– ಈವರೆಗೆ 10 ಮಂದಿ ಸಾವು, ನೂರಾರು ಮಂದಿ ನಾಪತ್ತೆ
– 9 ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ; ಕೆಸರಿನ ರಾಶಿ.. ಊರೇ ಸರ್ವನಾಶ
ಡೆಹ್ರಾಡೂನ್: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಧರಾಲಿ ಗ್ರಾಮದಲ್ಲಿ ಆ.5ರಂದು ಮೇಘಸ್ಫೋಟ (Uttarkashi Cloudburst) ಸಂಭವಿಸಿದೆ. ಇದರಿಂದ ಹಠಾತ್ ಪ್ರವಾಹ ಸೃಷ್ಠಿಯಾಗಿ ಮನೆಗಳು, ಹೋಟೆಲ್‌ಗಳು ಮತ್ತು ಹೋಂಸ್ಟೇಗಳು ಕೊಚ್ಚಿ ಹೋಗಿವೆ. ಘಟನೆಯಲ್ಲಿ 10ಕ್ಕೂ ಅಧಿಕ ಮಂದಿ ಮೃತಪಟ್ಟರೇ 8-10 ಸೈನಿಕರು ಸೇರಿ ನೂರಾರು ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
#WATCH | Uttarkashi, Uttarakhand | Blocked roads being cleared with the help of JCB, as landslides hit various places on the Uttarkashi-Harsil road. pic.twitter.com/QZj8nCMSew
— ANI (@ANI) August 6, 2025
ಹರ್ಸಿಲ್ ರಸ್ತೆಯಲ್ಲಿ ಭಾರೀ ಭೂಕುಸಿತ
ಭಾರೀ ಮಳೆಯಿಂದ ಉತ್ತರಕಾಶಿ-ಹರ್ಸಿಲ್ (Uttarkashi-Harsil) ರಸ್ತೆಯಲ್ಲಿ ಭೂಕುಸಿತ ಉಂಟಾಗಿದ್ದು, ಸಂಚಾರ ನಿರ್ಬಂಧಿಸಲಾಗಿದೆ. ಜೆಸಿಬಿ (JCB) ಯಂತ್ರಗಳ ಸಹಾಯದಿಂದ ರಸ್ತೆ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಉತ್ತರಕಾಶಿಯಲ್ಲಿ ಮೇಘಸ್ಫೋಟ – ಆರ್ಮಿ ಕ್ಯಾಂಪ್‌ನಲ್ಲಿದ್ದ 10ಕ್ಕೂ ಅಧಿಕ ಸೈನಿಕರು ನಾಪತ್ತೆ
9 ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ, ರೆಡ್ ಅಲರ್ಟ್
ಭೂಕುಸಿತದ ನಡುವೆ ಭಾರೀ ಮಳೆ (heavy Rain) ಮುಂದುವರಿದ ಕಾರಣ ಭಾರತೀಯ ಹವಾಮಾನ ಇಲಾಖೆ ಇಂದು ಹರಿದ್ವಾರ, ನೈನಿತಾಲ್ ಮತ್ತು ಉಧಮ್ ಸಿಂಗ್ ನಗರ ಜಿಲ್ಲೆಗಳ ಕೆಲವು ಭಾಗಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ರಾಜ್ಯದ ಇತರ ಪ್ರದೇಶಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಅಲ್ಲದೇ ಉತ್ತರಾಖಂಡ ಸರ್ಕಾರವು ಡೆಹ್ರಾಡೂನ್, ನೈನಿತಾಲ್, ತೆಹ್ರಿ, ಚಮೋಲಿ, ರುದ್ರಪ್ರಯಾಗ, ಚಂಪಾವತ್, ಪೌರಿ, ಅಲ್ಮೋರಾ ಮತ್ತು ಬಾಗೇಶ್ವರ್ ಒಂಬತ್ತು ಜಿಲ್ಲೆಗಳಲ್ಲಿ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಣೆ ಮಾಡಿದೆ. ಇದನ್ನೂ ಓದಿ: ಉತ್ತರಕಾಶಿಯಲ್ಲಿ ಭೀಕರ ಮೇಘಸ್ಫೋಟ – ಸಾವಿನ ಸಂಖ್ಯೆ 4ಕ್ಕೆ ಏರಿಕೆ
ಕೊಚ್ಚಿಹೋದ ಧರಾಲಿ ಗ್ರಾಮ
ಉತ್ತರಾಖಂಡದ ಉತ್ತರ ಕಾಶಿ ಜಿಲ್ಲೆಯ ಧರಾಲಿ (Dharali) ಗ್ರಾಮ ನೈಸರ್ಗಿಕ ವಿಕೋಪಕ್ಕೆ ಸಿಲುಕಿದ್ದು, ಮೇಘಸ್ಫೋಟದಿಂದ ವಿನಾಶವೇ ಸೃಷ್ಟಿಯಾಗಿದೆ. ಧರಾಲಿ ಗ್ರಾಮದ ಬಳಿಯಿರುವ ಖೀರ್ ಗಡ್ ಪ್ರದೇಶದಲ್ಲಿ ಪ್ರವಾಹದಿಂದಾಗಿ ಹಠಾತ್ ನೀರಿನ ಹರಿವು ಹೆಚ್ಚಾದ ಪರಿಣಾಮ ದಿಢೀರ್ ಪ್ರವಾಹ ಉಂಟಾಗಿದೆ. ನೋಡನೋಡುತ್ತಿದ್ದಂತೆ ನದಿಯಲ್ಲಿ ರೌದ್ರಾವತಾರ ತಾಳಿ ಹರಿದುಬಂದ ಹೂಳು ತುಂಬಿಕೊಂಡ ಪರಿಣಾಮ ನೀರಿನಿಂದ 25ಕ್ಕೂ ಹೆಚ್ಚು ಹೋಟೆಲ್, ಹೋಂ ಸ್ಟೇಗಳು ಕೊಚ್ಚಿಹೋಗಿವೆ. ಘಟನೆಯಲ್ಲಿ ಸುಮಾರು 10 ಮಂದಿ ಮೃತಪಟ್ಟಿದ್ದು, 100ಕ್ಕೂ ಅಧಿಕ ಜನರು ಕಾಣೆಯಾಗಿದ್ದಾರೆ. ಅವಶೇಷಗಳಡಿ 12ಕ್ಕೂ ಅಧಿಕ ಜನರು ಸಿಲುಕಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಉತ್ತಾರಾಖಂಡದಲ್ಲಿ ಪ್ರವಾಹ – ಕಲಬುರಗಿ ಜಿಲ್ಲಾಡಳಿತದಿಂದ ಸಹಾಯವಾಣಿ ಕೇಂದ್ರ ಆರಂಭ
ಹೆಬ್ಬಂಡೆ.. ಕೆಸರಿನ ರಾಶಿ.. ಊರೇ ಸರ್ವನಾಶ
ಘಟನೆ ಸಂಭವಿಸಿದ ವೇಳೆ ಬೆಟ್ಟದ ಇಳಿಜಾರಿನಲ್ಲಿ ಭಾರೀ ಪ್ರಮಾಣದ ನೀರು ಹರಿದು ಬರುವ ಈ ದೃಶ್ಯ ಎಂಥವರ ಎದೆಯನ್ನೂ ನಡುಗಿಸುವಂತಿದೆ. ನೀರಿನೊಂದಿಗೆ ಹರಿದು ಬಂದ ದೊಡ್ಡ ಪ್ರಮಾಣದಲ್ಲಿ ಹೂಳು ಧರಾಲಿ ಗ್ರಾಮವನ್ನು ಆವರಿಸಿಕೊಂಡಿದ್ದು ಅವಶೇಷಗಳ ಅಡಿಯಲ್ಲಿ ಜನರು, ವಾಹನಗಳು, ಮನೆಗಳು ಹುದುಗಿ ಹೋಗಿವೆ. ಈ ಶಾಕ್‌ನಿಂದ ಹೊರ ಬರುವ ಮುನ್ನವೇ ಉತ್ತರಕಾಶಿ ಜಿಲ್ಲೆಯ ಸುಖಿ ಗ್ರಾಮದಲ್ಲಿ ಮತ್ತೊಂದು ಮೇಘಸ್ಫೋಟ ಸಂಭವಿಸಿದೆ. ಉತ್ತರಾಖಂಡದ ಉತ್ತರಕಾಶಿಯ ಸುಖಿ ಟಾಪ್‌ನಲ್ಲಿ ತೀವ್ರ ಮೇಘಸ್ಫೋಟ ಸಂಭವಿಸಿದ್ದು, ಹಲವಾರು ಮನೆಗಳಿಗೆ ಹಾನಿಯಾಗಿದೆ. ಇದನ್ನೂ ಓದಿ: ಕಾಲಿಟ್ಟಲ್ಲೆಲ್ಲಾ ಮರಳಿದ್ದರೂ ಸೌದಿ ಅರೇಬಿಯಾ ಮರಳು ಆಮದು ಮಾಡಿಕೊಳ್ಳುವುದು ಏಕೆ?
ಮೂರು ಹೆಲಿಕ್ಯಾಪ್ಟರ್ ನೀಡುವಂತೆ ಕೇಂದ್ರಕ್ಕೆ ಮನವಿ
ಘಟನೆ ಬೆನ್ನಲ್ಲೇ ಸ್ಥಳಕ್ಕೆ ಧಾವಿಸಿದ ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ಮತ್ತು ಭಾರತೀಯ ಸೇನೆಯ ಐಬೆಕ್ಸ್ ಬ್ರಿಗೇಡ್‌ನೊಂದಿಗೆ ರಕ್ಷಣಾ ಕಾರ್ಯಾಚರಣೆಗಳು ನಡೆಸುತ್ತಿವೆ. ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಜನರ ರಕ್ಷಣೆ ಮಾಡಲಾಗುತ್ತಿದೆ. ಆದ್ರೆ ದೊಡ್ಡ ಪ್ರಮಾಣದ ಹೂಳು ತುಂಬಿದ ಹಿನ್ನಲೆ ರಕ್ಷಣೆಗೆ ಸಮಸ್ಯೆಯಾಗುತ್ತಿದೆ. ಈ ರಕ್ಷಣೆಗೆ ಅನುಕೂಲವಾಗಲು ಮೂರು ಹೆಲಿಕ್ಯಾಪ್ಟರ್‌ಗಳನ್ನ ನೀಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿದೆ.
10 ಯೋಧರು ನಾಪತ್ತೆ
ಇನ್ನೂ ಗಂಗೋತ್ರಿಯಲ್ಲಿ ಬೀಡುಬಿಟ್ಟಿರುವ ಎಸ್‌ಡಿಆರ್‌ಎಫ್ ತಂಡವು ಇಲ್ಲಿಯವರೆಗೆ ಧರಾಲಿಯಿಂದ 80ಕ್ಕೂ ಹೆಚ್ಚು ಜನರನ್ನು ರಕ್ಷಿಸಿದೆ. ಗಾಯಾಳುಗಳಿಗೆ ಹರ್ಷಿಲ್‌ನಲ್ಲಿರುವ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉತ್ತರಕಾಶಿಯ ಮೇಘಸ್ಫೋಟದಲ್ಲಿ, ಕೆಳ ಹರ್ಸಿಲ್ ಪ್ರದೇಶದ ಶಿಬಿರದಿಂದ 8-10 ಭಾರತೀಯ ಸೇನಾ ಸೈನಿಕರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಸೈನಿಕರ ನಷ್ಟಗಳ ಹೊರತಾಗಿಯೂ, ಬಾಕಿ ಉಳಿದ ಸೇನಾ ಸಿಬ್ಬಂದಿ ಪರಿಹಾರ ಕಾರ್ಯಾಚರಣೆ ಮುನ್ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.