370ನೇ ವಿಧಿ ರದ್ದು ಭಾರತದ ಆರ್ಥಿಕ ಅಭಿವೃದ್ಧಿಗೆ ನಾಂದಿ: ಅಮೆರಿಕ ಸಂಸದ

Public TV
1 Min Read

– ಭ್ರಷ್ಟಾಚಾರ, ಜಾತಿ, ಧರ್ಮಗಳ ತಾರತಮ್ಯ ತಗ್ಗಲಿದೆ
– ಸ್ವಾತಂತ್ರ್ಯ ದಿನಾಚರಣೆಯ ಮೋದಿ ಭಾಷಣ ಸ್ಪೂರ್ತಿದಾಯಕ

ವಾಷಿಂಗ್ಟನ್: ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಅಮೆರಿಕ ಸಂಸದರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಮೆರಿಕದ ಕಾಂಗ್ರೆಸ್ ನಾಯಕ ಜೋ. ವಿಲ್ಸನ್ ಅವರು ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನಲ್ಲಿ ಮಾತನಾಡುವಾಗ ಈ ಕುರಿತು ಹೇಳಿದ್ದು, ಅಮೆರಿಕದಲ್ಲಿನ ಭಾರತದ ರಾಯಭಾರಿ ಹರ್ಷವರ್ಧನ್ ಶ್ರಿಂಗ್ಲಾ ಅವರು ಈ ವಿಡಿಯೋ ಟ್ವೀಟ್ ಮಾಡಿ ಧನ್ಯವಾದ ಅರ್ಪಿಸಿದ್ದಾರೆ. ಈ ಕುರಿತು ವಿಡಿಯೋದಲ್ಲಿ ಹೇಳಿರುವ ಅಮೆರಿಕದ ಸಂಸದ, 370ನೇ ವಿಧಿ ರದ್ದು ಮಾಡುವ ಮೂಲಕ ಜಮ್ಮು ಕಾಶ್ಮೀರದಲ್ಲಿ ಉತ್ತಮ ಆಡಳಿತ, ಅಭಿವೃದ್ಧಿ ಹಾಗೂ ಸಾಮಾಜಿಕ ಆರ್ಥಿಕ ನ್ಯಾಯದ ಹೊಸ ಮಾದರಿಯನ್ನು ಭಾರತ ಸರ್ಕಾರ ಪರಿಚಯಿಸಿದೆ ಎಂದು ಹಾಡಿ ಹೊಗಳಿಸಿದ್ದಾರೆ.

ಭಾರತದ ಸಂಸತ್ತು ವಿವಿಧ ಪಕ್ಷಗಳ ಬೆಂಬಲದೊಂದಿಗೆ ಈ ನಿರ್ಧಾರ ಕೈಗೊಂಡಿದ್ದು, ಭಾರತದ ಆರ್ಥಿಕತೆಗೆ ಶಕ್ತಿ ತುಂಬುವಲ್ಲಿ ಈ ನಿರ್ಧಾರ ಮಹತ್ವದ ಪಾತ್ರ ವಹಿಸಲಿದೆ. ಅಲ್ಲದೆ ಭ್ರಷ್ಟಾಚಾರದ ವಿರುದ್ಧ ಹೋರಾಡಲು, ಲಿಂಗ, ಜಾತಿ ಹಾಗೂ ಧರ್ಮದ ತಾರತಮ್ಯವನ್ನು ಹೋಗಲಾಡಿಸಲು ಸಹಕಾರಿಯಾಗಿದೆ ಎಂದು ದಕ್ಷಿಣ ಕೆರೊಲಿನಾದ ರಿಪಬ್ಲಿಕನ್ ಸಂಸದ ವಿಲ್ಸನ್ ವ್ಯಾಖ್ಯಾನಿಸಿದ್ದಾರೆ.

ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವವಾಗಿ ಭಾರತವು ಯಶಸ್ವಿಯಾಗುವುದನ್ನು ನೋಡಲು ಕಾಯುತ್ತಿದ್ದೇವೆ. ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವಕ್ಕಾಗಿ ಅಮೆರಿಕ ಕೃತಜ್ಞರಾಗಿರುತ್ತದೆ. ಭಾರತದೊಂದಿಗೆ ಒಡನಾಟ ಮುಂದುವರಿಯಲಿದೆ ಎಂದು ಹೇಳಿದ್ದಾರೆ.

ಆಗಸ್ಟ್ ನಲ್ಲಿ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ 26/11 ಮುಂಬೈ ದಾಳಿ ನಡೆದ ಸ್ಥಳಕ್ಕೆ ಭೇಟಿ ನೀಡಿ, ಗೌರವ ಸಲ್ಲಿಸಿದ್ದೆ. ಅಲ್ಲದೆ ಸ್ವಾತಂತ್ರ್ಯ ದಿನಾಚರಣೆ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ ಭಾಷಣ ಸ್ಪೂರ್ತಿದಾಯಕವಾಗಿತ್ತು ಎಂದು ವಿಲ್ಸನ್ ಹೊಗಳಿದ್ದಾರೆ.

ಅಲ್ಲದೆ ಸೆಪ್ಟೆಂಬರ್ ನಲ್ಲಿ ಹ್ಯೂಸ್ಟನ್‍ನಲ್ಲಿ ನಡೆದ ‘ಹೌಡಿ ಮೋದಿ’ ಕಾರ್ಯಕ್ರಮಕ್ಕೆ ಸ್ವತಃ ಡೊನಾಲ್ಡ್ ಟ್ರಂಪ್ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸಿದ್ದರು. ಈ ಕಾರ್ಯಕ್ರಮದಲ್ಲಿ 52 ಸಾವಿರ ಜನ ಭಾಗವಹಿಸಿದ್ದರು. ಇದು ಅಮೆರಿಕದ ಇತಿಹಾಸದಲ್ಲೇ ಅತಿ ದೊಡ್ಡ ಸ್ವಾಗತ ಸಮಾರಂಭವಾಗಿದೆ ಎಂದು ತಿಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *