ಚಾಮರಾಜನಗರದಲ್ಲಿ ಹೈವೋಲ್ಟೇಜ್‌ ಫೈಟ್‌ – ಅಖಾಡದಲ್ಲಿ ಸಚಿವ ಸೋಮಣ್ಣ vs ಸಿದ್ದು ಶಿಷ್ಯ; ಯಾರಾಗ್ತಾರೆ ಪೈಲ್ವಾನ್?

Public TV
3 Min Read

ಚಾಮರಾಜನಗರ: ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜನಗರ (Chamarajanagara) ಹೈವೋಲ್ಟೇಜ್ ಕ್ಷೇತ್ರವಾಗಿ ಕಾಣಿಸಿಕೊಂಡಿದೆ. ಬಿಜೆಪಿ (BJP) ಅಭ್ಯರ್ಥಿ ವಿ.ಸೋಮಣ್ಣ (Somanna) ವರುಣಾ, ಚಾಮರಾಜನಗರ ಎರಡು ಕಡೆಯೂ ಸ್ಪರ್ಧೆ ಮಾಡಿರುವುದರಿಂದ ರಣಕಣವಾಗಿ ಚಾಮರಾಜನಗರ ಕ್ಷೇತ್ರ ಬದಲಾಗಿದೆ. ಮತ್ತೊಂದೆಡೆ ಕಾಂಗ್ರೆಸ್‌ನಿಂದ (Congress) ಮಾಜಿ ಸಿಎಂ ಸಿದ್ದರಾಮಯ್ಯ ಶಿಷ್ಯ ಪುಟ್ಟರಂಗಶೆಟ್ಟಿ (Puttarangashetty) ಅಖಾಡದಲ್ಲಿದ್ದು, ಸತತ ನಾಲ್ಕನೇ ಬಾರಿಯೂ ಗೆಲುವಿನ ಪತಾಕೆ ಹಾರಿಸಲು ಕೆಲಸ ಮಾಡುತ್ತಿದ್ದಾರೆ.

ಕಾಂಗ್ರೆಸ್‌ನ ಸಿ.ಪುಟ್ಟರಂಗಶೆಟ್ಟಿ ಮತ್ತು ಬಿಜೆಪಿಯ ವಿ.ಸೋಮಣ್ಣ ನಡುವೆ ನೇರ ಹಣಾಹಣಿ ಇದ್ದು, ಇಬ್ಬರ ನಡುವೆ ಪ್ರಬಲ ಪೈಪೋಟಿ ಇದೆ. ವಿಜಯಮಾಲೆ ಯಾರಿಗೆ ಒಲಿದರೂ ಕೂಡ ಕಡಿಮೆ ಅಂತರದಲ್ಲಿ ಅನ್ನೋ ಚರ್ಚೆ ಜೋರಾಗಿದೆ. ಇದನ್ನೂ ಓದಿ: ಇದು ಮುಸ್ಲಿಂ ಲೀಗ್ ಪ್ರಣಾಳಿಕೆ – ವೇದಿಕೆಯಲ್ಲೇ ಕಾಂಗ್ರೆಸ್ ಪ್ರಣಾಳಿಕೆ ಸುಟ್ಟ ಈಶ್ವರಪ್ಪ

ಚಾಮರಾಜನಗರ ಕ್ಷೇತ್ರದಲ್ಲಿ ಗೆದ್ದವರ ವಿವರ:
1952ರಲ್ಲಿ ಕಿಸಾನ್ ಮಜ್ದೂರ್ ಪಾರ್ಟಿಯಿಂದ ಯು.ಎಂ.ಮಾದಪ್ಪ, 1957 (ದ್ವಿಸದಸ್ಯ) ಪ್ರಜಾ ಸೋಷಿಯಲಿಸ್ಟ್ ಪಾರ್ಟಿ- ಯು.ಎಂ.ಮಾದಪ್ಪ ಹಾಗೂ ಕಾಂಗ್ರೆಸ್‌ ರಾಚಯ್ಯ. 1962- ಕಾಂಗ್ರೆಸ್‌ನಿಂದ ಎಂ.ಸಿ.ಬಸಪ್ಪ, 1967- ಕಾಂಗ್ರೆಸ್‌ನಿಂದ ಎಸ್.ಪುಟ್ಟಸ್ವಾಮಿ, 1972- ಕಾಂಗ್ರೆಸ್‌ನಿಂದ ಎಸ್.ಪುಟ್ಟಸ್ವಾಮಿ, 1978- ಜನತಾ ಪಕ್ಷದಿಂದ ಎಂ.ಸಿ.ಬಸಪ್ಪ, 1983- ಕಾಂಗ್ರೆಸ್‌ನಿಂದ ಎಸ್.ಪುಟ್ಟಸ್ವಾಮಿ, 1985- ಕಾಂಗ್ರೆಸ್‌ನಿಂದ ಎಸ್.ಪುಟ್ಟಸ್ವಾಮಿ, 1989- ವಾಟಾಳ್‌ ಪಕ್ಷದಿಂದ ವಾಟಾಳ್ ನಾಗರಾಜ್, 1994- ವಾಟಾಳ್ ನಾಗರಾಜ್, 1999- ಬಿಜೆಪಿಯಿಂದ ಸಿ.ಗುರುಸ್ವಾಮಿ, 2004- ವಾಟಾಳ್ ನಾಗರಾಜ್, 2008- ಕಾಂಗ್ರೆಸ್‌ನಿಂದ ಪುಟ್ಟರಂಗಶೆಟ್ಟಿ, 2013- ಪುಟ್ಟರಂಗಶೆಟ್ಟಿ, 2018- ಪುಟ್ಟರಂಗಶೆಟ್ಟಿ.

ಕಳೆದ ಚುನಾವಣೆಯಲ್ಲಿ ಯಾರಿಗೆ ಎಷ್ಟು ಮತ?
ಕಾಂಗ್ರೆಸ್ ಸಿ.ಪುಟ್ಟರಂಗಶೆಟ್ಟಿ: ಪಡೆದ ಮತ 75,963
ಬಿಜೆಪಿ ಮಲ್ಲಿಕಾರ್ಜುನಪ್ಪ: ಪಡೆದ ಮತ 71,050

ಜಾತಿ ಲೆಕ್ಕಾಚಾರ ಏನು?
ಕ್ಷೇತ್ರದಲ್ಲಿ ಒಟ್ಟು 2,09,494 ಜನಸಂಖ್ಯೆ ಇದೆ. ಅವರ ಪೈಕಿ 1,02,588 ಪುರುಷರು ಹಾಗೂ 1,06,891 ಮಹಿಳೆಯರಿದ್ದಾರೆ.
ವೀರಶೈವ- 49,000
ದಲಿತ- 40,500
ನಾಯಕ- 24,250
ಉಪ್ಪಾರ- 28,350
ಕುರುಬ- 18,000
ಮುಸ್ಲಿಂ- 15,000
ಕ್ರಿಶ್ಚಿಯನ್- 6,000
ಇತರೆ- 25,000

ಈ ಬಾರಿ ಕಣದಲ್ಲಿರುವ ಅಭ್ಯರ್ಥಿಗಳು
ಕಾಂಗ್ರೆಸ್- ಪುಟ್ಟರಂಗಶೆಟ್ಟಿ, ಬಿಜೆಪಿ- ವಿ.ಸೋಮಣ್ಣ, ಜೆಡಿಎಸ್- ಆಲೂರು ಮಲ್ಲು, ಬಿಎಸ್‌ಪಿ – ಹ.ರಾ.ಮಹೇಶ್, ಆಪ್- ಡಾ.ಗುರುಪ್ರಸಾದ್. ಇದನ್ನೂ ಓದಿ: ಬಜರಂಗದಳ ಅಲ್-ಖೈದಾ ಅಲ್ಲ: ಸಿದ್ದರಾಮಯ್ಯ ವಿರುದ್ಧ ಅಪ್ಪಚ್ಚು ರಂಜನ್ ಕಿಡಿ

ಅಭ್ಯರ್ಥಿಗಳ ಪ್ಲಸ್‌, ಮೈನಸ್‌ ಏನು?
ಪುಟ್ಟರಂಗಶೆಟ್ಟಿ: ಚುನಾವಣೆಯಲ್ಲಿ ಬಿಜೆಪಿ ಕೊಡುವ ಒಳೇಟಿನಿಂದಾಗಿ ಕಾಂಗ್ರೆಸ್‌ಗೆ ಹೆಚ್ಚು ವರವಾಗುತ್ತಿದೆ. ಈಗಾಗಲೇ ಹ್ಯಾಟ್ರಿಕ್ ಜಯಭೇರಿ ಗಳಿಸಿರುವ ಕಾಂಗ್ರೆಸ್ ಶಾಸಕ ಪುಟ್ಟರಂಗಶೆಟ್ಟಿ, ಕ್ಷೇತ್ರದಲ್ಲಿನ ಮತ ಬ್ಯಾಂಕ್ ಮೇಲೆ ಹಿಡಿತ ಹೊಂದಿದ್ದಾರೆ. ಉಪ್ಪಾರ ಸಮುದಾಯ, ದಲಿತ, ಅಲ್ಪಸಂಖ್ಯಾತ, ಮುಸ್ಲಿಂ, ಹಿಂದುಳಿದ ಮತ ಕಾಂಗ್ರೆಸ್ ಕೈ ಹಿಡಿದಿದ್ದು, ಈ ಬಾರಿಯೂ ಮತ ಸಿಗುವ ಭರವಸೆ ಇದೆ. ಮೈನಸ್‌ ಅಂಶ ಹೇಳುವುದಾದರೆ, ಮೂರು ಬಾರಿ ಆಯ್ಕೆಯಾದರೂ ಮೂಲ ಸೌಕರ್ಯ ಕೊರತೆ. ಅಭಿವೃದ್ಧಿ ದೃಷ್ಟಿಕೋನ ಇಲ್ಲದಿರುವ ಶಾಸಕ ಎಂಬ ಮೂದಲಿಕೆ. ಸಾವಿರಾರು ಕೋಟಿ ಅನುದಾನ ತಂದು ಕ್ಷೇತ್ರ ಅಭಿವೃದ್ಧಿ ಮಾಡಿಲ್ಲ ಎಂಬ ಅರೋಪವಿದೆ.

ವಿ.ಸೋಮಣ್ಣ: ಬಿಜೆಪಿಯ ಲಿಂಗಾಯತ ಪ್ರಬಲ ನಾಯಕ ಸ್ಪರ್ಧೆ ಮಾಡಿರುವುದು. ಲಿಂಗಾಯತ ಸಮುದಾಯದ ಹಿರಿಯ ಮುಖಂಡ. ದೂರದೃಷ್ಟಿ ಇಟ್ಟುಕೊಂಡು ಅಭಿವೃದ್ಧಿ ಮಾಡುವ ಭರವಸೆ. ಸಾವಿರಾರು ಕೋಟಿ ಅನುದಾನ ತರುವ ಚಾಕಚಕ್ಯತೆ. ಕ್ಷೇತ್ರದ ಎಲ್ಲಾ ಸಮುದಾಯದ ಮುಖಂಡರ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದೆ. ಮೈನಸ್‌ ಪಾಯಿಂಟ್‌, ಹೊರಗಿನ ಅಭ್ಯರ್ಥಿ ಅರ್ಥಾತ್ ದೂರದ ಬೆಂಗಳೂರಿನಿಂದ ಬಂದಿದ್ದು, ಕೈಗೆ ಸಿಗಲಾರರು ಎಂಬ ಆರೋಪ. ಪಕ್ಷದ ಒಳಗಿನ ಗುದ್ದಾಟ, ಇಷ್ಟು ಚುನಾವಣೆಯಲ್ಲೂ ಒಳೇಟು ಕೊಡುತ್ತಿರುವುದು ಈ ಬಾರಿಯೂ ಮುಂದುವರೆಯುವ ಸಾಧ್ಯತೆ. ಬಿಎಸ್‌ವೈ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ವರುಣದಲ್ಲಿ ಹೆಚ್ಚು ಗಮನ ಕೊಟ್ಟು ಚಾಮರಾಜನಗರದತ್ತ ಕಡಿಮೆ ಸಮಯ ಕೊಟ್ಟಿದ್ದಾರೆ. ಇದನ್ನೂ ಓದಿ: ಯತ್ನಾಳ್‌, ಪ್ರಿಯಾಂಕ್‌ ಖರ್ಗೆಗೆ ಶೋಕಾಸ್‌ ನೋಟಿಸ್‌ ಜಾರಿ

ಇಲ್ಲಿಯವರೆಗೂ ಕೂಡ ಕ್ಷೇತ್ರ ಕಾಂಗ್ರೆಸ್‌ ಭದ್ರಕೋಟೆಯಾಗಿದೆ. 9 ಬಾರಿ ಕಾಂಗ್ರೆಸ್ ಅಭ್ಯರ್ಥಿಗಳೇ ಜಯಗಳಿಸಿದ್ದಾರೆ. ಅಲ್ಲದೇ ಒಂದು ಬಾರಿಯಷ್ಟೇ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಆದರೆ ಕಳೆದ ಮೂರು ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ದೊಡ್ಡ ಅಂತರದ ಗೆಲುವು ಸಿಕ್ಕಿಲ್ಲ. ಇದನ್ನೇ ಸ್ಟ್ರಾಟಜಿ ಮಾಡಿಕೊಂಡಿರುವ ಬಿಜೆಪಿ ಈ ಬಾರಿ ಮಾಜಿ ಸಿಎಂ ಸಿದ್ದರಾಮಯ್ಯ ಶಿಷ್ಯ ಪುಟ್ಟರಂಗಶೆಟ್ಟಿ ವಿರುದ್ಧ ಲಿಂಗಾಯತ ಸಮುದಾಯದ ಪ್ರಬಲ ನಾಯಕನನ್ನು ಅಖಾಡಕ್ಕಿಳಿಸಿದ್ದು, ಯಾರೂ ವಿಜಯಭೇರಿ ಬಾರಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

Share This Article