ಎಲ್ಲಾ ಜಿಲ್ಲೆಗಳಲ್ಲಿ ಸಂಸ್ಕೃತ ಗ್ರಾಮ ಅಭಿವೃದ್ಧಿಪಡಿಸಲು ಮುಂದಾದ ಉತ್ತರಾಖಂಡ

Public TV
1 Min Read

ಡೆಹ್ರಾಡೂನ್‌: ಉತ್ತರಾಖಂಡ ಸರ್ಕಾರವು ರಾಜ್ಯದ 13 ಜಿಲ್ಲೆಗಳಲ್ಲಿ ತಲಾ ಒಂದು ಸಂಸ್ಕೃತ ಮಾತನಾಡುವ ಗ್ರಾಮವನ್ನು ಅಭಿವೃದ್ಧಿಪಡಿಸಲು ನಿರ್ಧರಿಸಿದೆ.

ಈ ಮೂಲಕ ಸಂಸ್ಕೃತವನ್ನು ಉತ್ತೇಜಿಸಲು ಈ ಪ್ರಮಾಣದಲ್ಲಿ ಉಪಕ್ರಮವನ್ನು ಪ್ರಾರಂಭಿಸಿದ ದೇಶದ ಮೊದಲ ರಾಜ್ಯ ಉತ್ತರಾಖಂಡವಾಗಿದೆ. ಸಂಸ್ಕೃತವು ಉತ್ತರಾಖಂಡದ ಎರಡನೇ ಅಧಿಕೃತ ಭಾಷೆಯಾಗಿದೆ.

ಗ್ರಾಮಗಳ ನಿವಾಸಿಗಳಿಗೆ ಪ್ರಾಚೀನ ಭಾರತೀಯ ಭಾಷೆಯನ್ನು ದೈನಂದಿನ ಸಂವಹನ ಮಾಧ್ಯಮವಾಗಿ ಬಳಸಲು ತಜ್ಞರಿಂದ ತರಬೇತಿ ನೀಡಲಾಗುವುದು ಮತ್ತು ಸಂಸ್ಕೃತ ಶಿಕ್ಷಕರನ್ನು ಕಳುಹಿಸಲಾಗುವುದು ಎಂದು ಉತ್ತರಾಖಂಡದ ಸಂಸ್ಕೃತ ಶಿಕ್ಷಣ ಸಚಿವ ಧನ್ ಸಿಂಗ್ ರಾವತ್ ಹೇಳಿದ್ದಾರೆ.

ಭಾಷೆಯಲ್ಲಿ ಸಂವಹನ, ಸಂಸ್ಕೃತದಲ್ಲಿ ಪ್ರಾವೀಣ್ಯತೆ ಸಾಧಿಸಲು ಜನರಿಗೆ ವೇದಗಳು ಮತ್ತು ಪುರಾಣಗಳನ್ನು ಕಲಿಸಲಾಗುವುದು ಎಂದು ಅವರು ತಿಳಿಸಿದರು. ಇದನ್ನೂ ಓದಿ: Breaking-ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಕೋಲ್ಡ್ ವಾರ್: ಶಿವಣ್ಣ, ರವಿಚಂದ್ರನ್ ಸನ್ಮಾನ, ಅನುಮಾನ?

ಸಂಸ್ಕೃತ ಗ್ರಾಮ ಎಂದು ಕರೆಯಲ್ಪಡುವ ಹಳ್ಳಿಗಳು ಪ್ರಾಚೀನ ಭಾರತೀಯ ಸಂಸ್ಕೃತಿಯ ಕೇಂದ್ರವಾಗುತ್ತವೆ. ಯುವ ಪೀಳಿಗೆ ತನ್ನ ಪೂರ್ವಜರ ಭಾಷೆಯಲ್ಲಿ ಮಾತನಾಡುವಂತಿರಬೇಕು. ಯುವ ಪೀಳಿಗೆಯನ್ನು ಅದರ ಬೇರುಗಳಿಗೆ ಹತ್ತಿರಕ್ಕೆ ಕೊಂಡೊಯ್ಯುವುದರ ಜೊತೆಗೆ, ಈ ಗ್ರಾಮಗಳು ದೇಶಾದ್ಯಂತ ಮತ್ತು ವಿದೇಶಗಳಿಂದ ಬರುವ ಪ್ರವಾಸಿಗರಿಗೆ ಭಾರತದ ಪ್ರಾಚೀನ ಸಂಸ್ಕೃತಿಯ ಪರಿಚಯಿಸಲಿದೆ ಎಂದು ತಿಳಿಸಿದರು.

ತಿವೇಂದ್ರ ಸಿಂಗ್‌ ರಾವತ್‌ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಂಸ್ಕೃತ ಗ್ರಾಮಗಳನ್ನು ಅಭಿವೃದ್ಧಿಪಡಿಸುವ ಕಲ್ಪನೆಯನ್ನು ಮೊದಲು ರೂಪಿಸಲಾಯಿತು. ಆದರೆ ಯೋಜನೆಯು ಪ್ರಾರಂಭವಾಗಿರಲಿಲ್ಲ. ಈ ಹಿಂದೆ ಬಾಗೇಶ್ವರ ಮತ್ತು ಚಮೋಲಿ ಜಿಲ್ಲೆಯ ಎರಡು ಕಡೆ ಪ್ರಾಯೋಗಿಕವಾಗಿ ಜಾರಿಯಾಗಿತ್ತು. ಈಗ ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ಜಾರಿ ಮಾಡಲು ಸರ್ಕಾರ ಮುಂದಾಗಿದೆ.

ಪ್ರಸ್ತುತ ಭಾರತದಲ್ಲೇ ಸಂಸ್ಕೃತದಲ್ಲೇ ಸಂವಹನ ನಡೆಸುವ ಏಕೈಕ ಗ್ರಾಮ ಕರ್ನಾಟಕದಲ್ಲಿದೆ. ಶಿವಮೊಗ್ಗದ ನಗರದಿಂದ 10 ಕಿಲೋಮೀಟರ್ ದೂರದಲ್ಲಿರುವ ಮತ್ತೂರು ಗ್ರಾಮದಲ್ಲಿ ಸಂಸ್ಕೃತದಲ್ಲಿ ಸಂವಹನ ನಡೆಯುತ್ತಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *