ವರದಕ್ಷಿಣೆಯಾಗಿ ಬೈಕ್ ನೀಡದ್ದಕ್ಕೆ ಪತ್ನಿಗೆ ಫೋನ್ ಮಾಡಿ ತಲಾಖ್ ಕೊಟ್ಟ!

Public TV
2 Min Read

ಲಕ್ನೋ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ತ್ರಿವಳಿ ತಲಾಖ್ ನಿಷೇಧಿಸುವ ಸುಗ್ರೀವಾಜ್ಞೆಗೆ ಅಂಕಿತ ಹಾಕಿ ಒಂದು ತಿಂಗಳು ಕೂಡ ಕಳೆದಿಲ್ಲ. ಇದರ ಬೆನ್ನಲ್ಲೇ ವರದಕ್ಷಿಣೆ ನೀಡಲಿಲ್ಲ ಅಂತಾ ಪತಿಯೊಬ್ಬ ಫೋನ್ ಮಾಡಿ ಪತ್ನಿಗೆ ತಲಾಖ್ ನೀಡಿದ್ದಾನೆ.

ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಸೌದಿ ಅರೆಬಿಯಾದಲ್ಲಿ ಕೆಲಸ ಮಾಡುತ್ತಿರುವ ಪತಿ, ಅಲ್ಲಿಂದಲೇ ಪತ್ನಿಗೆ ತಲಾಖ್ ನೀಡಿದ್ದಾನೆ. ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಈ ಕುರಿತು ಪೊಲೀಸರು ಗುರುವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವರದಕ್ಷಿಣೆ ನೀಡುವಂತೆ ಅಳಿಯನ ಸಂಬಂಧಿಕರು ನನ್ನ ಮಗಳಿಗೆ ಕಿರುಕುಳ ಕೊಟ್ಟಿದ್ದಾರೆ. ತಕ್ಷಣವೇ ಹಣ ನೀಡುವಂತೆ ಕೇಳಿದ್ದರು. ಮದುವೆಯ ಬಳಿಕ ಉದ್ಯೋಗಕ್ಕಾಗಿ ಅಳಿಯ ಸೌದಿ ಅರೆಬಿಯಾಕ್ಕೆ ತೆರಳಿದ್ದಾನೆ. ಈ ವೇಳೆ ವರದಕ್ಷಿಣೆ ನೀಡುವಂತೆ ಆತನ ಸಂಬಂಧಿಕರು ಮಗಳಿಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದರು. ಹೀಗಾಗಿ ಆಕೆಯನ್ನು ಮನೆಗೆ ಕರೆದುಕೊಂಡು ಬಂದಿದ್ದೇವು ಎಂದು ಸಂತ್ರಸ್ತೆಯ ತಾಯಿ ರೇಷ್ಮಾ ತಿಳಿಸಿದ್ದಾರೆ.

ನಮ್ಮಿಂದ ವರದಕ್ಷಿಣೆ ಹಣ ಹೊಂದಿಸಲು ಸಾಧ್ಯವಾಗಿರಲಿಲ್ಲ. ಅಷ್ಟೇ ಅಲ್ಲದೆ ನಮ್ಮ ಮಗಳನ್ನು ಮನೆಗೆ ಕರೆದುಕೊಂಡು ಬಂದಿದ್ದಕ್ಕೆ ಕೋಪಗೊಂಡ ಅಳಿಯ, ಸೌದಿ ಅರೆಬಿಯಾದಲ್ಲಿ ಇದ್ದುಕೊಂಡೇ ಮಗಳಿಗೆ ಫೋನ್ ಮಾಡಿ ತಲಾಖ್ ಹೇಳಿ ವಿಚ್ಛೇದನ ಹೇಳಿದ್ದಾನೆ ಎಂದು ಆರೋಪಿದ್ದಾರೆ.

ವರದಕ್ಷಿಣೆ ಕೇಳಿದ್ದೇಷ್ಟು?
8 ತಿಂಗಳ ಹಿಂದಷ್ಟೇ ಮದುವೆಯಾಗಿದ್ದು, ಆಗ 50 ಸಾವಿರ ರೂ. ಹಾಗೂ ಒಂದು ಬೈಕ್ ನೀಡುವಂತೆ ಬೇಡಿಕೆ ಇಟ್ಟಿದ್ದ. ಆದರೆ ನಮ್ಮಿಂದ ಆತನ ಬೇಡಿಕೆಯನ್ನು ಈಡೇರಿಸಲು ಆಗಲಿಲ್ಲ. ಮದುವೆಯ ಬಳಿಕ ಪತಿ ಉದ್ಯೋಗಕ್ಕಾಗಿ ಸೌದಿ ಅರೆಬಿಯಾಗೆ ಹೋಗಿದ್ದ. ಈ ವೇಳೆ ಪತಿಯ ಸಂಬಂಧಿಕರು ಕಿರುಕುಳ ನೀಡುತ್ತಿದ್ದರು ಎಂದು ಸಂತ್ರಸ್ತೆ ನೂರಿ ಆರೋಪಿಸಿದ್ದಾರೆ.

ಈ ಸಂಬಂಧ ಮುಸ್ಲಿಂ ಮಹಿಳೆಯರ (ಮದುವೆ ಹಕ್ಕುಗಳ ರಕ್ಷಣೆ) ಕಾಯ್ದೆ ಹಾಗೂ ಸಂಬಂಧಿಸಿದ ಐಪಿಸಿ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿಕೊಂಡಿದ್ದು, ಅಗತ್ಯ ಕ್ರಮ ಕೈಗೊಳ್ಳಲಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಇಂತಹದ್ದೇ ಪ್ರಕರಣವೊಂದು ಹೈದರಾಬಾದ್‍ನಲ್ಲಿ ನಡೆದಿದ್ದು, ಪತಿ 62 ವರ್ಷದ ಪತಿಯೊಬ್ಬ ಹುಮ ಸೈರಾ (29) ಪತ್ನಿಗೆ ವಾಟ್ಸಪ್ ಮೂಲಕ ತಲಾಕ್ ನೀಡಿದ್ದ. ಇದನ್ನು ಓದಿ: ವಾಟ್ಸಪ್ ಮೂಲಕ 29ರ ಪತ್ನಿಗೆ ತಲಾಖ್ ಕೊಟ್ಟ 62ರ ಪತಿ!

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Share This Article
Leave a Comment

Leave a Reply

Your email address will not be published. Required fields are marked *