ಉತ್ತರಕಾಶಿಯಲ್ಲಿ ಮೇಘಸ್ಫೋಟ – ಈವರೆಗೆ 274 ಮಂದಿ ರಕ್ಷಣೆ, ಪತ್ತೆಯಾಗದ 59 ಜನರು

Public TV
2 Min Read

ಹೆಲಿಕಾಪ್ಟರ್ ಬಳಸಿ ರಕ್ಷಣಾ ಕಾರ್ಯಾಚರಣೆ

ಡೆಹ್ರಾಡೂನ್: ಧರಾಲಿಯಲ್ಲಿ (Dharali) ಸಂಭವಿಸಿದ್ದ ಭೀಕರ ಮೇಘಸ್ಫೋಟದಲ್ಲಿ ಸಿಲುಕಿ ನಾಪತ್ತೆಯಾಗಿದ್ದವರ ಪೈಕಿ 274 ಜನರನ್ನು ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಲಾಗಿದೆ. ಇನ್ನೂ 59 ಜನರ ರಕ್ಷಣೆಗಾಗಿ ಶೋಧ ಕಾರ್ಯ ನಡೆದಿದೆ.

ಆ.5ರ ಮಧ್ಯಾಹ್ನ ಉತ್ತರಕಾಶಿಯ ಧರಾಲಿಯಲ್ಲಿ ಖೀರ್ ಗಂಗಾ ನದಿಯ ನೀರು ಭಾರೀ ಪ್ರಮಾಣದಲ್ಲಿ ಹರಿದು ಬಂದು ಮೇಘಸ್ಫೋಟ ಸಂಭವಿಸಿತ್ತು. ಪರಿಣಾಮ ಅಲ್ಲಿದ್ದ ಮನೆಗಳು, ಹೋಟೆಲ್, ಹೋಂಸ್ಟೇಗಳು ಸೇರಿ ಎಲ್ಲವೂ ಕೊಚ್ಚಿಕೊಂಡು ಹೋಗಿ ಸರ್ವನಾಶವಾಗಿತ್ತು. ಜೊತೆಗೆ ಗ್ರಾಮಸ್ಥರು, ಪ್ರವಾಸಿಗರು ಸೇರಿದಂತೆ ಹಲವರು ನಾಪತ್ತೆಯಾಗಿದ್ದರು. ಈವರೆಗೂ 274 ಜನರನ್ನು ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಲಾಗಿದೆ. ಈ ಪೈಕಿ ಗಂಗೋತ್ರಿ ಹಾಗೂ ಇತರ ಪ್ರವಾಸಿತಾಣಗಳಲ್ಲಿ ಸಿಲುಕಿಕೊಂಡಿದ್ದ ಗುಜರಾತ್‌ನ 131 ಮತ್ತು ಮಹಾರಾಷ್ಟ್ರದ 123 ಪ್ರವಾಸಿಗರನ್ನು ಉತ್ತರಕಾಶಿ ಹಾಗೂ ಡೆಹ್ರಾಡೂನ್‌ಗೆ ಸ್ಥಳಾಂತರಿಸಲಾಗಿದೆ.ಇದನ್ನೂ ಓದಿ: ಮೇಘಸ್ಫೋಟವಲ್ಲ ಉತ್ತರಾಖಂಡದಲ್ಲಿ ಸಂಭವಿಸಿದ್ದು ಹಿಮಕೊಳ ಸ್ಫೋಟ!

ನಾಪತ್ತೆಯಾದವರ ರಕ್ಷಣೆಗಾಗಿ ಪ್ಯಾರಾಮಿಲಿಟರಿ ಪಡೆ ಹಾಗೂ ವೈದ್ಯಕೀಯ ತಂಡಗಳು ಸರಕು ಸಾಗಾಣೆ ಮಾಡಲು ಬಳಸುವ ಚಿನೂಕ್ ಹೆಲಿಕಾಪ್ಟರ್ ಮತ್ತು ಏರ್-ಲಿಫ್ಟಿಂಗ್‌ನ್ನು ಬಳಸಿಕೊಳ್ಳುತ್ತಿವೆ. ಅದಲ್ಲದೇ ಇಂಡೋ ಟಿಬೆಟಿಯನ್ ಗಡಿ ಪೊಲೀಸರು ಉಪಯೋಗಿಸುವ ಹೆಲಿಕಾಪ್ಟರ್‌ಗಳನ್ನು ಕೂಡ ರಕ್ಷಣಾ ಕಾರ್ಯಾಚರಣೆಗಾಗಿ ಬಳಸಿಕೊಳ್ಳಲಾಗುತ್ತಿದೆ. ಇವುಗಳ ಬಳಕೆಯಿಂದಾಗಿ ರಕ್ಷಣಾ ಕಾರ್ಯ ಸುಗಮವಾಗಿ ಸಾಗುತ್ತಿದ್ದು, 50 ನಾಗರಿಕರು ಹಾಗೂ 9 ಸೈನಿಕರ ಪತ್ತೆಗಾಗಿ ಸದ್ಯ ಶೋಧ ಕಾರ್ಯ ಮುಂದುವರೆದಿದೆ.

ಸದ್ಯ ಘಟನಾ ಸ್ಥಳಕ್ಕೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಭೇಟಿ ನೀಡಿ, ಸಂತ್ರಸ್ತರೊಂದಿಗೆ ಮಾತನಾಡಿದ್ದಾರೆ. ಅಗತ್ಯವಿರುವ ಎಲ್ಲಾ ರೀತಿಯ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿಯೊಂದಿಗೆ ಮಾತನಾಡಿ ಮಾಹಿತಿ ಪಡೆದುಕೊಂಡಿದ್ದಾರೆ.

ಮೇಘಸ್ಫೋಟದಿಂದಾಗಿ ಧರಾಲಿ ಗ್ರಾಮವು ಸಂಪೂರ್ಣವಾಗಿ ನಾಶವಾಗಿದೆ. ಈ ದುರಂತದಿಂದಾಗಿ ಧರಾಲಿ ಎಲ್ಲಾ ಸಂಪರ್ಕಗಳಿಂದ ಕಡಿತಗೊಂಡಿದೆ. ದಕ್ಷಿಣ ಹರ್ಸಿಲ್‌ನಲ್ಲಿರುವ ಸೇನಾ ಶಿಬಿರವೂ ಸಹ ನಾಶವಾಗಿದೆ ಎನ್ನಲಾಗಿದೆ. ದುರಂತದಲ್ಲಿ ಈವರೆಗೂ 5 ಜನರು ಸಾವನ್ನಪ್ಪಿದ್ದು, ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.ಇದನ್ನೂ ಓದಿ: ಅಪ್ಪಾ.. ನಾವು ಬದುಕುಳಿಯಲ್ಲ, ಇಲ್ಲಿ ನೀರು ತುಂಬಿದೆ: ಉತ್ತರಾಖಂಡ ಪ್ರವಾಹದಲ್ಲಿ ಮಗನ ಕೊನೆ ಮಾತು ನೆನೆದು ತಂದೆ ಕಣ್ಣೀರು

Share This Article