ಕಗ್ಗತ್ತಲ ದಾರಿಗೆ ಬೆಳಕು ಸೋಕಿಸಿ ಹೋದವಳು!

Public TV
2 Min Read

ಪ್ರೇಮ ಎಂದರೆ ಸಂಜೆಯ ಆಕಾಶ, ಅದು ಬಣ್ಣ ಬದಲಿಸುತ್ತಲೇ ಇರುತ್ತದೆ ಅಂತಾನೆ ಕವಿ ಗಿಬ್ರಾನ್. ಹೌದು, ಪ್ರೇಮ ಎಂದರೆ ಸಂಜೆ ಆಕಾಶನೇ. ಅಲ್ಲೊಂದು ರಂಗಿದೆ, ಆಕೃತಿಯ ಗುಂಗಿದೆ, ಮನಸ್ಸಲ್ಲಿ ಮೂಡುವ ಆಕೃತಿಯು, ಅದು ಆಕಾಶದಲ್ಲಿ ಪ್ರಿಂಟಾದಂತಹ ಅನುಭವ. ಆ ಅನುಭವಕ್ಕೆ ಮತ್ತೊಂದು ಹೆಸರೇ ಪ್ರೇಮ.

ಹಾಗೆ, ಭೂಮಿಗೆ ಬರುವ ಚೈತ್ರ ಮಾಸದಂತೆ ಬದುಕಿನಲ್ಲಿ ಬರುವ ಒಂದು ಸುಂದರವಾದ ಸಮಯವೆಂದರೆ ಅದು ಪ್ರೇಮ. ಚೈತ್ರಕ್ಕೆ ಚಿಗುರಿನ ಸ್ಪರ್ಶ, ಮಾಸಕ್ಕೆ ಮಾಯದ ಬಯಕೆ ಇದೆ. ಈ ಎರಡರ ಸಮ್ಮಿಶ್ರಣಕ್ಕೆ ಏನಂತ ಹೆಸರಿಡೋಣ? ಚೈತ್ರ ಮಾಸ ಎಂದಷ್ಟೇ ಹೇಳಿ ಮುಂದೆ ಹೋಗೋಣ. ಈ ಮಾಸದಲ್ಲಿ ಅರಳಿದ ಒಂದೊಂದು ಹೂವಿಗೂ ಪ್ರೇಮದ ಹುಡಿ ತಗುಲಲಿ ಎನ್ನುವ ಪ್ರಾರ್ಥನೆಯೊಂದಿಗೆ! ಇದನ್ನೂ ಓದಿ: ಅವನಿಗೆ ನಾನು ‘ಏಪ್ರಿಲ್ ಏಂಜಲ್’…

ಬಿರು ಬೇಸಿಗೆಯಲ್ಲೂ ಹೂಗಳ ರಾಶಿಯಿಂದ ಕಂಗೊಳಿಸುವ ಭೂಮಿಯಂತೆ, ಎಲ್ಲಿಂದಲೋ ಬೀಸಿ ಬರುವ ಪ್ರೇಮದ ತಂಗಾಳಿ, ಬದುಕಿನ ಚೈತನ್ಯಕ್ಕೆ ಊರುಗೋಲಾಗಿದೆ. ಪ್ರತಿಯೊಬ್ಬನೂ ಪ್ರೇಮದ ಪರಿಶುದ್ಧವಾದ ಜ್ಯೋತಿಯಲ್ಲಿ ಹಾದು ಹೋಗಿ, ಸ್ಫುಟಗೊಂಡ ಚಿನ್ನದಂತಾಗುತ್ತಾನೆ. ಇದು ಪ್ರೇಮಕ್ಕಿರುವ ಶಕ್ತಿ.

ಪ್ರೇಮ ಎಂದರೆ, ಶುದ್ಧ, ಪ್ರೇಮ ಎಂದರೆ ತಣ್ಣಗೆ ನುಣಿಯುವ ಯುದ್ಧ. ಪ್ರೀತಿಯ ಬಗ್ಗೆ ಉಡಾಫೆಯ ಮಾತಾಡಿದವನೊಬ್ಬ ಕೊನೆಗೆ ಪ್ರೀತಿಯ ಕೊನರಿಗೆ ಕಿವಿಗೊಟ್ಟು ಕವಿಯಾಗುತ್ತಾನೆ. ಪ್ರೇಮಕ್ಕಿರುವ ಶಕ್ತಿಯೇ ಅಂಥದ್ದು, ಕಪಿಯನ್ನೂ ಕವಿಯಾಗಿಸಬಲ್ಲದು. ಬರಡು ಭೂಮಿಯಲ್ಲಿ ಒಮ್ಮೆ ಬಿದ್ದ ಮಳೆಗೆ ಹುಲ್ಲು ಚಿಗುರೊಡೆಯುವಂತೆ, ಪ್ರೇಮದ ಅಮೃತ ಬಿಂದುಗಳು ಎದೆಯ ಮೇಲೆ ಬಿದ್ದರೆ ಎಂಥವನ ಮನಸ್ಸಲ್ಲಾದರೂ ಕವಿ ತಾನಾಗಿಯೇ ಹುಟ್ಟಿಕೊಳ್ಳುತ್ತಾನೆ. ಎದೆಗೆ ಬಿದ್ದ ಅಕ್ಷರ ಇಂದಲ್ಲ, ನಾಳೆ ಫಲ ಕೊಟ್ಟಂತೆ. ಹೃದಯಕ್ಕೆ ಬಿದ್ದ ಪ್ರೇಮದ ಮಾತು, ಇಂದಲ್ಲ ನಾಳೆ ಪ್ರೇಮಿಯನ್ನಾಗಿಸಬಲ್ಲದು. ಆ ಪ್ರೇಮದ ಮಳೆಗೆ ಹರಡುವ ಮೊದಲ ಮಳೆಯ ಮಣ್ಣಿನ ಘಮವನ್ನು ಕೊನೆವರೆಗೂ ಇಟ್ಟುಕೊಳ್ಳುವುದು ಅವನ ಸಾಮರ್ಥ್ಯ.

ಇಷ್ಟೆಲ್ಲ ಬರೆಯುವ ಹೊತ್ತಿಗೆ, ನನ್ನ ಲವ್ ಎಟ್ ಫಸ್ಟ್ ಸೈಟ್ ನೆನಪಾಯ್ತು ನೋಡಿ. ಆ ದಿನ ನನ್ನ ಮೊದಲ ಕಾಲೇಜ್ ದಿನ. ತರಗತಿಯಲ್ಲಿ ಕುಳಿತಾಗ ಮೊದಲು ಕಣ್ಣಿಗೆ ಬಿದ್ದವಳು ಅವಳು. ಆಗ ಅಂದ್ಕೊಂಡಿದ್ದು ಏನ್ಗೊತ್ತಾ? ಇವಳೇನಾದ್ರೂ ನನ್ನ ಲೈಫ್ ಪಾರ್ಟ್ನರ್ ಆಗಿದ್ರೆ? ಕೊನೆಗೂ ಆಗಲಿಲ್ಲ ಬಿಡಿ. ಆದರೂ ಅವಳು ನನ್ನ ಕವಿತೆಯನ್ನು ಎಂದು ಬಿಟ್ಟು ಹೋಗದಂತೆ ಧೃಡವಾಗಿ ಉಳಿದು ಬಿಟ್ಟಿದ್ದಂತು ಸತ್ಯ. ಅವಳ ಕಣ್ಗಳ ಕೊಳದಲ್ಲಿ ಎದ್ದ `ರಂಗೋ’ಲಿಯ ಅಲೆಗಳಲ್ಲಿ ಇಂದಿಗೂ ನಾನು ಚುಕ್ಕಿಯಾಗಿ ಉಳಿದುಕೊಂಡಿದ್ದೇನೆ.

ಈಗಲೂ ನನಗೆ ಅವಳ ನೆನಪಾದರೆ, ಆ ಮೊದಲ ದಿನದ ಹೊಸತನದ ಆ ಭಾವನೆಗಳೇ ಕಾಡುತ್ತವೆ. ಎಷ್ಟರ ಮಟ್ಟಿಗೆ ಎಂದರೆ ಆ ದಿನ ತೊಟ್ಟ ಅಂಗಿಯ ಜೇಬಲ್ಲಿ ಇರಿಸಿದ್ದ ಸುರಗಿ ಇಂದಿಗೂ ತನ್ನ ಘಮವನ್ನು ಉಳಿಸಿಕೊಂಡಂತೆ. ಇದನ್ನೂ ಓದಿ: ನೈಜ ಪ್ರೀತಿ ಅಂದ-ಚಂದ ನೋಡಿ ಹುಟ್ಟಲ್ಲ..

-ಗೋಪಾಲಕೃಷ್ಣ 

Share This Article