ಪಿಎಫ್‍ಐ ಸಂಘಟನೆ ನಿಷೇಧಿಸುವಂತೆ ಗೃಹ ಸಚಿವಾಲಯಕ್ಕೆ ಪೊಲೀಸರಿಂದ ಪತ್ರ

Public TV
2 Min Read

– ಹಿಂಸಾಚಾರದಲ್ಲಿ ಪ್ರಮುಖ ಪಾತ್ರದ ಆರೋಪ
– ಸಾಮಾಜಿಕ ಜಾಲತಾಣಗಳಿಂದ ಪ್ರಚೋದನೆ

ನವದೆಹಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‍ಐ) ಸಂಘಟನೆಯನ್ನು ನಿಷೇಧಿಸುವಂತೆ ಉತ್ತರ ಪ್ರದೇಶ ಪೊಲೀಸ್ ಇಲಾಖೆ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದೆ.

ಉತ್ತರ ಪ್ರದೇಶದಲ್ಲಿ ನಡೆದ ಭಾರೀ ಹಿಂಸಾಚಾದಲ್ಲಿ ಸಂಘಟನೆ ಪ್ರಮುಖ ಪಾತ್ರ ವಹಿಸಿದೆ ಎಂದು ಪೊಲೀಸರು ಆರೋಪಿಸಿದ್ದು, ಇದಕ್ಕೆ ಸೂಕ್ತ ದಾಖಲೆಗಳನ್ನು ಸಹ ಕೇಂದ್ರ ಗೃಹ ಸಚಿವಾಲಯಕ್ಕೆ ಸಲ್ಲಿಸಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ಪಿಎಫ್‍ಐ ಸಂಘಟನೆಯ ಕಾರ್ಯಕರ್ತರು ಹಿಂಸಾಚಾರ ನಡೆಸಿದ್ದಾರೆ. ಈ ಮೂಲಕ ಯುಪಿಯ ಹಿಂಸಾಚಾರದಲ್ಲಿ ಪ್ರಮುಖ ಪಾತ್ರವಹಿಸಿದ್ದು, ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿಗೆ ಕಾರಣರಾಗಿದ್ದಾರೆ ಎಂದು ಗೃಹ ಸಚಿವಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಲ್ಲದೆ ಯುಪಿ ರಾಜಧಾನಿ ಲಕ್ನೋದಲ್ಲಿ ನಡೆದ ಹಿಂಸಾಚಾರದ ಮಾಸ್ಟರ್ ಮೈಂಡ್ ಪಿಎಫ್‍ಐ ಸಂಘಟನೆಯಾಗಿದೆ. ಸಿಎಎ ಕುರಿತು ಪ್ರತಿಭಟನೆಯ ವೇಳೆ ಪ್ರತಿಭಟನಾಕಾರರನ್ನು ಹಿಂಸಾಚಾರಕ್ಕೆ ಪ್ರಚೋದಿಸಿದೆ. ಈ ಕುರಿತು ಪಿಎಫ್‍ಐ ಮುಖ್ಯಸ್ಥ ಹಾಗೂ ಖಜಾಂಚಿ ಹಿಂಸಾಚಾರದಲ್ಲಿ ತಮ್ಮ ಪಾತ್ರವಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಿಎಫ್‍ಐ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದಾರೆ. ಅಲ್ಲದೆ ಸಿಕ್ಕ ಸಿಕ್ಕ ಕಡೆ ಬೆಂಕಿ ಹಚ್ಚುವಂತೆ ಭಾಗವಹಿಸಿದ್ದ ಪ್ರತಿಭಟನಾಕಾರರಿಗೆ ಪ್ರಚೋದನೆ ನೀಡಿರುವುದು ಪೊಲೀಸರ ತನಿಖೆ ವೇಳೆ ಬಯಲಾಗಿದೆ. ಹೀಗಾಗಿ ಯುಪಿ ಪೊಲೀಸರು ಸಿಎಎ ಪ್ರತಿಭಟನೆ ವೇಳೆ ಹಿಂಸಾಚಾರದಲ್ಲಿ ತೊಡಗಿದ ವಾಸಿಮ್, ನದೀಮ್ ಹಾಗೂ ಅಶ್ಫಾಕ್ ಮೂವರು ಪಿಎಫ್‍ಐ ಸದಸ್ಯರನ್ನು ಬಂಧಿಸಿದ್ದಾರೆ. ವಾಸಿಮ್ ಯುಪಿ ಪಿಎಫ್‍ಐ ಮುಖ್ಯಸ್ಥನಾಗಿದ್ದು, ಅಶ್ಫಾಕ್ ಖಜಾಂಚಿಯಾಗಿದ್ದಾನೆ. ನದೀಮ್ ಸಂಘಟನೆಯ ಕಾರ್ಯಕರ್ತನಾಗಿದ್ದಾನೆ.

ತನಿಖೆ ವೇಳೆ ಪೊಲೀಸರು ಈ ಮೂವರಿಂದ ಸಿಎಎ ಪ್ರತಿಭಟನೆಗೆ ಸಂಬಂಧಿಸಿದ ಭಿತ್ತಿ ಪತ್ರಗಳು, ಬಾವುಟಗಳು, ಬರವಣಿಗೆ, ಪೋಸ್ಟರ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ನದೀಮ್ ಹಾಗೂ ಅಶ್ಫಾಕ್ ಅವರು ಈ ಕುರಿತು ತಪ್ಪೊಪ್ಪಿಕೊಂಡಿದ್ದು, ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಸಿಎಎ ವಿರುದ್ಧದ ಪ್ರತಿಭಟನೆಯ ಸಂದೇಶ ಕಳುಹಿಸುತ್ತಿದ್ದೆವು. ವಾಟ್ಸಪ್, ಟೆಲಿಗ್ರಾಂ ಬಳಸಿ ವಿಡಿಯೋ ಹಾಗೂ ಬರವಣಿಗೆ ಮೂಲಕ ಮಾಹಿತಿ ಹಂಚುತ್ತಿದ್ದೆವು ಎಂದು ತಿಳಿಸಿದ್ದಾರೆ.

ಯುಪಿಯ ಶಾಮ್ಲಿಯಲ್ಲಿ ಸಿಎಎ ವಿರುದ್ಧದ ಪ್ರತಿಭಟನೆಯಲ್ಲಿ ತೊಡಗಿದ್ದ 14 ಪಿಎಫ್‍ಐ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಮೀರತ್‍ನಲ್ಲಿ ಸಹ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಿಎಎ ವಿರುದ್ಧ ನಡೆದ ಪ್ರತಿಭಟನೆ ವೇಳೆ ಒಟ್ಟು 20 ಜನ ಸಾವನ್ನಪ್ಪಿದ್ದು, ಇದರಲ್ಲಿ ಬಹುತೇಕರು ಉತ್ತರ ಪ್ರದೇಶದವರಾಗಿದ್ದಾರೆ. ಉತ್ತರ ಪ್ರದೇಶದ ಡಿಜಿಪಿ ಒ.ಪಿ.ಸಿಂಗ್ ಅವರು ಈ ಕುರಿತು ಮಂಗಳವಾರ ಪ್ರತಿಕ್ರಿಯಿಸಿ, ಪಿಎಫ್‍ಐ ಸಂಘಟನೆಯನ್ನು ನಿಷೇಧಿಸುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದೇವೆ ಎಂದು ಖಚಿತಪಡಿಸಿದ್ದಾರೆ.

ಈ ಮಧ್ಯೆ ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಅವರು ಪ್ರತಿಕ್ರಿಯಿಸಿ, ಪೊಲೀಸರು ಪಿಎಫ್‍ಐ ಬ್ಯಾನ್ ಮಾಡುವ ಕುರಿತು ದಾಖಲೆಗಳನ್ನು ಸಲ್ಲಿಸಿದ್ದು, ಅವುಗಳನ್ನು ಆಧರಿಸಿ ಕೇಂದ್ರ ಗೃಹ ಸಚಿವಾಲಯ ನಿರ್ಧಾರ ಕೈಗೊಳ್ಳಲಿದೆ. ಹಿಂಸಾಚಾರದಲ್ಲಿ ಪಿಎಫ್‍ಐ ಪಾತ್ರವಿರುವುದು ಕಂಡು ಬಂದಿದೆ. ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಗೃಹ ಸಚಿವಾಲಯ ನಿರ್ಧಾರ ಕೈಗೊಳ್ಳಲಿದೆ. ಸಂಘಟನೆ ಕುರಿತು ಹಲವು ಆರೋಪಗಳಿದ್ದು, ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾದೊಂದಿಗೆ ಸಂಪರ್ಕ ಹೊಂದಿತ್ತು ಎಂಬ ಆರೋಪ ಸಹ ಇದೆ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *