ದಾವಣಗೆರೆ| ಬ್ಯಾಂಕ್ ದರೋಡೆಗೆ ಬಂದಿದ್ದ ಯುಪಿ ಗ್ಯಾಂಗ್ ಮೇಲೆ ಪೊಲೀಸರಿಂದ ಫೈರಿಂಗ್ – ನಾಲ್ವರು ಅರೆಸ್ಟ್

Public TV
1 Min Read

ದಾವಣಗೆರೆ: ಬ್ಯಾಂಕ್ (Bank) ದರೋಡೆಗೆ ಬಂದಿದ್ದ ಉತ್ತರ ಪ್ರದೇಶದ (Uttar Pradesh) ನಾಲ್ವರು ದರೋಡೆಕೋರರನ್ನು ದಾವಣಗೆರೆ (Davanagere) ಪೊಲೀಸರು ಹೊನ್ನಾಳಿ ತಾಲೂಕಿನ ಅರಬಘಟ್ಟದಲ್ಲಿ ಬಂಧಿಸಿದ್ದಾರೆ.

ದರೋಡೆಕೋರರ ಗ್ಯಾಂಗ್ ಬ್ಯಾಂಕ್ ದರೋಡೆಗೆ ಆಗಮಿಸಿದೆ ಎನ್ನುವ ಖಚಿತ ಮಾಹಿತಿ ಮೇರೆಗೆ ಹೊನ್ನಾಳಿ ಬಳಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ, 7 ಜನ ಹರಿಹರದ ಕಡೆಯಿಂದ ನ್ಯಾಮತಿ ಕಡೆಗೆ ಎರಡು ಕಾರುಗಳಲ್ಲಿ ಹೋಗುತ್ತಿದ್ದರು. ಇವರನ್ನು ಹೊನ್ನಾಳಿ ಬಳಿಯ ಚೆಕ್‍ಪೋಸ್ಟ್‌ನಲ್ಲಿ ಪೊಲೀಸರು ತಡೆಯಲು ಯತ್ನಿಸಿದ್ದಾರೆ. ಈ ವೇಳೆ ಅವರು ಕಾರನ್ನು ನಿಲ್ಲಿಸದೇ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾರೆ. ಕಾರನ್ನು ಬೆನ್ನಟ್ಟಿದ ಪೊಲೀಸರು ಅರಬಘಟ್ಟ ಬಳಿ ತಡೆದಿದ್ದಾರೆ. ಆಗ ಅರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ಮುಂದಾಗಿದ್ದಾರೆ. ಅಲ್ಲದೇ ಕಾನ್ಸ್‌ಟೇಬಲ್‌ ಅನಂದ್ ಅವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ಮಂಗಳೂರು| ಐದನೇ ಮಹಡಿಯಿಂದ ಬಿದ್ದು ಬಾಲಕ ಸಾವು

ದರೋಡೆಕೋರರು ದಾಳಿ ನಡೆಸುತ್ತಿದ್ದಂತೆ ಆತ್ಮರಕ್ಷಣೆಗಾಗಿ ಇನ್ಸ್‌ಪೆಕ್ಟರ್‌ ರವಿಯವರು ಅರೋಪಿ ಗುಡ್ಡು ಅಲಿಯಾನ್ ಗುಡು ಖಾಲಿಯಾ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಅಲ್ಲದೇ ಆತನ ಜೊತೆಗಿದ್ದ ಉತ್ತರ ಪ್ರದೇಶ ಮೂಲದ ಹಸ್ರತ್ ಅಲಿ, ಅಸಾಂ ಯಾನೆ ಟನ್ ಟನ್, ಕಮರುನ್ ಯಾನೆ ಬಾಬು ಸೆರಲಿಯನ್ನು ಬಂಧಿಸಿದ್ದಾರೆ. ಗ್ಯಾಂಗ್‍ನ ನಟೋರಿಯಸ್ ಲೀಡರ್ ರಾಜಾರಾಮ್, ಬಾಬುಷಾ, ಹಾಗೂ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಆಪೀಜ್ ಪರಾರಿಯಾಗಿದ್ದಾರೆ. ಪರಾರಿಯಾದ ಅರೋಪಿಗಳ ಬಂಧನಕ್ಕೆ ಎರಡು ತಂಡ ರಚಿಸಲಾಗಿದೆ.

ಕಳೆದ ಕೆಲ ತಿಂಗಳ ಹಿಂದೆ ನ್ಯಾಮತಿಯಲ್ಲಿ ನಡೆದ ಎಸ್‍ಬಿಐ ಬ್ಯಾಂಕ್‍ನ ದರೋಡೆಗೂ ಇವರಿಗೂ ಸಂಬಂಧ ಇದೆ ಎಂದು ಶಂಕೆ ವ್ಯಕ್ತವಾಗುತ್ತಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನಾ ಸ್ಥಳದಲ್ಲಿರುವ ಮಚ್ಚು, ಬುಲೆಟ್, ಎರಡು ಕಾರುಗಳು, ಮಂಕಿ ಕ್ಯಾಪ್‍ಗಳನ್ನು ಎಸ್‍ಪಿ ಉಮಾ ಪ್ರಶಾಂತ್ ಪರಿಶೀಲಿಸಿದ್ದಾರೆ. ಇದನ್ನೂ ಓದಿ: ಮಂಗಳೂರು| ರಾಜ್ಯದ ಇತಿಹಾಸದಲ್ಲೇ ಅತಿ ದೊಡ್ಡ ಡ್ರಗ್ಸ್ ಬೇಟೆ – 75 ಕೋಟಿ ಮೌಲ್ಯದ ಮಾದಕ ವಸ್ತು ವಶಕ್ಕೆ

Share This Article