ಹಿಮಗಾಳಿ ಬಳಿಕ ಎಲ್ಲೆಡೆ ಕಗ್ಗತ್ತಲು, ತಿಂದಿದ್ದು ಡ್ರೈಪ್ರೂಟ್ಸ್‌ ಮಾತ್ರ!

By
3 Min Read

– ಹಿಮಗಾಳಿಗೆ ಸಿಲುಕಿ ಬದುಕಿ ಬಂದ ಚಾರಣಿಗರ ಕರಾಳ ಅನುಭವ!

– ವಿಶೇಷ ವರದಿ

ಡೆಹ್ರಾಡೂನ್:‌ ಮಧ್ಯಾಹ್ನದವರೆಗೆ ಎಲ್ಲರೂ ಅಂದುಕೊಂಡಂತೆ ಟ್ರೆಕ್ಕಿಂಗ್.‌ ನಂತರ ಶುರುವಾಯ್ತು ಮಳೆ. ಅದರ ಬೆನ್ನಲ್ಲೇ ಬಂತು 90 ಕಿ.ಮೀ.ಗಿಂತಲೂ ಹೆಚ್ಚು ವೇಗದಲ್ಲಿ ಹಿಮಗಾಳಿ. ಆ ಬಳಿಕ ನಮಗ ಕಾಣಿಸಿದ್ದು ಕಗ್ಗತ್ತಲು ಮಾತ್ರ. ಉತ್ತರಾಖಂಡ್‌ನ (Uttarakhand) ಸಹಸ್ರತಾಲ್‌ಗೆ ಟ್ರೆಕ್ಕಿಂಗ್‌ಗೆ ಹೋಗಿ ಸಿಲುಕಿದ್ದ ಚಾರಣಿಗರು ತಾವು ಎದುರಿಸಿದ ಸಂಕಷ್ಟದ ಸಮಯವನ್ನು ವಿವರಿಸಿದ್ದಾರೆ. ತಾವು ಬದುಕಿ ಬಂದ ರೋಚಕ ಕತೆಯನ್ನು ಹೇಳಿಕೊಂಡಿದ್ದಾರೆ.

ಉತ್ತರಾಖಂಡ್‌ನ ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) 8 ಚಾರಣಿಗರನ್ನು ಬುಧವಾರ ಡೆಹ್ರಾಡೂನ್‌ಗೆ ವಾಪಸ್‌ ಕರೆತಂದಾಗ ಅವರ ಮುಖದಲ್ಲಿ ಭಯವು ಸ್ಪಷ್ಟವಾಗಿ ಕಾಣಿಸಿತು. ಚಾರಣಿಗರು ಆರೋಗ್ಯವಾಗಿದ್ದರೂ ಅವರು ಭಯಭೀತರಾಗಿದ್ದರು. ಕೆಲವರ ಧ್ವನಿಯೂ ಹೊರಬರುತ್ತಿರಲಿಲ್ಲ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ. ಎಸ್‌ಡಿಆರ್‌ಎಫ್ ತಂಡದವರು ಎಂಟು ಚಾರಣಿಗರನ್ನು ರಕ್ಷಿಸಿ ಡೆಹ್ರಾಡೂನ್‌ಗೆ ಕರೆತಂದು, ಇಲ್ಲಿನ ಕೊರೊನೇಷನ್ ಆಸ್ಪತ್ರೆಯಲ್ಲಿ ದಾಖಲಿಸಿದರು. ಇದನ್ನೂ ಓದಿ: ಉತ್ತರಾಖಂಡ ದುರಂತ- ಬದುಕುಳಿದ ಚಾರಣಿಗರು ಇಂದು ರಾತ್ರಿ ಬೆಂಗ್ಳೂರಿಗೆ ವಾಪಸ್

ಜೀವನಪೂರ್ತಿ ಮರೆಯೋಕಾಗಲ್ಲ!:
ಹಿಮಗಾಳಿಯ ನಡುವೆ 20 ಗಂಟೆಗೂ ಅಧಿಕ ಕಾಲ ಸಿಲುಕಿದ್ದ ಚಾರಣಿಗರು ಈ ಕರಾಳ ಅನುಭವವನ್ನು ಜೀವನಪೂರ್ತಿ ಮರೆಯಲು ಸಾಧ್ಯವೇ ಇಲ್ಲ. ಚಾರಣದ ನಡುವೆ ನಿಜಕ್ಕೂ ಏನಾಯಿತು ಎನ್ನುವುದನ್ನು ವಿವರಿಸಲೂ ಸಾಧ್ಯವಾಗುತ್ತಿರಲಿಲ್ಲ. ಅದರಲ್ಲೂ ಚಾರಣದಲ್ಲಿದ್ದವರು ಕೇವಲ ಡ್ರೈಫ್ರೂಟ್‌ ತಿಂದು ಜೀವ ಉಳಿಸಿಕೊಂಡಿದ್ದಾರೆ.

ಸಹಿಸಲಸಾಧ್ಯ ಚಳಿ ಶುರುವಾಯ್ತು!
ಉತ್ತರಕಾಶಿಯ ಮನೇರಿಯಲ್ಲಿರುವ ಹಿಮಾಲಯನ್ ವ್ಯೂ ಟ್ರೆಕ್ಕಿಂಗ್ ಏಜೆನ್ಸಿ ಸಹಯೋಗದೊಂದಿಗೆ ಮೇ 29 ರಂದು ಕರ್ನಾಟಕದ 22 ಚಾರಣಿಗರ ತಂಡವು ಸಹಸ್ರತಾಲ್‌ಗೆ ಚಾರಣವನ್ನು ಪ್ರಾರಂಭಿಸಿತು. ಅವರೊಂದಿಗೆ ಮೂವರು ಮಾರ್ಗದರ್ಶಕರು ಹಾಗೂ ಎಂಟು ಹೇಸರಗತ್ತೆಗಳು ಇದ್ದವು. ಜೂನ್ 2ರ ಸಂಜೆ ಇದ್ದಕ್ಕಿದ್ದಂತೆ ಹಿಮದ ಬಿರುಗಾಳಿ ಪ್ರಾರಂಭವಾಯಿತು. ಚಾರಣಿಗರು ಹೇಳುವ ಪ್ರಕಾರ, ಹಿಮ ಬಿರುಗಾಳಿಯ ವೇಗ ಗಂಟೆಗೆ 90 ಕಿ.ಮೀ. ಇರಬಹುದು. ಇದಾದ ನಂತರ ಕಣ್ಣೆದುರು ಕತ್ತಲು ಕವಿದಿತ್ತು. ತಂಡದಲ್ಲಿದ್ದವರೆಲ್ಲರೂ ಪರಸ್ಪರ ಪ್ರತ್ಯೇಕಗೊಳ್ಳಲು ಪ್ರಾರಂಭಿಸಿದರು. ಇದ್ದಕ್ಕಿದ್ದ ಹಾಗೆ ಚಳಿ ಹೆಚ್ಚಾಗಿ ಸಹಿಸಿಕೊಳ್ಳಲಾಗದೆ ಅಸಹನೀಯ ಅನ್ನಿಸಲು ಶುರುವಾಯಿತು. ಈ ಹಿಂದೆಯೂ ಚಾರಣಕ್ಕಾಗಿ ಉತ್ತರಾಖಂಡಕ್ಕೆ ಬಂದಿದ್ದೆ. ಆದರೆ ಈ ಬಾರಿ ಏನಾಯಿತು ಎಂಬುದನ್ನು ಜೀವನದಲ್ಲಿ ಎಂದಿಗೂ ಮರೆಯಲು ಸಾಧ್ಯವಾಗುವುದಿಲ್ಲ ಎಂದರು ಚಾರಣಿಗ ಜೈಪ್ರಕಾಶ್ ವಿ.ಎಸ್. ಇದನ್ನೂ ಓದಿ: ಉತ್ತರಾಖಂಡ ಹಿಮಪಾತ- ಬೆಂಗಳೂರಿನ ಪ್ರಸಿದ್ಧ ಬಹುರಾಷ್ಟ್ರೀಯ ಕಂಪನಿ ಉದ್ಯೋಗಿ ಸಾವು

ಸೋಮವಾರ ಸಂಜೆ ವೆಂಕಟೇಶ್ ಅವರಿದ್ದ ತಂಡವು ಸಹಸ್ರತಾಲ್ ಕಡೆಗೆ ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಭಾರೀ ಮಳೆ ಶುರುವಾಯಿತು. ನಂತರ ಹಿಮ ಗಾಳಿ ಬೀಸಲಾರಂಭಿಸಿತು ಎಂದು ಹೇಳಿದರು. ನಿಧಾನವಾಗಿ ಚಂಡಮಾರುತ ಬರಲಾರಂಭಿಸಿತು. ಇದರಿಂದಾಗಿ ನಾವಿದ್ದ ಜಾಗದಲ್ಲಿಯೇ ಉಳಿಯಬೇಕಾಯಿತು. ಕಗ್ಗತ್ತಲು ಆವರಿಸಿದ್ದರಿಂದ ಯಾರು ಎಲ್ಲಿದ್ದಾರೆ ಎಂದು ಗೊತ್ತಾಗ್ತಿರಲಿಲ್ಲ ಎಂದರು.

ಮೊಬೈಲ್‌ ಸಿಗ್ನಲ್‌ ಇಲ್ಲ, ಕಾಲ್‌ ಮಾಡೋದು ಹೇಗೆ..?
ಹಿಮಗಾಳಿಯ ತೀವ್ರತೆಯ ನಡುವೆಯೇ ಫೋನ್‌ ಕಾಲ್‌ ಮಾಡೋಣ ಎಂದು ನೋಡಿದರೆ ಮೊಬೈಲ್‌ನಲ್ಲಿ ನೆಟ್‌ವರ್ಕ್‌ ಇರಲಿಲ್ಲ. ಇದರಿಂದಾಗಿ ಯಾರಿಗೂ ಏನಾಗಿದೆ ಎಂಬ ವಿಚಾರ ತಿಳಿಸಲು ಸಾಧ್ಯವಾಗಲಿಲ್ಲ ಎಂದವರು ಚಾರಣದ ತಂಡದಲ್ಲಿದ್ದ ಸ್ಮೃತಿ ಪ್ರಕಾಶ್.‌ ಇದನ್ನೂ ಓದಿ: ಉತ್ತರಾಖಂಡದಲ್ಲಿ ಸಾವನ್ನಪ್ಪಿದ 9 ಚಾರಣಿಗರ ಮೃತದೇಹಗಳು ಚಾರ್ಟರ್ ಫ್ಲೈಟ್ ಮೂಲಕ ಬೆಂಗಳೂರಿಗೆ: ಕೃಷ್ಣಬೈರೇಗೌಡ

ಮೊಬೈಲ್‌ ಟಾರ್ಚ್‌ ಹಚ್ಚಿ ಮಾತುಕತೆ!
ಹಿಮಗಾಳಿಗೆ ಸಿಲುಕಿದ ಬಳಿಕ ಕತ್ತಲಾದಾಗ ಜೀವ ಉಳಿಸಿಕೊಳ್ಳುವುದು ಇನ್ನಷ್ಟು ಕಷ್ಟವಾಯಿತು. ಹೇಗೋ ಮೊಬೈಲಿನ ಟಾರ್ಚ್ ಹಚ್ಚಿ ಮಾತಾಡುತ್ತಾ ಒಬ್ಬರಿಗೊಬ್ಬರು ಸಮಾಧಾನ ಪಡಿಸುತ್ತಿದ್ದೆವು. ಬುಧವಾರ ಬೆಳಿಗ್ಗೆ ಹೆಲಿಕಾಪ್ಟರ್ ನಮ್ಮ ಬಳಿ ತಲುಪಿದಾಗ ನಾವು ಸುರಕ್ಷಿತವಾಗಿದ್ದೇವೆ ಎಂದೆನಿಸಿತು ಎಂದು ಹಿಮಗಾಳಿಯ ನಡುವೆ ಸಿಲುಕಿ, ಬದುಕಿ ಬಂದ ಬೆಚ್ಚಿ ಬೀಳುವ ಅನುಭವವನ್ನು ಸ್ಮೃತಿ ಪ್ರಕಾಶ್‌ ವಿವರಿಸಿದರು.

Share This Article