ಯೋಗಿ ಆದಿತ್ಯನಾಥ್‌ರ ಬಳಿಯಿದೆ 1.54 ಕೋಟಿ ಆಸ್ತಿ – 1 ಲಕ್ಷ ಮೌಲ್ಯದ ರಿವಾಲ್ವರ್‌

Public TV
1 Min Read

ಲಕ್ನೋ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮ ಒಟ್ಟು ಆಸ್ತಿ ಮೌಲ್ಯ 1,54,94,054 ರೂ. ಎಂದು ಘೋಷಿಸಿದ್ದಾರೆ.

ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಶುಕ್ರವಾರ ಗೋರಖ್‍ಪುರ ನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಆಸ್ತಿ ವಿವರವನ್ನು ನೀಡಿದ್ದು, ಅದರಲ್ಲಿ ಬ್ಯಾಂಕ್ ಖಾತೆಗಳ ಬಾಕಿ ಹಾಗೂ ಸ್ಥಿರ ಠೇವಣಿಗಳನ್ನು ಒಳಗೊಂಡಿದೆ.

49,000 ಮೌಲ್ಯದ 20 ಗ್ರಾಂ ತೂಕದ ಚಿನ್ನದ ಕಿವಿಯೋಲೆ ಮತ್ತು 20,000 ಮೌಲ್ಯದ 10 ಗ್ರಾಂ ತೂಕದ ರುದ್ರಾಕ್ಷಿ ಹೊಂದಿರುವ ಚಿನ್ನದ ಸರ ಹಾಗೂ 12,000 ಬೆಲೆಯ ಸ್ಮಾರ್ಟ್‍ಫೋನ್ ಅನ್ನು ಹೊಂದಿದ್ದಾರೆ. ಜೊತೆಗೆ ಯೋಗಿ ಆದಿತ್ಯನಾಥ್ ಅವರು ರಿವಾಲ್ವರ್ ಹಾಗೂ ರೈಫಲ್‍ನ್ನು ಹೊಂದಿದ್ದು ಅವುಗಳ ಮೌಲ್ಯಗಳು ಕ್ರಮವಾಗಿ 1,00,000 ಹಾಗೂ 80,000 ಇದೆ ಎಂದು ಘೋಷಿಸಿದ್ದಾರೆ. ಇದನ್ನೂ ಓದಿ: ಗೋವಾ ಚುನಾವಣೆಯಲ್ಲಿ ಬಿಜೆಪಿ – ಕಾಂಗ್ರೆಸ್ ನೇರ ಪೈಪೋಟಿ: ರಾಹುಲ್ ಗಾಂಧಿ

ಒಟ್ಟಾರೆಯಾಗಿ 2016-17ರಲ್ಲಿ 8,40,998 ರೂ. ಗಳಿದ್ದ ಅವರ ಆದಾಯವು 2020-21 ರ 13,20,653ಗಳಷ್ಟು ಹೆಚ್ಚಾಗಿದೆ. ಆದರೆ ಅವರ ಹೆಸರಿನಲ್ಲಿ ಈ ಬಾರಿಯೂ ಯಾವುದೇ ವಾಹನ ನೋಂದಣಿಯಾಗಿಲ್ಲ.

ಗೋರಖ್‍ಪುರದಿಂದ ಐದು ಬಾರಿ ಸಂಸದರಾಗಿರುವ ಯೋಗಿ ಆದಿತ್ಯನಾಥ್ ಅವರು ಮೊದಲ ಬಾರಿಗೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಿರುವುದು ಗಮನಾರ್ಹವಾಗಿದೆ. ಗೋರಖ್‍ಪುರ ನಗರ ಕ್ಷೇತ್ರಕ್ಕೆ ಮಾರ್ಚ್ 3 ರಂದು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಆರನೇ ಹಂತದ ಮತದಾನ ನಡೆಯಲಿದೆ. ಇದನ್ನೂ ಓದಿ: ವಿಧಾನಸಭೆ ಚುನಾವಣಾ ಅಖಾಡಕ್ಕೆ ಯೋಗಿ – ಮೊದಲ ಬಾರಿ ಆದಿತ್ಯನಾಥ್ ನಾಮಪತ್ರ ಸಲ್ಲಿಕೆ

ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23, 27 ಮತ್ತು ಮಾರ್ಚ್ 3 ಮತ್ತು 7 ರಂದು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

Share This Article
Leave a Comment

Leave a Reply

Your email address will not be published. Required fields are marked *