ಸಿದ್ದರಾಮಯ್ಯ ಮಾತು ಕೇಳಿದ್ರೆ ಮನೆಗೆ ಕಳಿಸ್ಬೇಕಾಗುತ್ತೆ – ಅಧಿಕಾರಿಗಳಿಗೆ ಸೋಮಣ್ಣ ಸೂಚನೆ

Public TV
2 Min Read

ಬಾಗಲಕೋಟೆ: ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾಗಿದ್ದು ಟಿಪ್ಪು ಜಯಂತಿ ಆಚರಣೆ ವಿಚಾರದಲ್ಲಿ ಸರ್ಕಾರದ ಆದೇಶದಂತೆ ಕಾರ್ಯನಿರ್ವಹಿಸಿ ಎಂದು ಸೂಚಿಸಿದ್ದಾರೆ.

ಬಾಗಲಕೋಟೆ ಪ್ರವಾಸದಲ್ಲಿ ಸಂದರ್ಭದಲ್ಲಿ ತೋಟಗಾರಿಕೆ ವಿವಿಯಲ್ಲಿ ಸಭೆಯಲ್ಲಿದ್ದಾಗ ಸಚಿವರಿಗೆ ಮೈಸೂರಿನಿಂದ ಅಧಿಕಾರಿಗಳ ಕರೆ ಬಂದಿದೆ. ಈ ವೇಳೆ ಫೋನಿನಲ್ಲೇ ಅಧಿಕಾರಿಗಳನ್ನು ಸಚಿವ ವಿ ಸೋಮಣ್ಣ ಗದರಿದ್ದಾರೆ.

ಸರ್ಕಾರದ ಆದೇಶ ಹೇಗಿದೆಯೋ ಹಾಗೆ ಮಾಡಿ. ಮತ್ತೆ ನೀವು ಹಳೆ ಆದೇಶ ಎಂದು ಸಿದ್ದರಾಮಯ್ಯ ಮಾತು ಕೇಳಿದರೆ ಮನೆಗೆ ಹೋಗ್ತಾಯಿರಿ ರಜೆಹಾಕಿ ಹೋಗಿ ಎಂದು ತರಾಟೆ ತೆಗೆದುಕೊಂಡಿದ್ದಾರೆ.

ಸರ್ಕಾರದ ಆದೇಶ ಏನಿದೆಯೋ ಅದನ್ನು ಗಂಭೀರವಾಗಿ ಪಾಲನೆ ಮಾಡಿ. ನಾನು ಪೊಲೀಸರಿಗೆ ಈ ಬಗ್ಗೆ ಈಗಾಗಲೇ ಹೇಳಿದ್ದೇನೆ. ಇಬ್ಬರೂ ಸೇರಿ ಚರ್ಚೆ ಮಾಡಿ ನಿರ್ಧಾರ ಮಾಡಿ ಎಂದು ಫೋನಿನಲ್ಲಿ ಅಧಿಕಾರಿಗಳಿಗೆ ಸೋಮಣ್ಣ ಸೂಚಿಸಿದ್ದಾರೆ.

ಇದೇ ವೇಳೆ ನೆರೆ ಪರಿಹಾರದ ಹಣವನ್ನು ದುರುಪಯೋಗ ಪಡಿಸಿಕೊಂಡ ಅಧಿಕಾರಿ ವಿರುದ್ಧ ಸಹ ಸಚಿವರು ಕೆಂಡಾಮಂಡಲರಾಗಿದ್ದಾರೆ. ಕೊಡಗು ಲೋಕೋಪಯೋಗಿ ಎಕ್ಸಿಕ್ಯುಟಿವ್ ಎಂಜಿನಿಯರ್‌ರಿಂದ ಸರ್ಕಾರಿ ಹಣ ದುರುಪಯೋಗ ವಿಚಾರಕ್ಕೆ ಶ್ರೀಕಂಠಯ್ಯ ಅನ್ನೋನು ಯಾವ ವಿಭಾಗದಲ್ಲಿದ್ದಾನೆ? ತಕ್ಷಣವೇ ಅವನಿಗೆ ಶೋಕಾಸ್ ನೋಟೀಸ್ ನೀಡಿ ಎಂದು ಆದೇಶಿಸಿದ್ದಾರೆ.

ತಕ್ಷಣದಿಂದಲೇ ಆತನನ್ನು ರೀಲೀವ್ ಮಾಡಿ. ಅವನ ಮೇಲೆ ಕ್ರಮ ಕೈಗೊಳ್ಳಿ, ರಿಲೀವ್ ಮಾಡಿ ನನಗೆ ತಕ್ಷಣ ಅದರ ಪ್ರತಿ ಕಳುಹಿಸಿ ಎಂದು ಕೊಡಗು ಜಿಲ್ಲಾಧಿಕಾರಿಗೆ ಫೋನ್ ಮೂಲಕ ಸೂಚನೆ ನೀಡಿದ್ದಾರೆ.

ಪ್ರಕೃತಿ ವಿಕೋಪದಡಿ ಸರ್ಕಾರದಿಂದ ನೀಡಿದ್ದ 21 ಕೋಟಿ ರೂ. ಹಣವನ್ನು ಅಧಿಕಾರಿ ಶ್ರೀಕಂಠಯ್ಯ ಖಾಸಗಿ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಖಾಸಗಿ ಬ್ಯಾಂಕ್ ನಲ್ಲಿ ದುಡ್ಡು ಜಮೆ ಮಾಡಿದ್ದು ತಪ್ಪು, ನಿಯಮಗಳನ್ನು ಮೀರಿದ್ದಾನೆ. ಹೀಗಾಗಿ ಅವನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ. ನಾನು ಬರುವುದಕ್ಕಿಂತ ಮೊದಲು ಆಗಿರುವ ಪ್ರಕರಣ ಇದು. ನಾನು ಬಂದು ಒಂದೂವರೆ ತಿಂಗಳಾಗಿದೆ. ಹಾಗಾಗಿ ಇದನ್ನು ತೀಕ್ಷ್ಣವಾಗಿ ತೆಗೆದುಕೊಳ್ಳುತ್ತೇವೆ. ಎಷ್ಟೇ ದೊಡ್ಡವರಾಗಲಿ, ಎಲ್ಲೂ ಈ ರೀತಿ ಆಗಬಾರದು. ಇಂತಹ ಪಾಪಿಗಳು ಇರುವುದರಿಂದಲೇ, ಪ್ರಕೃತಿ ತಾಯಿ ತೊಂದರೆ ಕೊಡುತ್ತಿದ್ದಾಳೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *