ತಂದೆಯನ್ನು ಅಂಬುಲೆನ್ಸ್‌ನಲ್ಲಿ ರೋಗಿಯಂತೆ ಮಲಗಿಸಿ ದೆಹಲಿಗೆ ಹೋಗಿ ಮದುವೆಯಾದ

Public TV
2 Min Read

– ಮನೆಗೆ ವಾಪಸ್ ಬಂದು ಪತ್ನಿ ಸಮೇತ ಪೊಲೀಸರಿಗೆ ಅತಿಥಿಯಾದ

ಲಕ್ನೋ: ಲಾಕ್‍ಡೌನ್ ನಡುವೆ ತಂದೆಯನ್ನು ಅಂಬುಲೆನ್ಸ್‌ನಲ್ಲಿ ರೋಗಿಯಂತೆ ಮಲಗಿಸಿಕೊಂಡು ಉತ್ತರ ಪ್ರದೇಶದಿಂದ ದೆಹಲಿಗೆ ಪ್ರಯಾಣಿಸಿ ಅಲ್ಲಿ ವಿವಾಹವಾಗಿ ವಾಪಸ್ ಬಂದಿರುವ ಘಟನೆ ಉತ್ತರ ಪ್ರದೇಶದ ಮುಜಫರ್ ನಗರದಲ್ಲಿ ನಡೆದಿದೆ.

26 ವರ್ಷದ ಅಹ್ಮದ್ ತನ್ನ ತಂದೆಗೆ ಅನಾರೋಗ್ಯ ಎಂದು ಹೇಳಿ ಬಾಡಿಗೆ ಅಂಬುಲೆನ್ಸ್ ತೆಗೆದುಕೊಂಡಿದ್ದಾನೆ. ನಂತರ ಅವರ ತಂದೆಯನ್ನು ಅಂಬುಲೆನ್ಸ್‌ನಲ್ಲಿ ಮಲಗಿಸಿ ಅವರಿಗೆ ಡ್ರಿಪ್ಸ್ ಹಾಕಿ ಉತ್ತರ ಪ್ರದೇಶದಿಂದ ದೆಹಲಿಗೆ ಪ್ರಯಾಣಿಸಿದ್ದಾನೆ. ಚೆಕ್‍ಪೋಸ್ಟ್ ವೇಳೆ ಅಡ್ಡಗಟ್ಟಿದ ಪೊಲಿಸರಿಗೆ ತಂದೆಯನ್ನು ತೋರಿಸಿ ವಂಚಿಸಿದ್ದಾನೆ. ಜೊತೆಗೆ ದೆಹಲಿಗೆ ಹೋಗಿ ಅಲ್ಲಿ ಮದುವೆಯಾಗಿ ಪುನಃ ಹೆಂಡತಿಯ ಸಮೇತ ಮಂಗಳವಾರ ಉತ್ತರ ಪ್ರದೇಶದ ತನ್ನ ಮನೆಗೆ ಮರಳಿದ್ದಾನೆ.

ಸಿಕ್ಕಿ ಬಿದ್ದಿದ್ದು ಹೇಗೆ?
ಅಹ್ಮದ್ ದೆಹಲಿಯ ಹುಡುಗಿಯನ್ನು ಮದುವೆ ಮಾಡಿಕೊಂಡು ಬಂದಿದ್ದು, ನೆರೆಹೊರೆಯವರಿಗೆ ಗೊತ್ತಾಗಿದೆ. ಆ ಹೊತ್ತಿಗಾಗಲೇ ಅವರು ವಾಸವಿದ್ದ ಖತೌಲಿ ಪ್ರದೇಶ ಐದು ಕೊರೊನಾ ಪಾಸಿಟಿವ್ ಪ್ರಕರಣಗಳಿಂದ ಕೊರೊನಾ ಹಾಟ್‍ಸ್ಟಾಟ್ ಆಗಿ ನಿರ್ಮಾಣವಾಗಿತ್ತು. ಈ ನಡುವೆ ದೆಹಲಿಯಿಂದ ವಾಪಸ್ ಬಂದ ಇವರನ್ನು ಕಂಡ ಅಕ್ಕಪಕ್ಕದವರು ಗಾಬರಿಗೊಂಡು ಪೊಲೀಸರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ.

ನೆರೆಹೊರೆಯವರಿಂದ ಮಾಹಿತಿ ಪಡೆದ ನಂತರ ಪೊಲೀಸ್ ಇಲಾಖೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಇಸ್ಲಾಂ ನಗರ ಪ್ರದೇಶದ ಖತೌಲಿಯಲ್ಲಿರುವ ಅಹ್ಮದ್ ಮನೆಗೆ ಬಂದಿದ್ದಾರೆ. ನಂತರ ಅಧಿಕಾರಿಗಳು ವಧು ಮತ್ತು ವರ ಸೇರಿದಂತೆ ಕುಟುಂಬದ ಎಲ್ಲ ಸದಸ್ಯರಿಂದ ಕೊರೊನಾ ಪರೀಕ್ಷೆಗೆ ಮಾದರಿಗಳನ್ನು ಸಂಗ್ರಹಿಸಿ, ಅವರೆಲ್ಲರನ್ನೂ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಕ್ವಾರಂಟೈನ್ ಘಟಕಕ್ಕೆ ಬಿಟ್ಟಿದ್ದಾರೆ.

ಮೊದಲ ಪ್ಲಾನ್ ವಿಫಲ
ಈ ಪ್ಲಾನ್‍ಗೂ ಮೊದಲು ಇನ್ನೊಂದು ಪ್ಲಾನ್ ಮಾಡಿದ್ದ ಅಹ್ಮದ್ ಅಪ್ಪನ ಜೊತೆ ಸೇರಿಕೊಂಡು ಮುಜಫರ್ ನಗರದಿಂದ ಗಂಗಾ ಕಲುವೆಯ ಮೇಲೆ ದೆಹಲಿಗೆ ಹೋಗಲು ಪ್ರಯತ್ನ ಮಾಡಿದ್ದರು. ಆದರೆ ಅಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರು ತಡೆದು ಅವರನ್ನು ವಾಪಸ್ ಮನೆಗೆ ಕಳುಹಿಸಿಕೊಟ್ಟಿದ್ದರು. ಇದಾದ ನಂತರ ಅಹ್ಮದ್ ಅಂಬುಲೆನ್ಸ್‌ನಲ್ಲಿ ಹೋಗುವ ಪ್ಲಾನ್ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಅಂಬುಲೆನ್ಸ್‌ನಲ್ಲಿ ದೆಹಲಿಗೆ ಹೋದ ಅವರು ಅಲ್ಲಿನ ನಿಖಾ ಸಮಾರಂಭದಲ್ಲಿ ಮದುವೆಯಗಿದ್ದಾರೆ. ನಂತರ ವಧುವನ್ನು ಕರೆದುಕೊಂಡು ಮನಗೆ ವಾಪಸ್ ಆಗಿದ್ದಾರೆ. ಈ ಸಂಬಂಧ ಅಂಬುಲೆನ್ಸ್ ಚಾಲಕ ಮೆಹ್ತಾಬ್ ಮೇಲೂ ದೂರು ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *