ಒಂದೇ ಕ್ಷೇತ್ರದಲ್ಲಿ ಸ್ಪರ್ಧಿಸಲು ಒಂದೇ ಪಕ್ಷದಿಂದ ಟಿಕೆಟ್‌ಗಾಗಿ ಪತಿ-ಪತ್ನಿ ಫೈಟ್!

Public TV
2 Min Read

ಲಕ್ನೋ: ರಾಜಕೀಯದಲ್ಲಿ ಕುಟುಂಬದ ಸದಸ್ಯರೇ ಪರಸ್ಪರ ಜಿದ್ದಾಜಿದ್ದಿಗಳಿಯುವ ಹಲವಾರು ಪ್ರಸಂಗಗಳನ್ನು ನೋಡಿದ್ದೇವೆ. ಅಂತೆಯೇ ಉತ್ತರ ಪ್ರದೇಶದಲ್ಲೂ ಪತಿ-ಪತ್ನಿ ಒಂದೇ ಪಕ್ಷದಿಂದ ಟಿಕೆಟ್‌ಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಉತ್ತರ ಪ್ರದೇಶದ ಕುತೂಹಲಕಾರಿ ರಾಜಕೀಯ ಬೆಳವಣಿಗೆ ಈಗ ದೇಶದೆಲ್ಲೆಡೆ ಸುದ್ದಿಯಾಗಿದೆ.

ಸ್ವಾತಿ ಸಿಂಗ್ ಅವರು ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರದಲ್ಲಿ ಮಹಿಳಾ ಕಲ್ಯಾಣ ಸಚಿವರಾಗಿದ್ದಾರೆ. ಇವರ ಪತಿ ದಯಾಶಂಕರ್ ಅದೇ ಪಕ್ಷದ ರಾಜ್ಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈಗ ಇಬ್ಬರೂ ಬಿಜೆಪಿಯಿಂದ ಸರೋಜಿನಿ ನಗರ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಪತಿ-ಪತ್ನಿ ಇಬ್ಬರೂ ಒಂದೇ ಪಕ್ಷದಿಂದ ಒಂದೇ ಕ್ಷೇತ್ರದಿಂದ ಟಿಕೆಟ್‌ಗಾಗಿ ಪೈಪೋಟಿ ನಡೆಸುತ್ತಿರುವುದು ಕುತೂಹಲ ಮೂಡಿಸಿದೆ. ಸ್ವಾತಿ ಸಿಂಗ್ ಪ್ರಸ್ತುತ ಸರೋಜಿನಿ ನಗರ ಕ್ಷೇತ್ರದ ಹಾಲಿ ಶಾಸಕಿಯಾಗಿದ್ದಾರೆ. ಇದನ್ನೂ ಓದಿ: Goa Election: ಅಮಿತ್ ಪಾಲೇಕರ್ ಎಎಪಿ ಮುಖ್ಯಮಂತ್ರಿ ಅಭ್ಯರ್ಥಿ

ದಯಾಶಂಕರ್ 2016ರಲ್ಲಿ ಮಾಯಾವತಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಸುದ್ದಿಯಾಗಿದ್ದರು. ಇದನ್ನು ಬಿಎಸ್‌ಪಿ ನಾಯಕರು ಪ್ರತಿಭಟಿಸಿದ್ದರಿಂದ ಹಾಗೂ ಮಾಯಾವತಿ ಅವರು ರಾಜ್ಯಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ್ದರಿಂದ, ಬಿಜೆಪಿ ದಯಾಶಂಕರ್ ಅವರನ್ನು ಅಮಾನತುಗೊಳಿಸಿತು. ನಂತರ ಅವರು ಬಂಧನಕ್ಕೊಳಗಾಗಿದ್ದರು.

ಈ ಘಟನೆಯಾದ ಬಳಿಕ 2017ರ ವಿಧಾನಸಭಾ ಚುನಾವಣೆಯಲ್ಲಿ ಸರೋಜಿನಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ವಾತಿ ಸಿಂಗ್, ಬಿಎಸ್‌ಪಿ ಅಭ್ಯರ್ಥಿ ವಿರುದ್ಧ ಸ್ಪರ್ಧಿಸಿ ಅಭೂತಪೂರ್ವ ಜಯ ಸಾಧಿಸಿದರು. ಚುನಾವಣೆಯಲ್ಲಿ ಪತ್ನಿಯ ಬೆಂಬಲಕ್ಕೆ ನಿಂತು ಗೆಲುವಿಗೆ ಕಾರಣವಾಗಿದ್ದ ದಯಾಶಂಕರ್ ಅಮಾನತನ್ನು ನಂತರ ಬಿಜೆಪಿ ರದ್ದುಗೊಳಿಸಿತು. ಸ್ವಾತಿ ಸಿಂಗ್ ಅವರನ್ನು ಯೋಗಿ ಸಂಪುಟಕ್ಕೆ ಸೇರಿಸಿಕೊಳ್ಳಲಾಯಿತು. ಇದನ್ನೂ ಓದಿ: BJP ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳುವುದು ಪಕ್ಷದ ಮೊದಲ ಗುರಿ: ಓವೈಸಿ

ಈಗ ಪತಿ-ಪತ್ನಿ ಇಬ್ಬರೂ ಪೈಪೋಟಿಗೆ ಇಳಿದಿದ್ದಾರೆ. ಬಿಜೆಪಿಯಿಂದ ಸರೋಜಿನಿ ನಗರ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇದರಿಂದ ಇಕ್ಕಿಟ್ಟಿಗೆ ಸಿಲುಕಿರುವ ಬಿಜೆಪಿ, ಯಾರಿಗೆ ಟಿಕೆಟ್ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ.

ಈ ಕುರಿತು ದಯಾಂಶಕರ್ ಪ್ರತಿಕ್ರಿಯಿಸಿದ್ದು, ಪಕ್ಷ ನನಗೆ ಟಿಕೆಟ್ ನೀಡಿದರೆ ಸ್ಪರ್ಧಿಸುತ್ತೇನೆ. ಪಕ್ಷಕ್ಕಾಗಿ ನಾನು ಪರಿಶ್ರಮದಿಂದ ದುಡಿದಿದ್ದೇನೆ ಎಂದು ಹೇಳಿದ್ದಾರೆ.

ಪತಿಯೇ ತನ್ನ ವಿರುದ್ಧ ಟಿಕೆಟ್ ಆಕಾಂಕ್ಷಿಯಾಗಿರುವ ಬಗ್ಗೆ ಪ್ರತಿಕ್ರಿಯಿಸಲು ಸಚಿವೆ ಸ್ವಾತಿ ಸಿಂಗ್ ಸಂಪರ್ಕಕ್ಕೆ ಸಿಕ್ಕಿಲ್ಲ. ಅವರು ಚುನಾವಣೆ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.

ಈ ಬಗ್ಗೆ ಬಿಜೆಪಿ ನಾಯಕರೊಬ್ಬರು ಪ್ರತಿಕ್ರಿಯಿಸಿದ್ದು, ಗೆಲ್ಲುವ ಸಾಮರ್ಥ್ಯದ ಆಧಾರದ ಮೇಲೆ ಯಾರಿಗೆ ಟಿಕೆಟ್ ನೀಡಬೇಕು ಎಂಬುದನ್ನು ಪಕ್ಷ ನಿರ್ಧರಿಸಲಿದೆ. ಸ್ವಾತಿ ಸಿಂಗ್ ಅವರಿಗೆ ಟಿಕೆಟ್ ನಿರಾಕರಿಸಿದರೆ, ಮಹಿಳಾ ಮತದಾರರಿಗೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *