ಪರಮೇಶ್ವರ್‌ ಸಿಎಂ ಆಗಲಿ ಅನ್ನೋದು ನನ್ನ ವೈಯಕ್ತಿಕ ಆಸೆ – ವಿ. ಸೋಮಣ್ಣ

2 Min Read

– ತುಮಕೂರಲ್ಲಿ ನನ್ನ ಗೆಲುವಿಗೆ ಕಾಂಗ್ರೆಸ್ ನಾಯಕರೂ ಸಹಕರಿಸಿದ್ದಾರೆ
– ಕುರ್ಚಿ ಕಿತ್ತಾಟದ ನಡುವೆ ಸಚಿವರ ಸ್ಫೋಟಕ ಹೇಳಿಕೆ

ತುಮಕೂರು: ಗೃಹ ಸಚಿವ ಜಿ. ಪರಮೇಶ್ವರ್ (G Parameshwar) ಈ ರಾಜ್ಯದ ಮುಖ್ಯಮಂತ್ರಿ ಆಗಲಿ ಅನ್ನುವ ವೈಯಕ್ತಿಕ ಆಸೆ ನನಗಿದೆ ಎಂದು ಕೇಂದ್ರ ಸಚಿವ ವಿ ಸೋಮಣ್ಣ (V Somanna) ಅಭಿಪ್ರಾಯಪಟ್ಟಿದ್ದಾರೆ.

ತುಮಕೂರಿನ (Tumkur) ಹೆಗ್ಗೆರೆಯಲ್ಲಿ ರೇಲ್ವೆ ಮೇಲ್ಸೆತುವೆ ಕಾಮಗಾರಿಗೆ ಗುದ್ದಲಿ ಪೂಜೆ ಬಳಿಕ ವೇದಿಕೆ ಭಾಷಣ ವೇಳೆ ಕೇಂದ್ರ ಸಚಿವ ವಿ. ಸೋಮಣ್ಣ ತಮ್ಮ ಇಂಗಿತ ಹೊರಹಾಕಿದರು. ಪರಮೇಶ್ವರ್ ಅದೃಷ್ಟದ ಗೃಹ ಮಂತ್ರಿಯಾಗಿದ್ದಾರೆ. ಎಲ್ಲೋ ಒಂದು ಕಡೆ ಅವರು ಈ ರಾಜ್ಯದ ಮುಖ್ಯಮಂತ್ರಿ ಆಗಲಿ ಅನ್ನೋ ಆಸೆ ಇದೆ ಎಂದು ಹೇಳಿದರಲ್ಲದೇ ಇದನ್ನ ನಾನೊಬ್ಬನೇ ಹೇಳುತ್ತಿಲ್ಲ ತುಮಕೂರಿನ ಮಹಾಜನತೆಯ ಅಭಿಪ್ರಾಯ ಎಂದು ಅಭಿಪ್ರಾಯಿಸಿದರು.

ಈ ವೇಳೆ ಮಧ್ಯ ಪ್ರವೇಶ ಮಾಡಿದ ಶಾಸಕ ಸುರೇಶ್ ಗೌಡ, ಡಿಕೆಶಿ (DK Shivakumar) ಕೂಡಾ ಇದ್ದಾರೆ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಸೋಮಣ್ಣ ಹಣೆಬರಹ ಯಾರಿಗೆ ಗೊತ್ತು, ಹಣೆ ಬರಹದಂತೆ ಆಗಲಿ ಎಂದರು. ಇದನ್ನೂ ಓದಿ: ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಮನೆಯಲ್ಲಿ ಕಳ್ಳತನ – ಬೆಂಗ್ಳೂರು ಪೊಲೀಸರಿಗೆ ಟ್ಯಾಗ್ ಮಾಡಿ ಎಕ್ಸ್‌ನಲ್ಲಿ ದೂರು

ಇದೇ ವೇಳೆ ತುಮಕೂರಿನಲ್ಲಿ ತಮ್ಮ ಗೆಲುವಿಗೆ ಕಾಂಗ್ರೆಸ್ ನಾಯಕರೂ (Congress Leaders) ಸಹಕರಿಸಿದ್ದಾರೆ ಎಂಬ ಸ್ಪೋಟಕ ಮಾಹಿತಿ ಹಂಚಿಕೊಂಡರು. ಬಿಜೆಪಿ-ಜೆಡಿಎಸ್ ನಾಯಕರು ನನ್ನ ಗೆಲುವಿಗೆ ಎಷ್ಟು ಸಹಕರಿಸಿದ್ದಾರೋ ಹಾಗೆಯೇ ಕಾಂಗ್ರೆಸ್‌ನ ಬಹುಕಾಲ ನಾಯಕರು ಸಾಥ್ ನೀಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡರ ಸೋಲಿಗೆ ಪರೋಕ್ಷವಾಗಿ ಕಾಂಗ್ರೆಸ್ ನಾಯಕರೇ ಕಾರಣ ಅನ್ನೋದನ್ನ ಜಿ. ಪರಮೇಶ್ವರ್ ಇರುವ ವೇದಿಕೆಯಲ್ಲೇ ಸೋಮಣ್ಣ ಬಹಿರಂಗಪಡಿಸಿದರು.

ತುಮಕೂರು ಮೆಟ್ರೋ ಯೋಜನೆಗೆ ವಿರೋಧ
ಬೆಂಗಳೂರು-ತುಮಕೂರು ಮೆಟ್ರೊ ಯೋಜನೆಗೆ ಕಾಂಗ್ರೆಸ್ ನಾಯಕರು ವಿರೋಧ ಮಾಡುತಿದ್ದಾರೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಆರೋಪ ಮಾಡಿದ್ದಾರೆ. ತುಮಕೂರಿನ ಪಂಡಿತನಹಳ್ಳಿಯಲ್ಲಿ ರೇಲ್ವೆ ಮೇಲ್ಸೆತುವೆ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿ ಮಾತನಾಡಿದ ಅವರು, ನಿನ್ನೆ ಒಬ್ಬ ಕಾಂಗ್ರೆಸ್ ನಾಯಕರು ನನ್ನ ಬಳಿ ಬಂದು ತುಮಕೂರು ಮೆಟ್ರೋಗೆ ವಿರೋಧ ವ್ಯಕ್ತಪಡಿಸಿದರು. ಇದನ್ನೂ ಓದಿ: ಮುಂದಿನ ಎರಡು ದಿನ ಉತ್ತರ ಕರ್ನಾಟಕದಲ್ಲಿ ಭಾರೀ ಶೀತಗಾಳಿ – ಮಾನವ, ಬೆಳೆಗಳ ಮೇಲೆ ತೀವ್ರ ಪರಿಣಾಮ

ಪರಮೇಶ್ವರ್ ಯಾಕೆ ತುಮಕೂರಿಗೆ ಮೆಟ್ರೋ ತೆಗೆದುಕೊಂಡು ಹೋಗುತ್ತಾರೆ ಎಂದು ಕೇಳಿದ್ರು. ಅದಕ್ಕೆ ನಾನು ಇಲ್ಲ ಇಲ್ಲ. ಪರಮೇಶ್ವರ್ ಒಳ್ಳೆ ಕೆಲಸ ಮಾಡುತಿದ್ದಾರೆ. ನಾನು ಅದಕ್ಕೆ ಸಹಕಾರ ಕೊಡುತ್ತೇನೆ ಎಂದೆ. ಅದಕ್ಕೆ ಆ ಕಾಂಗ್ರೆಸ್ ನಾಯಕ ಸುಮ್ಮನಾದರು. ನಾನು ಸಚಿವನಾದ ಬಳಿಕ ತುಮಕೂರು, ರಾಯದುರ್ಗ, ದಾವಣಗೆರೆ ರೈಲು ಮಾರ್ಗ ಕಾಮಗಾರಿಗೆ ಚಾಲನೆ ಕೊಟ್ಟಿದ್ದೆನೆ. 20ಕ್ಕೂ ಹೆಚ್ಚು ಮೇಲ್ಸೆತುವೆ ಮಾಡಿದ್ದೇನೆ ಎಂದರು.

Share This Article