ಅನಿವಾಸಿ ಭಾರತೀಯರಿಗೆ ಮತ್ತೊಂದು ಶಾಕ್ ಕೊಟ್ಟ ಡೊನಾಲ್ಡ್ ಟ್ರಂಪ್!

Public TV
1 Min Read

ವಾಷಿಂಗ್ಟನ್: ವಲಸೆ ವಿಚಾರದಲ್ಲಿ ಕಠಿಣ ನಿಯಮವನ್ನು ರೂಪಿಸಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಅನಿವಾಸಿ ಭಾರತೀಯರಿಗೆ ಮತ್ತೊಂದು ಶಾಕ್ ನೀಡಲು ಮುಂದಾಗಿದ್ದಾರೆ. ಅಮೆರಿಕದಲ್ಲೇ ಜನಿಸುವ ಮಕ್ಕಳಿಗೆ ಸ್ವಾಭಾವಿಕವಾಗಿ ಸಿಗುತ್ತಿದ್ದ ಪೌರತ್ವ ನೀತಿಯನ್ನು ರದ್ದುಗೊಳಿಸಲು ಟ್ರಂಪ್ ಚಿಂತನೆ ನಡೆಸಿದ್ದಾರೆ.

ಪ್ರಸ್ತುತ ಅಮೆರಿಕ ಕಾನೂನು ಪ್ರಕಾರ, ಯಾವುದೇ ದೇಶದ ದಂಪತಿಗೆ ಅಮೆರಿಕದಲ್ಲೇ ಮಗು ಜನನವಾದರೆ ಆ ಮಗು ಸಹಜವಾಗಿಯೇ ಅಮೆರಿಕದ ಪೌರತ್ವಕ್ಕೆ ಅರ್ಹವಾಗಿರುತ್ತದೆ. ಅಷ್ಟೇ ಅಲ್ಲದೇ ಅಮೆರಿಕದ ಮಕ್ಕಳಿಗೆ ಸಿಗುವ ಎಲ್ಲ ಸೌಲಭ್ಯಗಳು ಆ ಮಗುವಿಗೆ ಸಿಗುತ್ತದೆ. ಈ ಕಾನೂನನ್ನೇ ರದ್ದು ಪಡಿಸಲು ಟ್ರಂಪ್ ಮುಂದಾಗಿದ್ದಾರೆ.

ಸೋಮವಾರ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನಲ್ಲಿ ಟ್ರಂಪ್ ತನ್ನ ಮುಂದಿನ ಈ ನಿರ್ಧಾರ ಬಗ್ಗೆ ತಿಳಿಸಿದ್ದು ವಿಶ್ವದಲ್ಲಿ ಭಾರೀ ಸಂಚಲನ ಮೂಡಿಸಿದೆ. ಇಡೀ ವಿಶ್ವದಲ್ಲಿಯೇ ಅಮೆರಿಕ ಮಾತ್ರ ಈ ರೀತಿ ಪೌರತ್ವ ನೀಡುತ್ತದೆ. ಇದು ಹಾಸ್ಯಾಸ್ಪದ ಮತ್ತು ಅಸಂಬದ್ಧ. ಇದು ಕೊನೆಯಾಗಲೇಬೇಕು. ನಾನೇ ಇದಕ್ಕೆ ಇತಿಶ್ರೀ ಹಾಡುತ್ತೇನೆ ಎಂದು ಖಡಕ್ ಆಗಿ ಹೇಳಿದ್ದಾರೆ.

ಈಗಾಗಲೇ ಕಾಯ್ದೆಯನ್ನು ರದ್ದುಪಡಿಸುವ ಕೆಲಸ ಆರಂಭವಾಗಿದೆ. ನಾನು ಸಹಿ ಹಾಕಿಯೇ ಹಾಕುತ್ತೇನೆ. ಮುಂದೆ ಈ ಆದೇಶ ಅಧಿಕೃತವಾಗಿ ಜಾರಿಯಾಗಲಿದೆ ಎಂದು ಟ್ರಂಪ್ ಗುಡುಗಿದ್ದಾರೆ.

ತಾತ್ಕಾಲಿಕ ವೀಸಾ, ಟ್ರಾವೆಲ್ ವೀಸಾದಲ್ಲಿ ಬಂದಿರುವವರು, ಅಕ್ರಮವಾಗಿ ನೆಲೆಸಿರುವ ದಂಪತಿಗೆ ಮಗುವಾದರೆ ಹಾಲಿ ಕಾನೂನಿನ ಪ್ರಕಾರ ಅಮೆರಿಕದ ಜನ್ಮ ಪ್ರಮಾಣಪತ್ರ ದೊರೆಯುತ್ತದೆ. ಅಮೆರಿಕದಲ್ಲಿ ಉದ್ಯೋಗದಲ್ಲಿರುವ ಅನಿವಾಸಿ ಭಾರತೀಯರ ಮಕ್ಕಳು ಈಗಾಗಲೇ ಅಮೆರಿಕದ ಪೌರತ್ವ ಪಡೆದುಕೊಂಡಿದ್ದಾರೆ.

ಕೆಲ ದಂಪತಿ ಮಗುವಿಗೆ ಪೌರತ್ವ ಸಿಗಲೆಂದೇ ಅಮೆರಿಕಕ್ಕೆ ಬರುತ್ತಾರೆ. ಇಲ್ಲೇ ಹೆರಿಗೆ ಮಾಡುತ್ತಿರುವ ವಿಚಾರ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕಾಯ್ದೆಯ ದುರುಪಯೋಗವನ್ನು ತಡೆಗಟ್ಟಲು ಟ್ರಂಪ್ ಕಾನೂನನ್ನು ರದ್ದು ಮಾಡಲು ಮುಂದಾಗಿದ್ದಾರೆ. ಈ ಕಾನೂನು ತಿದ್ದುಪಡಿ ಮಾಡಬೇಕಾದರೆ ಅಷ್ಟು ಸುಲಭವಲ್ಲ. ಜನ ಪ್ರತಿನಿಧಿಗಳಿಂದ ವಿರೋಧ ವ್ಯಕ್ತವಾಗಿ ಸರ್ಕಾರ ಭಾರೀ ಕಾನೂನು ಹೋರಾಟ ನಡೆಸಬೇಕಾದಿತು ಎಂದು ವರದಿಯಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *