ಉತ್ತರ ಪ್ರದೇಶ| 8ರ ಬಾಲಕಿಯ ರೇಪ್‌ & ಕೊಲೆ ಕೇಸ್‌ – ಆರೋಪಿ ಎನ್‌ಕೌಂಟರ್‌ಗೆ ಬಲಿ

Public TV
2 Min Read

ಲಕ್ನೋ: ಉತ್ತರ ಪ್ರದೇಶದ (Uttar Pradesh) ಫರೂಕಾಬಾದ್‌ನಲ್ಲಿ 8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ (Rape) ಎಸಗಿ ಕೊಲೆಗೈದ ಆರೋಪಿಯನ್ನು ಪೊಲೀಸರು ಎನ್‌ಕೌಂಟರ್‌ (Encounter) ನಡೆಸಿ ಹತ್ಯೆ ಮಾಡಿದ್ದಾರೆ.

ಈ ಹಿಂದೆ ಕೊಲೆ, ಸುಲಿಗೆ, ಅಪಹರಣ ಎಸಗಿದ್ದ ಆರೋಪ ಹೊಂದಿದ್ದ ಮನು(55) ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದೆ. ಆರೋಪಿ ಪ್ಲಾಸ್ಟಿಕ್ ಹೆಕ್ಕುವ ಕೆಲಸ ಮಾಡುತ್ತಿದ್ದ ಮನು ಜೂನ್‌ 27 ರಿಂದ ನಾಪತ್ತೆಯಾಗಿದ್ದ. ಈತನ ಬಗ್ಗೆ ಸುಳಿವು ನೀಡಿದವರಿಗೆ 50 ಸಾವಿರ ರೂ. ಬಹುಮಾನವನ್ನು ಘೋಷಿಸಲಾಗಿತ್ತು.

ಮೊಹಮ್ಮದಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇರುವಿಕೆಯ ಬಗ್ಗೆ ಖಚಿತ ಮಾಹಿತಿ ಪಡೆದು ಪೊಲೀಸರು ಬಂಧನಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಆತ ಪೊಲೀಸರ ಮೇಲೆ ದೇಶೀಯ ನಿರ್ಮಿತ ಪಿಸ್ತೂಲಿನಿಂದ ದಾಳಿ ನಡೆಸಿದ್ದಾನೆ. ಈ ವೇಳೆ ಪೊಲೀಸರು ಸ್ವಯಂ ರಕ್ಷಣೆಗೆ ಗುಂಡು ಹಾರಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಯ ಸಮಯದಲ್ಲಿ ವೈದ್ಯರು ಆತ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ.

ಏನಿದು ಕೇಸ್?
ಜೂನ್ 28 ರಂದು, ಮೈನ್‌ಪುರಿಯ ಭೋಗಾಂವ್ ಪೊಲೀಸ್ ಠಾಣೆ ಪ್ರದೇಶದ ಅಲಿಪುರ್ ಖೇಡಾ ಬಳಿಯ ಹೊಲದಲ್ಲಿ 8 ವರ್ಷದ ಬಾಲಕಿಯ ಶವ ಪತ್ತೆಯಾಗಿತ್ತು. ಇದನ್ನೂ ಓದಿ: ಯುಪಿಯಲ್ಲಿ ಯೋಗಿ ಆದಿತ್ಯನಾಥ್‌ ಸಿಎಂ ಆದ ನಂತರ 15,000 ಎನ್‌ಕೌಂಟರ್‌ 238 ಮಂದಿ ಹತ್ಯೆ

ಮೃತ ಬಾಲಕಿ ಮೊಹಮ್ಮದಾಬಾದ್ ಪೊಲೀಸ್ ಠಾಣೆ ಪ್ರದೇಶದ ನೀವ್ಕರೋರಿ ಬಳಿಯ ತನ್ನ ಚಿಕ್ಕಮ್ಮನ ಮನೆಗೆ ಬಂದಿದ್ದಳು. ಜೂನ್‌ 27 ರಂದು ಬಾಲಕಿ ಮಾವಿನ ಹಣ್ಣು ತಿನ್ನಲು ತೋಟಕ್ಕೆ ಹೋಗಿದ್ದಳು. ತೋಟಕ್ಕೆ ಹೋಗಿದ್ದ ಬಾಲಕಿ ಮರಳಿ ಮನೆಗೆ ಬಂದಿರಲಿಲ್ಲ.

ನಾಪತ್ತೆ ದೂರು ದಾಖಲಾದ ನಂತರ ಪೊಲೀಸರು ತನಿಖೆಗೆ ಇಳಿದಾಗ 55 ವರ್ಷದ ವ್ಯಕ್ತಿ ಸೈಕಲ್‌ನಲ್ಲಿ ಹೋಗುತ್ತಿರುವುದನ್ನು ಮತ್ತು ಆತನ ಹಿಂದೆ ಬಾಲಕಿ ನಡೆದುಕೊಂಡು ಹೋಗುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಮರುದಿನ ಮೈನ್‌ಪುರಿ ಜಿಲ್ಲೆಯ ಭೋಗಾಂವ್ ಪೊಲೀಸ್ ಠಾಣೆ ಪ್ರದೇಶದ ದೇವಿಪುರದ ಹೊಲದಲ್ಲಿ ಸುಮಾರು 35 ಕಿ.ಮಿ. ದೂರದಲ್ಲಿರುವ ಕಾಲುವೆಯ ದಡದಲ್ಲಿ ಹುಡುಗಿಯ ಶವ ಪತ್ತೆಯಾಗಿತ್ತು.

ಮೈನ್‌ಪುರಿ ಪೊಲೀಸರು ಫರೂಕಾಬಾದ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೋಷಕರು ಪತ್ತೆಯಾದ ಶವ ಕಾಣೆಯಾದ ತಮ್ಮ ಮಗಳು ಎಂದು ಗುರುತಿಸಿತ್ತು. ಮೃತದೇಹವನ್ನು ಗ್ರಾಮಕ್ಕೆ ಕರೆ ತಂದಾಗ ಗ್ರಾಮಸ್ಥರು ಭಾರೀ ಪ್ರತಿಭಟನೆ ನಡೆಸಿದ್ದರು. ಫರೂಕಾಬಾದ್-ದೆಹಲಿ ರಸ್ತೆಯನ್ನು ನಿರ್ಬಂಧಿಸಲಾಗಿತ್ತು. ಪ್ರಕರಣ ದಾಖಲಾದ ನಂತರ ಆರೋಪಿ ಮನು ನಾಪತ್ತೆಯಾಗಿದ್ದ. ನಾಪತ್ತೆಯಾದ ಬೆನ್ನಲ್ಲೇ ಪೊಲೀಸರು ಈತನ ಬಗ್ಗೆ ಸುಳಿವು ನೀಡಿದವರಿಗೆ 50 ಸಾವಿರ ರೂ. ನಗದು ಬಹುಮಾನ ಘೋಷಿಸಿದ್ದರು.

Share This Article