ರಾಜ್ಯದ ಅತಿದೊಡ್ಡ ಶಿರಸಿಯ ಮಾರಿಕಾಂಬಾ ದೇವಿ ಜಾತ್ರೆ ಮಾರ್ಚ್ 3ರಿಂದ ಆರಂಭ

Public TV
2 Min Read

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ದಕ್ಷಿಣ ಭಾರತದ ಜಾಗೃತ ಶಕ್ತಿಪೀಠಗಳಲ್ಲಿ ಒಂದಾಗಿರುವ ಶಿರಸಿಯ ಮಾರಿಕಾಂಬಾ ದೇವಿಯ ಜಾತ್ರೆ ಮಾರ್ಚ್ 3ರಿಂದ 11ರವರೆಗೆ ನಡೆಸಲು ಆಡಳಿತ ಮಂಡಳಿ ತೀರ್ಮಾನಿಸಿದೆ.

ದೇವಾಲಯದಲ್ಲಿ ಇಂದು ನಡೆದ ಜಾತ್ರಾ ಮುಹೂರ್ತ ನಿಗದಿ ಸಭೆಯಲ್ಲಿ ಅರ್ಚಕ ಶರಣ ಆಚಾರ್ಯ ಜಾತ್ರೆಯ ದಿನಾಂಕವನ್ನು ಘೋಷಿಸಿದರು. ವಿಕಾರಿನಾಮ ಸಂವತ್ಸರದ ಫಾಲ್ಗುಣ ಶುಕ್ಲ ಅಷ್ಟಮಿಯಂದು ಜಾತ್ರೆ ಸಕಲ ಸಂಪ್ರದಾಯದೊಂದಿಗೆ ಆರಂಭವಾಗಲಿದೆ. ಜಾತ್ರಾ ಮಹೋತ್ಸವಕ್ಕೆ ಸಂಬಂಧಿಸಿದ ಪೂರ್ವ ವಿಧಿವಿಧಾನಗಳು ಜನವರಿ 22ರಿಂದ ಪ್ರಾರಂಭವಾಗಲಿವೆ.

ದೇವಿಯ ಪ್ರತಿಷ್ಠಾ ಮಂಟಪ ಜನವರಿ 22ರಂದು ಕಳಚುವುದು. ಫೆಬ್ರವರಿ 11ರಂದು ಪೂರ್ವದಿಕ್ಕಿಗೆ ಮೊದಲ ಹೊರಬೀಡು, ಫೆಬ್ರವರಿ 14ರಂದು ಉತ್ತರ ದಿಕ್ಕಿಗೆ 2ನೇ ಹೊರಬೀಡು, ಫೆಬ್ರವರಿ 18ರಂದು ಪೂರ್ವ ದಿಕ್ಕಿಗೆ 3ನೇ ಹೊರಬೀಡು, ಫೆಬ್ರವರಿ 21ರಂದು ರಥ ಕಟ್ಟಲು ಮರ ಕಡಿಯಲು ಹೋಗುವುದು, ಅದೇ ದಿನ ಉತ್ತರ ದಿಕ್ಕಿಗೆ 4ನೇ ಹೊರಬೀಡು, ಫೆಬ್ರವರಿ 25ರಂದು ರಥದ ಮರ ತರುವುದು, ಅದೇ ದಿನ ರಾತ್ರಿ ಪೂರ್ವದಿಕ್ಕಿಗೆ ಅಂಕೆಯ ಹೊರಬೀಡು ನಡೆಯಲಿದೆ ಎಂದು ಅರ್ಚಕ ಶರಣ ಆಚಾರ್ಯ ತಿಳಿಸಿದರು.

ಅಂಕೆ ಹಾಕುವುದು ಫೆ.26ರಂದು ನಡೆಯಲಿದ್ದು, ನಂತರ ದೇವಿಯ ವಿಸರ್ಜನೆ ನಡೆಯಲಿದೆ. ಮಾರ್ಚ್ 3ರ ಮಧ್ಯಾಹ್ನ 12:43 ಗಂಟೆಯಿಂದ ದೇವಿಯ ರಥದ ಕಲಶದ ಪ್ರತಿಷ್ಠೆ ಹಾಗೂ ರಾತ್ರಿ 11:11ರಿಂದ ಸಭಾ ಮಂಟಪದಲ್ಲಿ ದೇವಿಯ ಜಾತ್ರಾ ಕಲ್ಯಾಣ ಪ್ರತಿಷ್ಠೆ ನಡೆಯಲಿದೆ. ಮಾರ್ಚ್ 4ರಂದು ಬೆಳಗ್ಗೆ 7:05 ಗಂಟೆಯಿಂದ ದೇವಿಯ ರಥಾರೋಹಣ ನಡೆಯಲಿದ್ದು, ಮಧ್ಯಾಹ್ನ 12:43 ಗಂಟೆಯೊಳಗೆ ಜಾತ್ರಾ ಗದ್ದುಗೆಯಲ್ಲಿ ಪ್ರತಿಷ್ಠಾಪನೆ ಜರುಗುವುದು. ಮಾರ್ಚ್ 5ರಿಂದ ಭಕ್ತಾದಿಗಳ ಸೇವೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಅರ್ಚಕ ಶರಣ ಆಚಾರ್ಯ ಮಾಹಿತಿ ನೀಡಿದ್ದಾರೆ.

ಮಾರ್ಚ್ 11ರಂದು ಬೆಳಗ್ಗೆ 10.30 ಗಂಟೆಗೆ ಜಾತ್ರೆ ಮುಕ್ತಾಯವಾಗಲಿದೆ. ಮಾರ್ಚ್ 25 ಯುಗಾದಿಯಂದು ದೇವಿಯ ಪುನರ್ ಪ್ರತಿಷ್ಠೆ ನಡೆಯಲಿದೆ. ಜಾತ್ರಾ ಮುಹೂರ್ತ ನಿಗದಿ ಆಗುತ್ತಿದ್ದಂತೆ ಸಂಪ್ರದಾಯದ ಪ್ರಕಾರ ನಾಡಿಗ ಮನೆತನದ ಪ್ರಮುಖ ಅಜಯ್ ನಾಡಿಗ್ ದೇವಿ ಸಾನ್ನಿಧ್ಯದಲ್ಲಿ ದೀಪ ಬೆಳಗಿಸಿದರು. ನಂತರ ಸಭಿಕರ ಸಮ್ಮುಖದಲ್ಲಿ ಮಹಾಮಂಗಳಾರತಿ ನಡೆಯಿತು.

ಉಡುಪಿಯ ಶ್ರೀ ಪೇಜಾವರ ಸ್ವಾಮೀಜಿಗಳ ನಿಧನದ ಹಿನ್ನೆಲೆಯಲ್ಲಿ ಸರ್ಕಾರ ಮೂರು ದಿನಗಳ ಕಾಲ ಶೋಕಾಚರಣೆ ನಿಮಿತ್ತ ಜಾತ್ರಾ ಮಹೋತ್ಸವದ ಸಾರ್ವಜನಿಕ ಸಭೆಯನ್ನು ಮೊಟಕುಗೊಳಿಸಲಾಯಿತು. ಹೀಗಾಗಿ ಜನವರಿ 4ರ ಮಧ್ಯಾಹ್ನ ಪುನಃ ಸಾರ್ವಜನಿಕ ಸಭೆ ಕರೆಯಲಾಗಿದೆ.

ಜಾತ್ರಾ ಮಹೋತ್ಸವ ದಿನಾಂಕ ನಿಗದಿ ಸಭೆಯಲ್ಲಿ ಧರ್ಮದರ್ಶಿ ಮಂಡಳಿ ಅಧ್ಯಕ್ಷ ವೆಂಕಟೇಶ ನಾಯ್ಕ್, ಉಪಾಧ್ಯಕ್ಷ ಮನೋಹರ ಮಲ್ಮನೆ, ಲಕ್ಷ್ಮಣ ಖಾನಡೆ, ಸಹಾಯಕ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ, ಡಿವೈಎಸ್‍ಪಿ ಗೋಲಾಕೃಷ್ಣ ನಾಯ್ಕ್, ತಹಶೀಲ್ದಾರ್ ಎಂ.ಆರ್ ಕುಲಕರ್ಣಿ ಸೇರಿದಂತಡ ಬಾಬುದಾರ ಪ್ರಮುಖರು ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *