ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿಯದ್ದು ಆತ್ಮಹತ್ಯೆ ಅಲ್ಲ, ಕೊಲೆ – ಆರ್. ಅಶೋಕ್

Public TV
2 Min Read

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ‌ ನಿಗಮದ (Karnataka Maharshi Valmiki Scheduled Tribes) ಅಧಿಕಾರಿ ಆತ್ಮಹತ್ಯೆ ಪ್ರಕರಣ ಹಿನ್ನೆಲೆ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಕಿಡಿ ಕಾರಿದ್ದಾರೆ. ಅಧಿಕಾರಿಯದ್ದು ಆತ್ಮಹತ್ಯೆಯಲ್ಲ, ಕೊಲೆ. ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಚಿವ ನಾಗೇಂದ್ರರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ (R Ashoka) ಆಗ್ರಹಿಸಿದ್ದಾರೆ.

ತಮ್ಮ ಎಕ್ಸ್ ಖಾತೆಯಲ್ಲಿ ಸರ್ಕಾರದ ವಿರುದ್ಧ ಕಿಡಿ ಕಾರಿರುವ ಅಶೋಕ್, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ 187 ಕೋಟಿ ರೂ. ಮೌಲ್ಯದ ಬೃಹತ್ ಭ್ರಷ್ಟಾಚಾರವನ್ನ ಅಧಿಕಾರಿಯ ತಲೆಗೆ ಕಟ್ಟಲು ಹೋಗಿ ಕಿರುಕುಳ ನೀಡಿ ಆತ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗುವಂತೆ ಮಾಡಿದೆ ಈ ಕೊಲೆಗಡುಕ ಕಾಂಗ್ರೆಸ್ ಸರ್ಕಾರ (Congress Govt). ಸಿಎಂ ಅವರೇ ಇದು ಆತ್ಮಹತ್ಯೆ ಅಲ್ಲ, ಕೊಲೆ. ಈ ಕೊಲೆಗೆ ಹೊಣೆ ಯಾರು? ನಿಮ್ಮ ಸರ್ಕಾರದ ಕಮಿಷನ್ ದಾಹಕ್ಕೆ ಇನ್ನೆಷ್ಟು ಜೀವಗಳು ಬಲಿಯಾಗಬೇಕು‌? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಹನುಮಾನ್ ಚಾಲೀಸಾ ಹಾಕಲು ಅನುಮತಿ ಇಲ್ಲ, ರಸ್ತೆಯಲ್ಲಿ ನಮಾಜ್‌ ಮಾಡಲು ಅನುಮತಿ ಬೇಕಿಲ್ಲ: ಬಿಜೆಪಿ ಕಿಡಿ

ಇನ್ನೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಬೇಕಾದ 11,000 ಕೋಟಿ ರೂ. ಎಸ್‌ಸಿಎಸ್‌ಪಿ/ಟಿಎಸ್‌ಪಿ ಹಣವನ್ನ ಗ್ಯಾರಂಟಿ ಹೆಸರಿನಲ್ಲಿ ಲಪಟಾಯಿಸಿ ಈಗಾಗಲೇ ದಲಿತರ ಹೊಟ್ಟೆಗೆ ಹೊಡೆಯುವ ಪಾಪದ ಕೆಲಸ ಮಾಡಿದ್ದೀರಿ. ಈಗ ಅಭಿವೃದ್ಧಿ ನಿಗಮದಲ್ಲಿ 85 ಕೋಟಿ ರೂ. ಭ್ರಷ್ಟಾಚಾರ (Corruption) ನಡೆಸಿ ಒಬ್ಬ ಅಧಿಕಾರಿಯ ಸಾವಿಗೆ ಕಾರಣರಾಗಿದ್ದೀರಿ. ಈ ಕೂಡಲೇ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಚಿವರನ್ನ ಸಂಪುಟದಿಂದ ವಜಾ ಮಾಡಬೇಕು. ಈ ಪ್ರಕರಣದ ತನಿಖೆಗೆ ಆದೇಶ ಮಾಡಿ. ತಪ್ಪಿತಸ್ಥರಿಗೆ ಶಿಕ್ಷೆ ನೀಡಿ ಆತ್ಮಹತ್ಯೆಗೆ ಶರಣಾದ ಅಧಿಕಾರಿಯ ಕುಟುಂಬಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಿ ಎಂದು ಒತ್ತಾಯಿಸಿದ್ದಾರೆ.

ಎಸ್ಐಟಿ ರಚಿಸಿ ಕೈತೊಳೆದುಕೊಳ್ಳಬೇಡಿ:
ಬಿಜೆಪಿ ಶಾಸಕ ಸುನೀಲ್ ಕುಮಾರ್ (Sunil Kumar) ಅವರೂ ಸಹ ಅಧಿಕಾರಿ ಆತ್ಮಹತ್ಯೆ ಬಗ್ಗೆ ಎಕ್ಸ್‌ ನಲ್ಲಿ ಶಂಕೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪ್ರಜಾಪ್ರಭುತ್ವ, ಜಾತ್ಯತೀತ ತತ್ವದಲ್ಲಿ ದೇಶದ ಅಭಿವೃದ್ಧಿಗೆ ಅಡಿಪಾಯ ಹಾಕಿದ್ದು ನೆಹರೂ – ಸಿದ್ದರಾಮಯ್ಯ

ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿಯೊಬ್ಬರು ಶಿವಮೊಗ್ಗದಲ್ಲಿ ಶಂಕಾಸ್ಪದ ರೀತಿಯಲ್ಲಿ ಸಾವಿಗೆ ಶರಣಾಗಿದ್ದಾರೆ. ಈ ಸಾವಿನ ಸುತ್ತ ಭ್ರಷ್ಟಾಚಾರದ ಹುತ್ತ ಕಟ್ಟಿದ ಅನುಮಾನ ಬರುತ್ತಿದೆ. ಇಲಾಖೆಯಲ್ಲಿನ ಕಾಣದ ಕೈಗಳ ಕರಾಮತ್ತು ಯಾವುದೆಂಬುದು ಮಹದೇವನೇ ಬಲ್ಲ. ಈ ಬಗ್ಗೆ ಸಮಗ್ರ ತನಿಖೆ ನಡೆಯಲಿ. ಸಾಕ್ಷ್ಯ ನಾಶ ಮಾಡಿ ಎಸ್‌ಐಟಿ ತನಿಖೆ ಎಂಬ ರಾಗವನ್ನು ಸರ್ಕಾರ ಹಾಡದಿರಲಿ ಎಂದು ಸುನೀಲ್ ಕುಮಾರ್ ಎಂದು ಸಲಹೆ ನೀಡಿದ್ದಾರೆ.

Share This Article