ರಷ್ಯಾದ ಬ್ಯೂಟಿ ಕ್ವೀನ್‍ಗೆ ತಲಾಖ್ ಕೊಟ್ಟ ಮಲೇಷ್ಯಾದ ಕಿಂಗ್

Public TV
2 Min Read

ಕೌಲಾಲಂಪುರ್: ಮದುವೆಯಾದ ವಿಚಾರ ಹೊರಬಂದ ಕೆಲವೇ ತಿಂಗಳಲ್ಲಿ ಮಲೇಷ್ಯಾದ ರಾಜ ರಷ್ಯಾದ ಮಾಜಿ ಬ್ಯೂಟಿ ಕ್ವೀನ್‍ಗೆ ತ್ರಿವಳಿ ತಲಾಖ್ ಮೂಲಕ ವಿಚ್ಛೇದನ ನೀಡಿದ್ದಾರೆ.

ಇತ್ತೀಚಿಗೆ ಮಾಜಿ ಮಿಸ್ ಮಸ್ಕೋ ರಿಹಾನಾ ಆಕ್ಸಾನಾ ಗೋರ್ಬಟೆಂಕೊ, ತಾನು ಮಲೇಷ್ಯಾದ ರಾಜ ಸುಲ್ತಾನ್ ಮೊಹಮ್ಮದ್ ವಿ ಅವರನ್ನು ಮದುವೆಯಾಗಿದ್ದೇನೆ ಎಂದು ತಮ್ಮ ಜೋಡಿ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಮೂಲಕ ತಮ್ಮ ಮದುವೆಯ ಬಗ್ಗೆ ಹೇಳಿದ್ದರು.

ಈ ವಿವಾಹದ ವಿಚಾರ ಹೊರಬಂದ ಹಿನ್ನೆಲೆಯಲ್ಲಿ ಕಳೆದ ಜನವರಿಯಲ್ಲಿ ಮಲೇಷ್ಯಾದ ದೊರೆ ಸ್ಥಾನದಿಂದ ರಾಜ ಸುಲ್ತಾನ್ ಮೊಹಮ್ಮದ್ ವಿ ಅವರು ಹೊರನಡೆದಿದ್ದರು. ಈ ಮೂಲಕ ಮುಸ್ಲಿಂ ಹೆಚ್ಚಿರುವ ದೇಶಗಳ ಇತಿಹಾಸದಲ್ಲಿ ಪದತ್ಯಾಗ ಮಾಡಿದ ಮೊದಲ ರಾಜ ಎಂಬ ಅಪಕೀರ್ತಿಗೆ ಒಳಗಾಗಿದ್ದರು. ಈಗ ಅವರು ತ್ರಿವಳಿ ತಲಾಖ್ ಮೂಲಕ ತನ್ನ ಪ್ರೀಯತಮೆಗೆ ವಿಚ್ಛೇದನ ನೀಡಿದ್ದಾರೆ.

ವಿಚ್ಛೇದನದ ಬಗ್ಗೆ ಮಾತನಾಡಿರುವ ರಾಜನ ಪರ ವಕೀಲರಾದ ಸಿಂಗಾಪುರ ಮೂಲದ ಕೊಹ್ ಟಿಯೆನ್ ಹುವಾ “ಮಿಸ್ ರಿಹಾನಾ ಆಕ್ಸಾನಾ ಗೋರ್ಬಟೆಂಕೊ ಅವರಿಗೆ 22 ಜೂನ್ 2019 ರಂದು ಸಿರಿಯಾ ಕಾನೂನುಗಳಿಗೆ ಅನುಗುಣವಾಗಿ ಮೂರು ತಲಾಖ್‍ಗಳಿಂದ ರಾಜ ಸುಲ್ತಾನ್ ಮೊಹಮ್ಮದ್ ವಿ ಅವರು ವಿಚ್ಛೇದನ ನೀಡಿದ್ದಾರೆ” ಎಂದು ಹೇಳಿದ್ದಾರೆ.

ಈಶಾನ್ಯ ಮಲೇಷ್ಯಾದ ರಾಜ್ಯವಾದ ಕೆಲಾಂಟನ್‍ನಲ್ಲಿರುವ ಇಸ್ಲಾಮಿಕ್ ನ್ಯಾಯಾಲಯವು ಈ ವಿಚ್ಛೇದನಕ್ಕೆ ಪ್ರಮಾಣಪತ್ರವನ್ನು ನೀಡಿದೆ ಎಂದು ವಕೀಲರು ಈ ವಾರದ ಆರಂಭದಲ್ಲಿ ಹೇಳಿದ್ದರು. ಆದರೆ ರಿಹಾನಾ ಆಕ್ಸಾನಾ ಗೋರ್ಬಟೆಂಕೊ ಇದನ್ನು ನಿರಾಕರಿಸಿದ್ದಾರೆ. ಅವರು ನನಗೆ ವಿಚ್ಛೇದನ ನೀಡಿಲ್ಲ ಈ ವಿಚಾರ ನನಗೆ ನ್ಯೂಸ್ ಮೂಲಕ ತಿಳಿದೆ. ನನಗೆ ಅವರು ಎಂದು ನೇರವಾಗಿ ತಲಾಖ್ ಎಂದು ಹೇಳಿಲ್ಲ ಎಂದು ಹೇಳಿದ್ದಾರೆ. ಇದರ ಜೊತೆಗೆ ರಾಜನ ಜೊತೆ ಮತ್ತು ಮೇ ತಿಂಗಳಿನಲ್ಲಿ ಜನಿಸಿದ ಅವರ ಮಗು ಜೊತೆ ಇನ್‍ಸ್ಟಾಗ್ರಾಮ್‍ಗೆ ಫೋಟೋ ಪೋಸ್ಟ್ ಮಾಡುತ್ತಿದ್ದಾರೆ. ಆದರೆ ರಾಜನ ಪರ ವಕೀಲರಾದ ಕೊಹ್ ಟಿಯೆನ್ ಹುವಾ ಅವರು ಅದೂ ರಾಜನಿಗೆ ಜನಿಸಿದ ಮಗು ಅಲ್ಲ. ಅ ಮಗು ರಾಜನಿಗೆ ಜನಿಸಿದೆ ಎಂಬುದಕ್ಕೆ ಯಾವುದೇ ಪುರಾವೆಗಳು ಇಲ್ಲ ಎಂದು ಹೇಳಿದ್ದಾರೆ.

ರಾಜ ರಾಜ ಸುಲ್ತಾನ್ ಮೊಹಮ್ಮದ್ ವಿ ಅವರು ಮಲೇಷ್ಯಾದ ರಾಜನ ಸ್ಥಾನದಿಂದ ಪದತ್ಯಾಗ ಮಾಡಿದ ನಂತರ ಅ ಸ್ಥಾನಕ್ಕೆ ಕ್ರೀಡಾಪಟು ಸುಲ್ತಾನ್ ಅಬ್ದುಲ್ಲಾ ಸುಲ್ತಾನ್ ಅಹ್ಮದ್ ಶಾ ಅವರನ್ನು ಮಲೇಷ್ಯಾದ ಹೊಸ ರಾಜರನ್ನಾಗಿ ಆಯ್ಕೆಮಾಡಲಾಗಿದೆ.

ಮಲೇಷ್ಯಾದಲ್ಲಿ ಸಾಂವಿಧಾನಿಕ ರಾಜಪ್ರಭುತ್ವವಿದ್ದು ಪ್ರತಿ 5 ವರ್ಷಗಳಿಗೊಮ್ಮೆ 9 ಮುಸ್ಲಿಂ ಆಡಳಿತ ಹೊಂದಿರುವ ರಾಜಮನೆತನದವರಿಗೆ ಅಧಿಕಾರ ಹಸ್ತಾಂತರವಾಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *