ಕಾಂಗ್ರೆಸ್ ಅವಧಿಯಲ್ಲಿ ದೇಶ ಸೋತಿತ್ತು – ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಗೆದ್ದಿದೆ: ಸುನಿಲ್ ಕುಮಾರ್

Public TV
2 Min Read

ಉಡುಪಿ: ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಕಾಂಗ್ರೆಸ್ ಮುಖಂಡರು ಬಿಜೆಪಿ ವಿರುದ್ಧ ಟೀಕೆಗೆ ಬಳಸುತ್ತಿದ್ದಾರೆ. ದೇಶ, ರಾಷ್ಟ್ರಧ್ವಜದ ಕುರಿತು ಗೌರವ ಇಲ್ಲದ ಕಾಂಗ್ರೆಸ್‍ಗೆ ಬಿಜೆಪಿ ಸರ್ಕಾರವನ್ನು ಟೀಕೆ ಮಾಡಲು ಯಾವ ನೈತಿಕತೆ ಇದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ಅಮೃತ ಮಹೋತ್ಸವ ಆಚರಣೆ ಕುರಿತು ಬಿಜೆಪಿ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ವೀರಪ್ಪ ಮೊಯ್ಲಿ ಮುಖ್ಯಮಂತ್ರಿ ಆಗಿದ್ದ ವೇಳೆ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸಲು ಅವರಿಂದ ಸಾಧ್ಯವಾಗಿಲ್ಲ. ಅವತ್ತು ರಾಷ್ಟ್ರಧ್ವಜದ ಬಗ್ಗೆ ಗೌರವ ಇಟ್ಟುಕೊಳ್ಳದ ವೀರಪ್ಪ ಮೊಯ್ಲಿ ಇಂದು ಕಾಲ್ನಡಿಗೆ ಜಾಥಾ ಮಾಡುವ ಮೂಲಕ ಬಿಜೆಪಿಯನ್ನು ಟೀಕಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ – FIR ದಾಖಲಿಸಿ ಅಧಿಕೃತವಾಗಿ ತನಿಖೆ ಆರಂಭಿಸಿದ ಎನ್ಐಎ

ಕಾಂಗ್ರೆಸ್ ಅವಧಿಯಲ್ಲಿ ದೇಶ ಸೋತಿತ್ತು. ಕಾಂಗ್ರೆಸ್ ಅವಧಿಯಲ್ಲಿ ಸಾಲು ಸೋಲು 1947, 1969, 1973ರ ಯುದ್ಧದಲ್ಲಿ ನಮ್ಮ ದೇಶ ಸೋಲು ಕಂಡಿತ್ತು. ಆಗ ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿತ್ತು. ಅಂದು ಸಾಕಷ್ಟು ಭೂ ಭಾಗವನ್ನು ಶತ್ರು ರಾಷ್ಟ್ರಗಳಿಗೆ ಬಿಟ್ಟುಕೊಡಲಾಯಿತು. ದೇಶಕ್ಕೆ, ರಾಷ್ಟ್ರಧ್ವಜವನ್ನು ಗೌರವದಿಂದ ನೋಡಲು ಅರಿಯದ ಕಾಂಗ್ರೆಸ್ ಈಗ ಹೊಸ ನಾಟಕ ಆರಂಭಿಸಿದೆ. ಕಾರ್ಗಿಲ್ ಯುದ್ಧದಲ್ಲಿ ಒಂದಿಂಚು ಜಾಗವನ್ನೂ ನಾವು ಬಿಟ್ಟುಕೊಟ್ಟಿಲ್ಲ. ಆಗ ಬಿಜೆಪಿ ಅಧಿಕಾರದಲ್ಲಿತ್ತು ಎನ್ನುವುದು ಮರೆಯಬಾರದು ಎಂದರು.

ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್ ಸರ್ವಾಧಿಕಾರದ ಬಗ್ಗೆ ಮಾತನಾಡುತ್ತದೆ. ಸರ್ಜಿಕಲ್ ಸ್ಟ್ರೈಕ್ ನಡೆಸಿದ ಬಗ್ಗೆ ಸಾಕ್ಷಿ ಕೇಳಿದ ಕಾಂಗ್ರೆಸ್ ತನ್ನ ಅಧಿಕಾರವಧಿಯಲ್ಲಿ ಸಂವಿಧಾನವನ್ನು ಅನುಕೂಲಕ್ಕೆ ತಕ್ಕಂತೆ ತಿದ್ದುಪಡಿ ಮಾಡಿ ಅಗೌರವ ತೋರಿದೆ. ಕಾರ್ಕಳದಲ್ಲಿ ಬಿಜೆಪಿಯನ್ನು ಸೋಲಿಸುವುದಾಗಿ ವೀರಪ್ಪ ಮೊಯ್ಲಿ ಶಪಥ ಮಾಡಿದ್ದಾರೆ ಎಂಬುವುದನ್ನು ಮಾಧ್ಯಮದಲ್ಲಿ ನೋಡಿದ್ದೆ. 6 ಬಾರಿ ಕಾರ್ಕಳದಿಂದ ಗೆದ್ದು, ಶಾಸಕ ಮುಖ್ಯಮಂತ್ರಿಯಾದ ಮೊಯ್ಲಿ ಅವರು ಕಾರ್ಕಳದ ಅಭಿವೃದ್ಧಿ ಬಗ್ಗೆ ಅಂದು ಶಪಥ ಮಾಡಬೇಕಿತ್ತು ಎಂದರು.

ಕಾರ್ಕಳದ ಅಭಿವೃದ್ದಿ ಓಟ ನೋಡಲಾರದೇ, ಕಾರ್ಕಳ ಉತ್ಸವಕ್ಕೆ, ಎಣ್ಣೆಹೊಳೆ ಯೋಜನೆಗೆ ಹೀಗೆ ಪ್ರತಿಯೊಂದು ಕಾರ್ಯಕ್ಕೂ ಕಾಂಗ್ರೆಸ್‍ನಿಂದ ವಿರೋಧ, ಟೀಕೆ ವ್ಯಕ್ತವಾಗುತ್ತಿದೆ. ಕಾರ್ಕಳ ಅಭಿವೃದ್ಧಿಯಾಗಬೇಕು ಎಂಬ ಕಲ್ಪನೆ ಇಟ್ಟುಕೊಂಡು ಕಳೆದೊಂದು ವರ್ಷದಿಂದ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿಲ್ಲ. ಯಾವ ವೇದಿಕೆಯನ್ನೂ ರಾಜಕಾರಣಕ್ಕಾಗಿ ಅಥವಾ ಟೀಕೆಗಾಗಿ ಬಳಸಿಕೊಂಡಿಲ್ಲ. ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮವನ್ನೂ ಕಾಂಗ್ರೆಸ್ ಟೀಕೆಗೆ ಬಳಸುತ್ತಿರುವುದು ನೋಡಿ ಸುಮ್ಮನಿರೋಕೆ ಸಾಧ್ಯವಾಗಿಲ್ಲ. 100 ಸುಳ್ಳು ಹೇಳಿ ಸತ್ಯ ಮಾಡುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ. 40 ವರ್ಷ ಕಾರ್ಕಳದಲ್ಲಿ ಆಳ್ವಿಕೆ ನಡೆಸಿದ ಕಾಂಗ್ರೆಸ್ ಕಾರ್ಕಳದ ಬಗ್ಗೆ ಯೋಚನೆಯೇ ಮಾಡಿಲ್ಲ ಎಂದು ಸುನಿಲ್ ಕುಮಾರ್ ಹೇಳಿದರು. ಇದನ್ನೂ ಓದಿ: ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅವಕಾಶ ಇಲ್ಲ, ಸ್ವಾತಂತ್ರೋತ್ಸವ ಅದ್ಧೂರಿಯಾಗಿ ಆಚರಿಸುತ್ತೇವೆ: ಜಮೀರ್

ಸಭೆಯಲ್ಲಿ ಹಿರಿಯ ನ್ಯಾಯವಾದಿ ಎಂ.ಕೆ. ವಿಜಯ ಕುಮಾರ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ, ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಉಪಸ್ಥಿತರಿದ್ದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *