ಪುಟಿನ್‌ಗಿಂತ ಅಕ್ರಮ ವಲಸೆಯೇ ಬಹುದೊಡ್ಡ ಸಮಸ್ಯೆ: ಡೊನಾಲ್ಡ್ ಟ್ರಂಪ್

Public TV
2 Min Read

ವಾಷಿಂಗ್ಟನ್‌: ರಷ್ಯಾದ (Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ಗಿಂತ (Vladimir Putin) ಅಕ್ರಮ ವಲಸೆಯೇ ಬಹುದೊಡ್ಡ ಸಮಸ್ಯೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (US President Donald Trump) ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ ಅವರು, ನಾವು ಪುಟಿನ್ ಬಗ್ಗೆ ಚಿಂತೆ ಮಾಡುವುದನ್ನು ಕಡಿಮೆ ಮಾಡಬೇಕು. ಅಕ್ರಮ ವಲಸಿಗರಿಂದ (Illegal Immigrants) ಆಗುವ ಅತ್ಯಾಚಾರ, ಮಾದಕವಸ್ತುಗಳ ದೊರೆಗಳು, ಕೊಲೆಗುಡುಕರ ಬಗ್ಗೆ ಹೆಚ್ಚು ಚಿಂತೆ ಮಾಡಬೇಕಿದೆ. ಈ ವಿಚಾರದ ಬಗ್ಗೆ ಚಿಂತೆ ಮಾಡಿದರೆ ಯುರೋಪಿನಂತೆ (Europe) ನಮ್ಮ ದೇಶ ಹಾಳಾಗುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

ನನ್ನ ಅಧಿಕಾರ ಅವಧಿ ಸ್ವೀಕರಿಸಿದ ಮೊದಲ ತಿಂಗಳಾದ ಫೆಬ್ರವರಿಯಲ್ಲಿ ಕಡಿಮೆ ಸಂಖ್ಯೆಯಲ್ಲಿ ದೇಶದ ಒಳಗೆ ಅಕ್ರಮ ವಲಸಿಗರು ನುಗ್ಗಲು ಪ್ರಯತ್ನಿಸಿದ್ದಾರೆ. ಅಮೆರಿಕ-ಮೆಕ್ಸಿಕೋ ಗಡಿಯಲ್ಲಿ ಗಡಿ ಗಸ್ತು ಪಡೆ ಕೇವಲ 8,326 ಅಕ್ರಮ ವಲಸಿಗರ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಅವರೆಲ್ಲರನ್ನೂ ನಮ್ಮ ರಾಷ್ಟ್ರದಿಂದ ಹೊರಹಾಕಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ:ಅಕ್ರಮವಾಗಿ ಇಸ್ರೇಲ್‌ ಪ್ರವೇಶಿಸಲು ಯತ್ನಿಸಿದ್ದ ಕೇರಳದ ವ್ಯಕ್ತಿ ಗುಂಡಿಗೆ ಬಲಿ

ಅಧಿಕಾರ ಸ್ವೀಕರಿಸಿದ ಮೊದಲ ತಿಂಗಳಿನಲ್ಲೇ ಅಕ್ರಮ ವಲಸಿಗರ ಸಂಖ್ಯೆಯನ್ನು ಐತಿಹಾಸಿಕ ಕನಿಷ್ಠ ಮಟ್ಟಕ್ಕೆ ತರುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಟ್ರಂಪ್‌ ಹೇಳಿದರು.

ಜೋ ಬೈಡನ್‌ ಅವಧಿಯಲ್ಲಿ ಒಂದು ತಿಂಗಳಿನಲ್ಲಿ 3 ಲಕ್ಷ ಮಂದಿ ಅಕ್ರಮವಾಗಿ ದೇಶವನ್ನು ಪ್ರವೇಶಿಸುತ್ತಿದ್ದರು. ಈಗ ಎಲ್ಲಾ ಅಕ್ರಮ ವಲಸಿಗರಿಗೆ ಗಡಿಯನ್ನು ಮುಚ್ಚಲಾಗಿದೆ. ಅಕ್ರಮವಾಗಿ ಅಮೆರಿಕಕ್ಕೆ ಪ್ರವೇಶಿಸಲು ಯಾರಾದರೂ ಪ್ರಯತ್ನಿಸಿದರೆ ಕ್ರಿಮಿನಲ್‌ ದಂಡದ ಜೊತೆ ತಕ್ಷಣದ ಗಡೀಪಾರು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

 

Share This Article