ತರನ್ನ ಕರೆಸಿ ಗಂಟೆಗಳ ಕಾಲ ಡ್ರಿಲ್ ಮಾಡಿದರು. ನಿರಂತರ 12 ಗಂಟೆಗಳ ಕಾಲ ತಲಾಶ್ ನಡೆಸಿದ ಇಡಿ ಅಧಿಕಾರಿಗಳು ದಾಳಿ ಮುಗಿಸಿ, ಎರಡು ಬ್ಯಾಗ್ ದಾಖಲೆಗಳೊಂದಿಗೆ ತೆರಳಿದ್ದಾರೆ.

ಇಡಿ ಅಧಿಕಾರಿಗಳು ನಿನ್ನೆ ಇಡೀ ದಿನ ಬಳ್ಳಾರಿಯ ನೆಹರು ಕಾಲೋನಿಯಲ್ಲಿನ ಮಾಜಿ ಸಚಿವ ನಾಗೇಂದ್ರ ಮನೆ ಹಾಗೂ ಕಚೇರಿಯಲ್ಲಿ ತಲಾಶ್ ನಡೆಸಿದ್ದಾರೆ. ಇದನ್ನೂ ಓದಿ: ಭಗವದ್ಗೀತೆಯನ್ನು ಹಿಡಿದುಕೊಂಡು ಪ್ರಮಾಣವಚನ ಸ್ವೀಕರಿಸಿದ ಭಾರತೀಯ ಮೂಲದ UK ಸಂಸದೆ

 

ದಾಳಿ ವೇಳೆ ನಾಗೇಂದ್ರ ಆಪ್ತ ಸಹಾಯಕ ಚೇತನ್‌ ಅವರನ್ನು ಇಡಿ ತೀವ್ರ ವಿಚಾರಣೆ ನಡೆಸಿದೆ. ಮನೆಯಲ್ಲಿದ್ದ ದಾಖಲೆಗಳು, ಕಂಪ್ಯೂಟರ್‌ನಲ್ಲಿದ್ದ ದಾಖಲೆ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದೆ. ಅಷ್ಟೇ ಅಲ್ಲದೇ ಕಚೇರಿಯಲ್ಲಿದ್ದ ಸಿಸಿ ಕ್ಯಾಮರಾಗಳ ದೃಶ್ಯಗಳನ್ನು ಪರಿಶೀಲನೆ ನಡೆಸಿ, ಹಾರ್ಡ್‌ ಡಿಸ್ಕ್‌ ವಶ ಪಡಿಸಿಕೊಂಡಿದೆ. ನಾಗೇಂದ್ರ ಆಸ್ತಿ ವಿವರವನ್ನ ಪಡೆದು, ಹೊಸದಾಗಿ ಖರೀದಿ ಮಾಡಿದ ಮನೆ, ಜಮೀನು, ಕಾರಿನ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ಬೆಳಗ್ಗೆಯಿಂದ ನಾಗೇಂದ್ರ ಆಪ್ತ ಸಹಾಯಕ ಚೇತನ್ ವಿಚಾರಣೆ ನಡೆಸಿದ್ದ ಇಡಿ ಮಧ್ಯಾಹ್ನ ನಾಗೇಂದ್ರ ಮಾಧ್ಯಮ ಸಲಹೆಗಾರ ನಾಗರಾಜರನ್ನು ಕಚೇರಿಗೆ ಕರೆತಂದು ಸತತ ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿದೆ. ನಾಗೇಂದ್ರ ಅವರ ಇತ್ತೀಚಿನ ವ್ಯವಹಾರಗಳು, ಆಸ್ತಿ ಖರೀದಿ ವಿಚಾರ ಹಾಗೂ ಕೆಲ ದಾಖಲೆಗಳ ಮಾಹಿತಿ ಪಡೆದಿದೆ.

 

ನಾಗೇಂದ್ರರ ಆಪ್ತರ ಅಕೌಂಟ್‌ಗಳಿಗೆ ಹೈದರಾಬಾದ್‌ನಿಂದ ಸುಮಾರು 20 ಕೋಟಿ ರೂ. ಹಣ ಬಂದಿದೆ ಎನ್ನುವ ಶಂಕೆ ಇದೆ. ಜೊತೆಗೆ ಈ ಹಣ ಬಂಗಾರದ ಅಂಗಡಿ ಮಾಲೀಕರಿಗೆ, ಮದ್ಯದ ಅಂಗಡಿ ಮಾಲೀಕರ ಅಕೌಂಟ್ ಹಾಕಲಾಗಿದೆ ಎನ್ನಲಾಗುತ್ತಿದೆ. ಹೀಗಾಗಿ ಎಲ್ಲ ಆಯಾಮಗಳಲ್ಲೂ ಇಡಿ ಅಧಿಕಾರಿಗಳು ತೀವ್ರ ತನಿಖೆ ನಡೆಸಿದ್ದಾರೆ.

Share This Article