ಯುವಕನ ಕುತ್ತಿಗೆಯನ್ನು ಬೈಕಿಗೆ ಕಟ್ಟಿ 15ಕಿ.ಮೀ ಎಳ್ಕೊಂಡು ಹೋದ್ರು

Public TV
2 Min Read

ಲಕ್ನೋ: ಪೊಲೀಸರನ್ನೇ ದಂಗಾಗಿಸುವಂತಹ ಅಮಾನವೀಯ ಘಟನೆಯೊಂದು ಮಂಗಳವಾರ ಉತ್ತರಪ್ರದೇಶದ ಮೀರತ್ ನಲ್ಲಿ ನಡೆದಿದೆ. ಇದು ಮಾಮೂಲಿ ಕೊಲೆ ಪ್ರಕರಣವಾಗಿರದೇ ಸ್ವಲ್ಪ ವಿಭಿನ್ನವಾಗಿದೆ.

21 ವರ್ಷದ ಮುಕುಲ್ ಕುಮಾರ್ ಕುತ್ತಿಗೆಯನ್ನು ಬೈಕಿಗೆ ಕಟ್ಟಿ ಬಳಿಕ ಬೈಕ್ ಸಮೇತ ಆತನನ್ನು ದುಷ್ಕರ್ಮಿಗಳು ಸುಮಾರು 15 ಕಿ.ಮೀ ಎಳೆದುಕೊಂಡು ಹೋಗಿದ್ದಾರೆ. ಯುವಕನ ದೇಹದಲ್ಲಿ ಬುಲೆಟ್ ಹೊಕ್ಕಿರುವ ಗಾಯಗಳಿದ್ದು ಎಳೆದುಕೊಂಡು ಹೋದ ರಭಸಕ್ಕೆ ಎಡಗಾಲಿನ ಪಾದವೇ ಇಲ್ಲವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಕುಲ್ ನನ್ನು ಗುಂಡಿಟ್ಟು ಕೊಲೆಗೈದು ಬಳಿಕ ಎಳೆದುಕೊಂಡು ಹೋಗಿದ್ದಾರೋ ಅಥವಾ ಎಳೆದುಕೊಂಡು ಹೋಗುತ್ತಿದ್ದಾಗ ಮೃತಪಟ್ಟಿದ್ದಾನೋ ಎಂಬುದು ಸ್ಪಷ್ಟವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಈ ಸಂಬಂಧ ನಗರ ಪೊಲೀಸ್ ಅಧೀಕ್ಷಕ ಅವಿನಾಶ್ ಪಾಂಡೆ ಮಾತನಾಡಿ, ಮೃತದೇಹ ಪತ್ತೆಯಾದ ಸಂದರ್ಭದಲ್ಲಿ ಯುವಕನ ಮುಖ ಹಾಗೂ ತಲೆಯಲ್ಲಿ ಗಂಭೀರ ಗಾಯಗಳು ಕಂಡುಬಂದಿದೆ. ಎಡಗಾಲಿನ ಪಾದ ಇಲ್ಲವಾಗಿತ್ತು. ಅಲ್ಲದೆ ದೇಹದ ಇತರ ಭಾಗಗಳು ಕೂಡ ಗಂಭೀರತೆಯಿಂದ ಕೂಡಿತ್ತು. ಹಪುರ್ ಜಿಲ್ಲೆಯ ಮಂಡಿ ಎಂಬ ಪ್ರದೇಶದಲ್ಲಿ ಮುಕುಲ್ ತನ್ನ ಕುಟುಂಬಸ್ಥರೊಂದಿಗೆ ನೆಲೆಸಿದ್ದನು. ಈ ಮಂಡಿ ಪ್ರದೇಶದಿಂದ ಸುಮಾರು 15 ಕಿ.ಮೀ ವರೆಗೆ ರಕ್ತದ ಕಲೆಗಳು ಇದ್ದವು. ಹೀಗಾಗಿ ಅಲ್ಲಿಂದಲೇ ಆತನನ್ನು ಎಳೆದುಕೊಂಡು ಬಂದು ಬಳಿಕ ಮೀರತ್ ನ ಖರ್ಕೊಡ ಪ್ರದೇಶದಲ್ಲಿ ಬಿಸಾಕಿರುವುದು ಸ್ಪಷ್ಟವಾಗುತ್ತದೆ. ಈತನ ಮೃತದೇಹ ನಿರ್ಮಾಣಹಂತದ ಅಂಡರ್ ಪಾಸ್ ಬಳಿ ಮಂಗಳವಾರ ದೊರಕಿದ್ದು, ಪಕ್ಕದಲ್ಲೇ ಬೈಕ್ ಕೂಡ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.

ಮುಕುಲ್ ಒಬ್ಬ ನಾಚಿಕೆ ಸ್ವಭಾವದ ಹುಡುಗನಾಗಿದ್ದು, ಯಾರೊಂದಿಗೂ ದ್ವೇಷ ಕಟ್ಟಿಕೊಂಡವನಲ್ಲ ಎಂದು ಆತನ ಕುಟುಂಬಸ್ಥರು ದುಃಖ ತೋಡಿಕೊಂಡಿದ್ದಾರೆ. ಮುಕುಲ್ ಕಳೆದ ವರ್ಷವಷ್ಟೇ ವಿದ್ಯಾಭ್ಯಾಸ ಮುಗಿಸಿಕೊಂಡಿದ್ದು, ಹಪುರ್ ಎಂಬಲ್ಲಿ ತನ್ನ ತಾಯಿ ಹಾಗೂ ಸಹೋದರರ ಜೊತೆ ವಾಸವಾಗಿದ್ದನು. ಈತ ಸಾಧು ಸ್ವಭಾವದವನಾಗಿದ್ದು, ಯಾರ ಜೊತೆಗೂ ಜಗಳ ಮಾಡಿಕೊಂಡವನಲ್ಲ. ಸಂಬಂಧಿಕರೊಂದಿಗೂ ಚೆನ್ನಾಗಿ ಇರುವ ಮುಕುಲ್, ಯಾರಲ್ಲೂ ದ್ವೇಷ ಹೊಂದಿಲ್ಲ ಎಂದು ಮುಕುಲ್ ಸಂಬಂಧಿ ಅಜಾದ್ ವಿರ್ ಹೇಳಿದ್ದಾರೆ.

ಸದ್ಯ ಘಟನೆ ಸಂಬಂಧ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದು, ದುಷ್ಕರ್ಮಿಗಳು ಯಾವ ಕಾರಣಕ್ಕೆ ಈ ರೀತಿ ಕೊಲೆ ಮಾಡಿದ್ದಾರೆ ಎಂಬುದು ತಿಳಿದುಬಂದಿಲ್ಲ. ಮೃತದೇಹ ಪಕ್ಕದಲ್ಲೇ ಬೈಕ್ ಸಿಕ್ಕಿದ್ದರಿಂದ ದುಷ್ಕರ್ಮಿಗಳು ಬೈಕಿಗಾಗಿ ಈ ಕೃತ್ಯ ಎಸಗಿಲ್ಲ ಅನ್ನೋದು ನಿಖರವಾಗಿದೆ. ಹೀಗಾಗಿ ಯಾವುದೋ ವಿಚಾರಕ್ಕೆ ಸ್ನೇಹಿತರೇ ಕೊಲೆಗೈದಿರಬಹುದು ಎಂದು ಎಸ್‍ಪಿ ಶಂಕಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *