2 ವರ್ಷಗಳ ಬಳಿಕ ಕಳೆಗಟ್ಟಲಿದೆ ಮೇಲುಕೋಟೆ ವೈರಮುಡಿ ಬ್ರಹ್ಮೋತ್ಸವ

Public TV
1 Min Read

ಮಂಡ್ಯ: ಐತಿಹಾಸಿಕ ಧಾರ್ಮಿಕ ಕ್ಷೇತ್ರ ಮೇಲುಕೋಟೆಯಲ್ಲಿ ಕಳೆದ ಎರಡು ದಿನಗಳಿಂದ ವೈರಮುಡಿ ಬ್ರಹ್ಮೋತ್ಸವ ಆರಂಭವಾಗಿದೆ. ಕೊರೊನಾ ಕಾರಣಕ್ಕೆ ಎರಡು ವರ್ಷಗಳಿಂದ ಸರಳವಾಗಿ ನಡೆದಿದ್ದ ಉತ್ಸವ ಈ ಬಾರಿ ವಿಜೃಂಭಣೆಯಿಂದ ನೆರವೇರಲಿದೆ. ಈ ಹಿನ್ನೆಲೆ ಇಡೀ ಮೇಲುಕೋಟೆ ವಿದ್ಯುತ್ ದೀಪಾಲಂಕಾರದಿಂದ ಕಂಗೊಳುಸುತ್ತಿದೆ.

ಭೂ ವೈಕುಂಠ ಎಂಬ ಪ್ರಖ್ಯಾತವಾಗಿರುವ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮೇಲುಕೋಟೆ ಹಲವು ಪುರಾಣ, ಇತಿಹಾಸಗಳನ್ನು ತನ್ನೊಡಲಲ್ಲಿ ತುಂಬಿಕೊಂಡ ಪ್ರಮುಖ ಧಾರ್ಮಿಕ ಕ್ಷೇತ್ರ. ಯಾದವಾದ್ರಿ, ನಾರಾಯಣಾದ್ರಿ, ಯತಿಶೈಲ, ತಿರುನಾರಾಯಣಪುರ, ಯದುಗಿರಿ, ದಕ್ಷಿಣ ಬದರಿ ಕ್ಷೇತ್ರ.. ಹೀಗೆ ಹಲವಾರು ಹೆಸರುಗಳಿಂದ ಕರೆಯಲ್ಪಡುವ ಮೇಲುಕೋಟೆ ದಕ್ಷಿಣ ಭಾರತದ ಬಹು ಮುಖ್ಯ ನಾಲ್ಕು ವೈಷ್ಣವ ಕ್ಷೇತ್ರಗಳಲ್ಲೊಂದು. ಇಲ್ಲಿ ವರ್ಷ ಪೂರ್ತಿ ಉತ್ಸವಗಳು ನೆರವೇರಿದ್ರೂ ಅದ್ರಲ್ಲಿ ಪ್ರಮುಖವಾದುದ್ದು ಅಂದ್ರೆ ವೈರಮುಡಿ ಬ್ರಹ್ಮೋತ್ಸವ.

ಕಳೆದ ಎರಡು ವರ್ಷಗಳಿಂದ ಮಹಾಮಾರಿ ಕೊರೊನಾದಿಂದಾಗಿ ವೈರಮುಡಿ ಜಾತ್ರಾಮಹೋತ್ಸವ ಭಕ್ತರಿಲ್ಲದೇ ಅತ್ಯಂತ ಸರಳವಾಗಿ ನೆರವೇರಿತ್ತು. ಈ ಬಾರಿ ವಿಜೃಂಭಣೆಯಿಂದ ಉತ್ಸವ ಆಚರಿಸಲು ಮಂಡ್ಯ ಜಿಲ್ಲಾಡಳಿತ ನಿರ್ಧಾರ ಮಾಡಿದ್ದು, 9 ದಿನ ನಡೆಯುವ ಐತಿಹಾಸಿಕ ಬ್ರಹ್ಮೋತ್ಸವಕ್ಕೆ ಕಳೆದ ಎರಡು ದಿನಗಳ ಹಿಂದೆ ಬೆಳಗ್ಗೆ ಗರುಡ ಧ್ವಜಾರೋಹಣದೊಂದಿಗೆ ಚಾಲನೆ ದೊರಕಿದೆ.  ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್ ಹಿಂದಿ ಚಿತ್ರಕ್ಕೆ ಕರ್ನಾಟಕದಲ್ಲಿ 100% ಟ್ಯಾಕ್ಸ್ ವಿನಾಯಿತಿ : ಬೊಮ್ಮಾಯಿ

ಮೇಲುಕೋಟೆಗೆ ದೀಪಾಲಂಕಾರ ಮಾಡಲಾಗಿದ್ದು, ಇಡೀ ಮೇಲುಕೋಟೆಯಲ್ಲಿ ವೈಕುಂಠವೇ ಧರಗೆ ಇಳಿದಂತೆ ಕಾಣುತ್ತಿದ್ದು, ಭಕ್ತರ ಅನುಕೂಲಕ್ಕಾಗಿ ಬೆಂಗಳೂರು, ಮೈಸೂರು, ಮಂಡ್ಯ, ಹಾಸನದಿಂದ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ತಮಿಳುನಾಡು, ಆಂಧ್ರ ಪ್ರದೇಶದಿಂದ ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸಿದ್ದು, ಮೇಲುಕೋಟೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಇನ್ನು 17ರಂದು ಮಹಾ ರಥೋತ್ಸವ ಹಾಗೂ 18ರಂದು ಕಲ್ಯಾಣಿಯಲ್ಲಿ ತೆಪ್ಪೋತ್ಸವ ಹಾಗೂ ಲೇಜರ್ ಶೋ ನಡೆಯಲಿದೆ.

ಒಟ್ಟಾರೆ ಈ ಬಾರಿಯ ಅದ್ದೂರಿ ಜಾತ್ರಾಮಹೋತ್ಸವಕ್ಕೆ10 ಲಕ್ಷ ಜನ ಸೇರುವ ನಿರೀಕ್ಷಿಸಲಾಗಿದ್ದು, ಭದ್ರತೆಗಾಗಿ 2 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಅಲ್ಲದೆ ಜನರ ಆರೋಗ್ಯದ ದೃಷ್ಟಿಯಿಂದ 10 ಅಂಬ್ಯುಲೆನ್ಸ್ ಹಾಗೂ ವೈದ್ಯಕೀಯ ತಂಡ ನಿಯೋಜಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *