ಬಿಜೆಪಿಯಿಂದ ಸಿದ್ದಗಂಗಾ ಮಠದ ಊಟಕ್ಕೂ ಕತ್ತರಿ: ಯು.ಟಿ.ಖಾದರ್ ಆರೋಪ

Public TV
2 Min Read

– 3 ತಿಂಗಳಿಂದ ಮಠಗಳಿಗೆ ನೀಡುತ್ತಿದ್ದ ಅಕ್ಕಿ, ಗೋಧಿ ಸ್ಟಾಪ್

ಬೆಂಗಳೂರು: ತುಮಕೂರಿನ ಸಿದ್ದಗಂಗಾ ಮಠದ ಊಟಕ್ಕೂ ರಾಜ್ಯ ಸರ್ಕಾರ ಕತ್ತರಿ ಹಾಕಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಆರೋಪಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದಗಂಗಾ ಮಠದ ಒಟ್ಟು 7,359 ವಿದ್ಯಾರ್ಥಿಗಳಿಗೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ 73,590 ಕೆಜಿ ಅಕ್ಕಿ ಹಾಗೂ 36,795 ಕೆಜಿ ಗೋಧಿ ವಿತರಣೆ ಮಾಡುತ್ತಿತ್ತು. ದಾಸೋಹ ಯೋಜನೆ ಅಡಿ ಸಿದ್ದಗಂಗಾ ಮಠದ ವಿದ್ಯಾರ್ಥಿಗಳಿಗೂ ಅಕ್ಕಿ, ಗೋಧಿ ನೀಡಲಾಗುತ್ತಿತ್ತು. ಆದರೆ ಬಿಜೆಪಿ ಸರ್ಕಾರವು ಕಳೆದ ಮೂರು ತಿಂಗಳಿಂದ ಮಠಕ್ಕೆ ನೀಡುತ್ತಿದ್ದ ಅಕ್ಕಿಯನ್ನು ತಡೆ ಹಿಡಿದಿದೆ ಎಂದು ಆರೋಪಿಸಿದರು. ಜೊತೆಗೆ ಪ್ರಮುಖ ದಾಖಲೆ ಬಿಡುಗಡೆ ಮಾಡಿದರು.

ತುಮಕೂರು ಸಿದ್ದಗಂಗಾ ಮಠದಲ್ಲಿ ಸಾಕಷ್ಟು ಜನರು ವಸತಿ ಪಡೆದು ಶಿಕ್ಷಣ ಪಡೆಯುತ್ತಿದ್ದಾರೆ. ಹೀಗಾಗಿ ಅಂತಹ ಶಿಕ್ಷಣ ಸಂಸ್ಥೆಗಳಿಗೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ವಿವಿಧ ಸಂಘಗಳ ಸಹಭಾಗಿತ್ವದಲ್ಲಿ ಅಕ್ಕಿ, ಗೋಧಿ ವಿತರಿಸುತ್ತಿತ್ತು. ಇದರಿಂದ ಸಂಸ್ಥೆಗಳಿಗೆ ಹೆಚ್ಚು ಅನುಕೂಲವಾಗುತ್ತಿತ್ತು. ಆದರೆ ಬಿಜೆಪಿ ಸರ್ಕಾರ ಏಕಾಏಕಿ ಸಿದ್ದಗಂಗಾ ಮಠ ಹಾಗೂ ವಿವಿಧ ಸಂಸ್ಥೆಗಳಿಗೆ ವಿತರಿಸುತ್ತಿದ್ದ ಅಕ್ಕಿ ಹಾಗೂ ಗೋಧಿಯನ್ನು ನಿಲ್ಲಿಸಿದೆ ಎಂದು ದೂರಿದರು.

ಇದೇ ವೇಳೆ ಬೀದರ್ ಶಾಹೀನ್ ಕಾಲೇಜ್ ಮೇಲೆ ದೇಶದ್ರೋಹ ಆರೋಪದ ವಿಚಾರವಾಗಿ ಪ್ರತಿಕ್ರಿಯಿಸಿ, ಬಿಜೆಪಿ ಕಾರ್ಯದರ್ಶಿ ಹೇಳಿದರು ಅಂತ ಇಂತ ಕೆಲಸ ಮಾಡಿರುವುದು ಸರಿಯಲ್ಲ. ಪೊಲೀಸರು ದೇಶದ್ರೋಹ ಕೇಸ್ ಹಾಕಿದ್ದು ಹಾಗೂ ಮಕ್ಕಳು, ಶಿಕ್ಷಕರನ್ನು ವಿಚಾರಣೆಗೆ ಗುರಿಪಡಿಸಿದ್ದು ಸರಿಯಲ್ಲ. ತಪ್ಪು ಮಾಡಿದ್ದರೆ ಕ್ರಮ ತೆಗೆದುಕೊಳ್ಳಲಿ ಎಂದರು.

ಅಧಿಕಾರಿಗಳು ರಾಜಕೀಯ ಒತ್ತಡ, ವರ್ಗಾವಣೆಗೆ ಮಣಿಯಬಾರದು. ರಾಜಕೀಯ ಒತ್ತಡಕ್ಕೆ ಮಣೆದು ಸಮಾಜಕ್ಕೆ ಮಾರಕಾಗುವ ನಿರ್ಧಾರ ತಗೆದುಕೊಳ್ಳಬಾರದು. ಮಂಗಳೂರು ಬಾಂಬ್ ಇಟ್ಟ ಪ್ರಕರಣದ ರೂವಾರಿ ಆದಿತ್ಯ ರಾವ್ ಕೇಸ್ ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ. ಬಿಜೆಪಿಯವರ ಮೇಲೆ ಜನರಿಗೆ ನಂಬಿಕೆಯೇ ಇಲ್ಲ. ಬಾಂಬ್ ಇಟ್ಟವರಿಗೆ ಸ್ಥಾನಮಾನ ಕೊಡುವ ಕೆಲಸ ನಡೆಯುತ್ತಿದೆ. ಶಾಸಕರ ಭವನಕ್ಕೆ ಬಾಂಬ್ ಇಟ್ಟವರಿಗೆ ಬಿಜೆಪಿ ವಿಧಾನಸಭಾ ಚುನಾವಣೆ ಟಿಕೆಟ್ ಕೊಡುತ್ತೆ. ಸಂಸದೆ ಪ್ರಜ್ಞಾಸಿಂಗ್ ಬಗ್ಗೆಯೂ ಮೃದು ಧೋರಣೆ ತಾಳುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಸಂಸದ ಅನಂತಕುಮಾರ್ ಹೆಗ್ಡೆ ಮಹಾತ್ಮ ಗಾಂಧೀಜಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಅವರಿಂದ ಇಂತಹ ಹೇಳಿಕೆ ಬರುತ್ತಲೇ ಇವೆ. ಸಂವಿಧಾನದ ಬಗ್ಗೆಯೂ ವಿವಾದಾತ್ಮಕ ಹೇಳಿಕೆ ನೀಡುತ್ತಾರೆ. ಇಂತವರ ಮೇಲೆ ಯಾಕೆ ಕೇಸ್ ಆಗುತ್ತಿಲ್ಲ? ಇದನ್ನು ನೋಡಿದರೆ ಬಿಜೆಪಿಯವರ ಹಸ್ತಕ್ಷೇಪವಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಗಾಂಧೀಜಿ ಅವರ ಬಗ್ಗೆ ಬಿಜೆಪಿ ಕ್ಲಿಯರ್ ಸ್ಟಾಂಡ್ ಏನು? ಬಗ್ಗೆ ನಿಮ್ಮ ಸ್ಟ್ಯಾಂಡ್ ಏನು ಎಂದು ಪ್ರಶ್ನಿಸಿದರು.

Share This Article
Leave a Comment

Leave a Reply

Your email address will not be published. Required fields are marked *