ಮದುವೆ, ಅಕ್ರಮ ಸಂಬಂಧ, ಚಿತ್ರಹಿಂಸೆ, ಗರ್ಭಪಾತ; ಪತಿಯ ಕಿರುಕುಳಕ್ಕೆ ನೊಂದಿದ್ದ ಗೃಹಿಣಿ ಸಾವು

Public TV
2 Min Read

– ವಿವಾಹವಾದ 5 ತಿಂಗಳಲ್ಲೇ ಸಾವಿನ ಮನೆ ಸೇರಿದ ಮಹಿಳೆ

ಲಕ್ನೋ: ಐದು ತಿಂಗಳ ಹಿಂದಷ್ಟೇ ಮರ್ಚೆಂಟ್ ನೇವಿ ಅಧಿಕಾರಿಯನ್ನು ಮದುವೆಗಿದ್ದ 32 ವರ್ಷದ ಮಹಿಳೆಯೊಬ್ಬಳು ಲಕ್ನೋದ ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.

ಆಕೆಯ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ತಿಳಿಸಿದ್ದಾರೆ. ಆದರೆ, ಮಧು ಸಿಂಗ್ ಕುಟುಂಬ ಸದಸ್ಯರು, ವರದಕ್ಷಿಣೆಗಾಗಿ ಆಕೆಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದಾರೆಂದು ಪತಿಯ ವಿರುದ್ಧ ಆರೋಪ ಮಾಡಿದ್ದಾರೆ. ನೇಣು ಬಿಗಿದುಕೊಂಡು ಸಾವು ಸಂಭವಿಸಿದೆ ಎಂದು ಮರಣೋತ್ತರ ಪರೀಕ್ಷೆ ದೃಢಪಡಿಸಿದೆ. ಆರೋಪಿ ಅನುರಾಗ್ ಸಿಂಗ್‌ನನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಅಂತರ್ಜಾತಿ ವಿವಾಹ ಆಗಿದ್ದಕ್ಕೆ ಮಗಳ ಮುಂದೆಯೇ ಅಳಿಯನನ್ನ ಗುಂಡಿಕ್ಕಿ ಕೊಂದ ಮಾವ

ಈ ವರ್ಷ ಫೆ.25 ರಂದು ಮಧು, ವೈವಾಹಿಕ ಸೋಷಿಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ ಮೂಲಕ ಸಂಪರ್ಕ ಸಾಧಿಸಿ ಅನುರಾಗ್‌ನನ್ನು ವಿವಾಹವಾಗಿದ್ದರು. ಅನುರಾಗ್ ಹಾಂಗ್‌ಕಾಂಗ್ ಮೂಲದ ಹಡಗು ನಿರ್ವಹಣಾ ಸಂಸ್ಥೆಯಲ್ಲಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ. ಮದುವೆಯ ಸಮಯದಲ್ಲಿ, 15 ಲಕ್ಷ ರೂ. ವರದಕ್ಷಿಣೆಯಾಗಿ ಬೇಡಿಕೆ ಇಟ್ಟಿದ್ದ ಎಂದು ಮಧು ಕುಟುಂಬವು ಆರೋಪಿಸಿದೆ. ಅವರ ಕುಟುಂಬ ಹಂಚಿಕೊಂಡ ವಾಟ್ಸಾಪ್ ಚಾಟ್‌ಗಳಲ್ಲಿ ಅನುರಾಗ್ 15 ಲಕ್ಷ ರೂ. ವರದಕ್ಷಿಣೆಗಾಗಿ ಬೇಡಿಕೆ ಇಟ್ಟಿರುವುದು ಬೆಳಕಿಗೆ ಬಂದಿದೆ.

ಮಧು ಅವರ ಕುಟುಂಬ ಸದಸ್ಯರು ಕೇವಲ 5 ಲಕ್ಷ ರೂ. ವರದಕ್ಷಿಣೆ ಕೊಡಬಹುದು ಎಂದು ಹೇಳಿದ್ದರು. ಆದರೆ, ಅನುರಾಗ್‌ ಇದಕ್ಕೆ ಒಪ್ಪಿರಲಿಲ್ಲ. ಮಧು ತಂದೆ ಫತೇ ಬಹದ್ದೂರ್ ಸಿಂಗ್ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ, ಮದುವೆಯ ನಂತರ ಅನುರಾಗ್ ಪದೇ ಪದೆ ಕರೆ ಮಾಡಿ ವರದಕ್ಷಿಣೆಗಾಗಿ ಒತ್ತಾಯಿಸುತ್ತಿದ್ದ ಎಂದು ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಮಹಿಳೆಯ ಬರ್ಬರ ಹತ್ಯೆ – ಕೊಲೆ ಬಳಿಕ ಆರೋಪಿಯೂ ನೇಣಿಗೆ ಶರಣು

ಮದುವೆಯ ಒಂದು ತಿಂಗಳಲ್ಲೇ ನಮ್ಮ ಮಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಅವಳು ತವರಿಗೆ ಬಂದಿದ್ದಳು. ನಂತರ ನಾವು ವರದಕ್ಷಿಣೆ ಕೊಟ್ಟೆವು. ಮಗಳು ಮತ್ತೆ ಗಂಡನ ಮನೆ ಸೇರಿದರು. ಆದರೆ, ಪದೇ ಪದೆ ಆಕೆಯನ್ನು ಗಂಡನ ಮನೆಯವರು ಹಿಂಸಿಸುತ್ತಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಅನುರಾಗ್ ವಿವಾಹೇತರ ಸಂಬಂಧ ಹೊಂದಿದ್ದಾನೆ. ಇತ್ತೀಚೆಗೆ ತನ್ನ ಮಾಜಿ ಗೆಳತಿಯೊಂದಿಗೆ ನಗರದ ಹೋಟೆಲ್‌ನಲ್ಲಿ ಒಂದು ರಾತ್ರಿ ಕಳೆದಿದ್ದಾನೆ ಎಂದು ಮಧು ತಂದೆ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ನನ್ನ ಮಗಳು ಗರ್ಭಿಣಿಯಾಗಿದ್ದಳು. ಗರ್ಭಪಾತ ಮಾಡಿಸುವಂತೆ ಪತಿ ಒತ್ತಾಯಿಸುತ್ತಿದ್ದ. ಮಧು ಸಾವನ್ನಪ್ಪುವ ನಾಲ್ಕು ದಿನಗಳ ಮೊದಲು, ಜು.31 ರಂದು ಹೋಟೆಲ್ ಬುಕಿಂಗ್‌ನ ವಿವರಗಳನ್ನು ಕುಟುಂಬ ಹಂಚಿಕೊಂಡಿದೆ. ಆ.3 ರಂದು, ಅನುರಾಗ್ ತನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಮಧು ನಮಗೆ ತಿಳಿಸಿದ್ದಳು. ಮಾರನೆ ದಿನವೇ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಗಂಡನ ಮನೆಯಿಂದ ನಮಗೆ ಕರೆ ಬಂತು. ಇದು ಕೊಲೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Share This Article