ನವದೆಹಲಿ: ಉತ್ತರಾಖಂಡದ (Uttarakhand) ಧರಾಲಿ ಪ್ರದೇಶಗಳಲ್ಲಿ ಸಂಭವಿಸಿದ್ದು ಮೇಘಸ್ಫೋಟವಲ್ಲ (Cloudburst) ಬದಲಾಗಿ ಹಿಮಕೊಳ ಸ್ಫೋಟ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಉತ್ತರಾಖಂಡ ರಾಜ್ಯದ ಉತ್ತರಕಾಶಿ ಜಿಲ್ಲೆಯ ಧರಾಲಿ ಗ್ರಾಮದಲ್ಲಿ ಮಂಗಳವಾರ ಹಠಾತ್ (Flood) ಪ್ರವಾಹ ಸೃಷ್ಟಿಯಾಗಿ ಮನೆಗಳು, ಹೋಟೆಲ್‌ಗಳು ಮತ್ತು ಹೋಂಸ್ಟೇಗಳು ಕೊಚ್ಚಿ ಹೋಗಿದ್ದವು. ಆದರೆ ಇದು ಮೇಘಸ್ಪೋಟದಿಂದ ಸಂಭವಿಸಿಲ್ಲ ಎನ್ನುತ್ತಿದ್ದಾರೆ ಸಂಶೋಧಕರು.
ಒಂದು ಗಂಟೆಯೊಳಗೆ ಸೀಮಿತ ಪ್ರದೇಶದಲ್ಲಿ ಕನಿಷ್ಠ 100 ಮಿಲಿಮೀಟರ್ ಮಳೆಯಾದರೆ ಅದನ್ನು ಮೇಘಸ್ಫೋಟ ಎಂದು ಪರಿಗಣಿಸಲಾಗುತ್ತದೆ. ಆದರೆ ಉತ್ತರಕಾಶಿಯ ಹರ್ಸಿಲ್ ಮತ್ತು ಭಟ್ವಾರಿಯಲ್ಲಿ 24 ಗಂಟೆಗಳಲ್ಲಿ ಕ್ರಮವಾಗಿ 9 ಮಿ.ಮೀ. ಮತ್ತು 11 ಮಿ.ಮೀ. ಮಳೆಯಾಗಿದೆ. ಹಾಗಾಗಿ ಇದು ಮೇಘಸ್ಫೋಟವಲ್ಲ ಎಂದು ಡೂನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹಾಗೂ ಹಿಮಾಲಯ ಪ್ರದೇಶದ ಸಂಶೋಧಕ ಡಾ. ಡಿ.ಡಿ. ಚೌನಿಯಾಲ್ ಮಾಹಿತಿ ಹಂಚಿಕೊಂಡಿದ್ದಾರೆ.
ಜಲಸಮಾಧಿಯಾಗಿರುವ ಧರಾಲಿ ಗ್ರಾಮದ ಉತ್ತರದ ಹಿಮಾಚ್ಛಾದಿತ ಪರ್ವತಗಳಲ್ಲಿ ಹಲವು ಹಿಮಕೊಳಗಳಿವೆ. ಕಡಿದಾದ ಎತ್ತರದಲ್ಲಿರುವ ಈ ಪ್ರದೇಶದಲ್ಲಿ ಖೀರ್ ಗಂಗಾ ನದಿಯ ಉಗಮವಾಗುತ್ತೆ. ಈ ಭಾಗದಲ್ಲಿ ಭಾರೀ ಮಳೆ ಮತ್ತು ಹಿಮ ಕರಗುವಿಕೆಯಿಂದಾಗಿ, ಇಲ್ಲಿರುವ ಹಿಮಕೊಳಗಳು ತುಂಬಿವೆ. ಈ ಹಿಮಕೊಳಗಳ ಪೈಕಿ ಒಂದು ಸ್ಫೋಟಗೊಂಡಿದೆ. ಆ ಬಳಿಕ ಇತರ ಕೊಳಗಳೂ ಸ್ಫೋಟಗೊಳ್ಳುವಂತೆ ಮಾಡಿದೆ. ಅನಂತರ ನೀರು ಮತ್ತು ಶಿಲೆಗಳು ಪ್ರಬಲವಾಗಿ ಕೆಳಕ್ಕೆ ಹರಿದು, ಧರಾಲಿ ಗ್ರಾಮ ಕೊಚ್ಚಿಕೊಂಡು ಹೋಗಿದೆ ಎಂದು ಸಂಶೋಧಕ ಡಾ. ಡಿ.ಡಿ. ಚೌನಿಯಾಲ್ ವಿವರಿಸಿದ್ದಾರೆ. ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ಭೂಮಿ, 50% ಮೊತ್ತ ಭರಿಸಲು ನಿರಾಕರಣೆ; ಶಿವಮೊಗ್ಗ- ಹರಿಹರ ನಡುವಿನ ರೈಲ್ವೆ ಯೋಜನೆ ಸ್ಥಗಿತ
ಇಲ್ಲಿಯವರೆಗೂ ಈ ಘಟನೆಯಲ್ಲಿ ಮೂವರ ಸಾವಾಗಿದ್ದು, 60 ಕ್ಕೂ ಹೆಚ್ಚು ನಾಗರೀಕರ ರಕ್ಷಣೆ ಮಾಡಲಾಗಿದೆ. ಇನ್ನೂ 50ಕ್ಕೂ ಹೆಚ್ಚು ಜನರು, ಎಂಟು ಯೋಧರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರಿಗಾಗಿ ಶೋಧ ಕಾರ್ಯಮುಂದುವರೆದಿದೆ.
ಲೆಫ್ಟಿನೆಂಟ್ ಜನರಲ್ ಅನಿಂದ್ಯ ಸೇನ್‌ಗುಪ್ತಾ ಪ್ರತಿಕ್ರಿಯಿಸಿ, ಹರ್ಸಿಲ್ ಬಳಿ ಸಂಭವಿಸಿದ ಭೂಕುಸಿತ ಮತ್ತು ಪ್ರವಾಹದಿಂದಾಗಿ ಧರಾಲಿ ಗ್ರಾಮವು ಸಂಪೂರ್ಣವಾಗಿ ನಾಶವಾಗಿದೆ. ಈ ದುರಂತದಿಂದಾಗಿ ಧರಾಲಿ ಎಲ್ಲಾ ಸಂಪರ್ಕಗಳಿಂದ ಕಡಿತಗೊಂಡಿದೆ. ದಕ್ಷಿಣ ಹರ್ಸಿಲ್‌ನಲ್ಲಿರುವ ಸೇನಾ ಶಿಬಿರವೂ ಸಹ ನಾಶವಾಗಿದೆ ಎಂದಿದ್ದಾರೆ. ಭೂಕುಸಿತವು ದಕ್ಷಿಣ ಸೇನಾ ಶಿಬಿರವನ್ನು ಪ್ರವೇಶಿಸಿದಾಗ, 7 ಯೋಧರು ಮತ್ತು ಒಬ್ಬ ಜೆಸಿಓ (ಜೂನಿಯರ್ ಕಮಿಷನ್ಡ್ ಆಫೀಸರ್) ನಾಪತ್ತೆಯಾಗಿದ್ದಾರೆ. ಅಲ್ಲದೆ, 30-40 ಕಾರ್ಮಿಕರು ಸಹ ನಾಪತ್ತೆಯಾಗಿದ್ದಾರೆ. ಆರಂಭಿಕ ರಕ್ಷಣಾ ಕಾರ್ಯಾಚರಣೆಗಾಗಿ ಕಮಾಂಡಿಂಗ್ ಆಫೀಸರ್ ಕರ್ನಲ್ ಹರ್ಷ ವರ್ಧಾ ಮತ್ತು 150 ಕ್ಕೂ ಹೆಚ್ಚು ಸೈನಿಕರನ್ನ ನಿಯೋಜಿಸಲಾಗಿದೆ.
ಸೇನೆಯಿಂದ ಭರವಸೆ
ಹರ್ಸಿಲ್‌ನಿಂದ ಧರಾಲಿ ಗ್ರಾಮಕ್ಕೆ ಸುಲಭವಾಗಿ ಪ್ರಯಾಣಿಸಲು ಅನುಕೂಲವಾಗುವಂತೆ ಸಂಪರ್ಕವನ್ನು ಪುನಃಸ್ಥಾಪಿಸಲು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ಭಾರತೀಯ ಸೇನೆಯು ನಿಮ್ಮ ಜೊತೆ ನಿಲ್ಲುತ್ತದೆ ಮತ್ತು ಈ ವಿನಾಶದಿಂದ ಹೊರಬರಲು ನಿಮಗೆ ಸಹಾಯ ಮಾಡುತ್ತದೆ ಅಂತಾ ಸ್ಥಳಿಯ ನಿವಾಸಿಗಳಿಗೆ ಭರವಸೆ ನೀಡಿದ್ದಾರೆ.