ರಾಜಹುಲಿ ಇಲಿ, ಹೆಗ್ಗಣಗಳೊಂದಿಗೆ ಬೇಟೆಯಾಡುವುದಿಲ್ಲ: ಯತ್ನಾಳ್‌ಗೆ ವಚನಾನಂದ ಸ್ವಾಮೀಜಿ ಟಾಂಗ್

Public TV
2 Min Read

ದಾವಣಗೆರೆ: ರಾಜಹುಲಿ ರಾಜಹುಲಿಯೊಂದಿಗೆ ಬೇಟೆ ಆಡುತ್ತದೆ. ಹುಲಿ ಹುಲಿಯೊಂದಿಗೆ ಬೇಟೆ ಆಡುತ್ತದೆಯೇ ವಿನಃ ಇಲಿ ಹೆಗ್ಗಣಗಳೊಂದಿಗೆ ಬೇಟೆ ಆಡುವುದಿಲ್ಲ, ಅದರ ಬಗ್ಗೆ ಯೋಚನೆಯೂ ಮಾಡುವುದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಹರಿಹರ ಪಂಚಮಸಾಲಿ ಗುರುಪೀಠಾಧ್ಯಕ್ಷ ವಚನಾನಂದ ಸ್ವಾಮೀಜಿ ಟಾಂಗ್ ನೀಡಿದರು.

ದಾವಣಗೆರೆ ಜಿಲ್ಲೆ ಹರಿಹರದಲ್ಲಿರುವ ಪಂಚಮಸಾಲಿ ಪೀಠದಲ್ಲಿ ಮಾತನಾಡಿದ ಅವರು, ಎಲ್ಲಾ ಲಿಂಗಾಯತರು ಒಂದಾಗಬೇಕಿದೆ. ಬಸವಣ್ಣನವರ ವಿಚಾರಧಾರೆಗಳು ಪ್ರಸಾರ ಆಗಬೇಕೆಂದರೆ, ನಾವೆಲ್ಲಾ ಒಂದೇ ಕೊಡೆಯ ಅಡಿಯಲ್ಲಿ ಬರಬೇಕು. ಇದು ಸಾಧ್ಯವಾದರೆ ಮಾತ್ರ ಸಮಾಜ ಒಂದಾಗುತ್ತದೆ. ಇದಕ್ಕೆ ಎಲ್ಲಾ ಶ್ರೀಗಳು ಸ್ಪಂದಿಸುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದರು. ಇದನ್ನೂ ಓದಿ: ಸಮಾಜದಲ್ಲಿ ಬಿರುಕು ಮೂಡಿಸುತ್ತಿರುವ ಮುತಾಲಿಕ್‍ಗೆ MP ಅಥವಾ MLA ಸೀಟ್ ಫಿಕ್ಸ್ ಆದ್ರೆ ಸುಮ್ಮನಿರುತ್ತಾರೆ: ಮೊಹಮ್ಮದ್ ಖಾಲಿದ್

ಈಗಾಗಲೇ ಶಿವಮೊಗ್ಗ ಜಿಲ್ಲೆಯ ವಿಮಾನ ನಿಲ್ದಾಣಕ್ಕೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ಹೆಸರಿಡಬೇಕೆಂದು ರಾಜ್ಯ ಸರ್ಕಾರ ಸಂಪುಟದಲ್ಲಿ ನಿರ್ಧಾರ ಮಾಡಿದೆ. ಅದು ನಮಗೆ ಸ್ವಾಗತಾರ್ಹ. ಅದರೆ ಇದೀಗ ಯಡಿಯೂರಪ್ಪನವರು ವಿಮಾನ ನಿಲ್ದಾಣಕ್ಕೆ ನಮ್ಮ ಹೆಸರಿಡುವುದು ಬೇಡ ಎಂದು ಸಿಎಂ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ. ಆದ್ದರಿಂದ ಸರ್ಕಾರ ಕೆಳದಿಯ ರಾಣಿ ಚೆನ್ನಮ್ಮಳ ಹೆಸರಿಡುವಂತೆ ಮನವಿ ಮಾಡಿದರು. ಈ ಹಿಂದೆ ಬೆಂಗಳೂರಿನಲ್ಲಿ ಸಿಎಂ ಭೇಟಿಯಾಗಿ, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕೆಳದಿ ರಾಣಿ ಚೆನ್ನಮ್ಮನವರ ಹೆಸರಿಡುವಂತೆ ಮನವಿಯನ್ನು ಸಲ್ಲಿಸಲಾಯಿತು ಎಂದರು. ಇದನ್ನೂ ಓದಿ: ನೈಸ್ ಯೋಜನೆಗೆ ನೀಡಿದ್ದ 543 ಎಕರೆ ಭೂಮಿ ವಾಪಸ್ – ಆರ್.ಅಶೋಕ್

ಯಡಿಯೂರಪ್ಪನವರು ಕೇವಲ ರಾಜಹುಲಿಯಲ್ಲ, ಅವರೊಂದು ಶಕ್ತಿ. ಜನರು ಅವರನ್ನು ವ್ಯಕ್ತಿಗತವಾಗಿ ರಾಜಾಹುಲಿ ಎಂದು ಹೇಳುವುದಿಲ್ಲ. ಅದೊಂದು ಶಕ್ತಿ ಅವರಲ್ಲಿದೆ. ಅವರು ಕೇವಲ ಒಂದು ಜನಾಂಗದ ರಾಜಕಾರಣಿಯಲ್ಲ, ಅವರು ಸರ್ವಜನಾಂಗವನ್ನು ತೆಗೆದುಕೊಂಡು ಹೋಗುವ ಬಲಾಡ್ಯ ಶಕ್ತಿ. ರಾಜ್ಯದಲ್ಲಿ ಜನಪ್ರಿಯ ರಾಜಕಾರಣಿಗಳಲ್ಲಿ ಮೊದಲು ಯಡಿಯೂರಪ್ಪ ಬಳಿಕ ಸಿದ್ದರಾಮಯ್ಯ ಬರುತ್ತಾರೆ. ಯಡಿಯೂರಪ್ಪ ಸಿಎಂ ಆಗಿ ರಾಜ್ಯದಲ್ಲಿ ಮಾಡಿದ ಕೆಲಸವನ್ನು ಜನರು ಮರೆಯುವಂತಿಲ್ಲ. ಮಠಕ್ಕೆ ಅನುದಾನ ಕೊಟ್ಟಿರುವುದು, ಅವರು ತೆಗೆದುಕೊಂಡ ಕೆಲವು ನಿರ್ಣಯಗಳು, ಅಂತಹ ನಿರ್ಣಯಗಳನ್ನು ತೆಗೆದುಕೊಳ್ಳಬೇಕಾದರೆ ಎಂಟು ಎದೆ ಇರಬೇಕು. ಅದು ಯಡಿಯೂರಪ್ಪನವರಿಗೆ ಇದೆ ಎಂದು ಗುಣಗಾನ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *