ಗರ್ಭಿಣಿಯರಿಗೆ ಅಮೆರಿಕದ ವೀಸಾ ನೀಡಲ್ಲ – ಟ್ರಂಪ್ ಸರ್ಕಾರ

Public TV
2 Min Read

ವಾಷಿಂಗ್ಟನ್: ಇನ್ನು ಮುಂದೆ ಗರ್ಭಿಣಿಯರಿಗೆ ವೀಸಾ ನೀಡುವುದಿಲ್ಲ ಎಂದು ಅಮೆರಿಕ ಹೇಳಿದೆ.

ಅಧ್ಯಕ್ಷರಾದ ಬಳಿಕ ವಲಸಿಗರ ವಿರುದ್ಧ ಕಠಿಣ ನೀತಿ ಪ್ರದರ್ಶಿಸುತ್ತಿರುವ ಡೊನಾಲ್ಡ್ ಟ್ರಂಪ್ ಸರ್ಕಾರ ಈಗ ಗರ್ಭಿಣಿಯರಿಗೆ ವೀಸಾ ನೀಡದೇ ಇರಲು ನಿರ್ಧರಿಸಿದೆ.

ಗುರುವಾರ ಸರ್ಕಾರ ಈ ಆದೇಶವನ್ನು ಪ್ರಕಟಿಸಿದೆ. ಗರ್ಭಿಣಿಯರು ಪ್ರವಾಸ ಮಾಡಲು ಅಮೆರಿಕಕ್ಕೆ ಬರುತ್ತಿಲ್ಲ. ಬದಲಾಗಿ ಇಲ್ಲಿ ಮಗುವಿಗೆ ಜನ್ಮ ನೀಡಲೆಂದೇ ‘ಜನನ ಪ್ರವಾಸ’ವನ್ನು ಕೈಗೊಳ್ಳುತ್ತಾರೆ. ವೀಸಾ ದುರುಪಯೋಗ ಆಗುವುದನ್ನು ತಡೆಗಟ್ಟಲು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಸರ್ಕಾರ ಸಮರ್ಥಿಸಿಕೊಂಡಿದೆ. ಇದನ್ನೂ ಓದಿ: ಅಮೆರಿಕಕ್ಕೆ ಭಾರತೀಯ ಟೆಕ್ಕಿಗಳನ್ನು ಕಳುಹಿಸಬೇಕೇ:ಇನ್ಫಿ ನಾರಾಯಣ ಮೂರ್ತಿ ಹೇಳಿದ್ದು ಹೀಗೆ

ಅಮೆರಿಕದಲ್ಲಿ ಜನಿಸಿದ ಪ್ರತಿಯೊಂದು ಮಗುವಿಗೂ ಅಮೆರಿಕದ ಪೌರತ್ವ ಸಿಗುತ್ತದೆ. ಹೀಗಾಗಿ ಗರ್ಭಿಣಿಯರು ಮಕ್ಕಳಿಗೆ ಪೌರತ್ವ ಸಿಗಲೆಂದು ‘ಬರ್ತ್ ಟೂರಿಸಂ’ ಕೈಗೊಳ್ಳುತ್ತಾರೆ ಎನ್ನುವ ಆರೋಪ ಹಲವು ವರ್ಷಗಳಿಂದ ಕೇಳಿ ಬರುತ್ತಿದೆ. ಇಲ್ಲಿಯವರೆಗೆ ಯಾವುದೇ ಸರ್ಕಾರ ಈ ವಿಷಯದ ಕಡೆ ಗಮನ ಹರಿಸಿರಲಿಲ್ಲ. ಆದರೆ ಈಗ ಟ್ರಂಪ್ ಸರ್ಕಾರ ಬಹಳ ಚರ್ಚೆಗೆ ಗ್ರಾಸವಾಗಬಲ್ಲ ವಿಚಾರಕ್ಕೆ ಕೈ ಹಾಕಿದೆ.

ನಮ್ಮ ದೇಶಕ್ಕೆ ವಲಸಿಗರದ್ದೇ ದೊಡ್ಡ ಸಮಸ್ಯೆ. ಅವರಿಂದಾಗಿ ನಮ್ಮ ಪ್ರಜೆಗಳಿಗೆ ಉದ್ಯೋಗ ಸಿಗುತ್ತಿಲ್ಲ. ಹೀಗಾಗಿ ಅಕ್ರಮವಾಗಿ ನುಸುಳಿರುವ ವಲಸಿಗರನ್ನು ಅಮೆರಿಕದಿಂದ ಓಡಿಸಿ ನಮ್ಮ ದೇಶವನ್ನು ಸುರಕ್ಷಿತ ದೇಶವನ್ನಾಗಿ ಮಾಡುತ್ತೇನೆ ಟ್ರಂಪ್ ತಮ್ಮ ಅಧ್ಯಕ್ಷೀಯ ಪ್ರಚಾರ ಭಾಷಣದಲ್ಲಿ ವಲಸಿಗರ ವಿರುದ್ಧ ಗುಡುಗುತ್ತಿದ್ದರು. ಈ ನಿಟ್ಟಿನಲ್ಲಿ ಉದ್ಯೋಗ ವೀಸಾದಲ್ಲಿ ಬದಲಾವಣೆ ತಂದಿದ್ದ ಟ್ರಂಪ್ ಕಣ್ಣು ಗರ್ಭಿಣಿಯರ ಮೇಲೆ ಬಿದ್ದಿದ್ದು, ಅಧ್ಯಕ್ಷೀಯ ಚುನಾವಣೆ ಹತ್ತಿರ ಬರುತ್ತಿದ್ದಂತೆ ಮತ್ತೆ ವಲಸೆ ವಿಚಾರದ ಚರ್ಚೆ ಮುನ್ನೆಲೆಗೆ ಬಂದಿದೆ.

ಟ್ರಂಪ್ ಸರ್ಕಾರದಿಂದ ಈ ನಿರ್ಧಾರ ಪ್ರಕಟವಾಗುತ್ತಿದ್ದಂತೆ ಅಮೆರಿಕ ಮಹಿಳೆಯರು ವಿರೋಧ ವ್ಯಕ್ತಪಡಿಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಲವು ಮಂದಿ ಸಂಬಂಧಿಕರು, ಸ್ನೇಹಿತರು ಇಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ. ಈ ವೈದ್ಯರ ಆಪ್ತರು ಇಲ್ಲಿ ಬಂದು ಡೆಲಿವರಿ ಮಾಡಿಸಿಕೊಂಡು ಸ್ವದೇಶಕ್ಕೆ ತೆರಳುತ್ತಾರೆ. ಹೀಗಿರುವಾಗ ನಿರ್ಬಂಧಿಸಿದ್ದು ಎಷ್ಟು ಸರಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಪ್ರವಾಸಕ್ಕೆ ಬರುತ್ತಿರುವ ಮಹಿಳೆಯರ ಪೈಕಿ ಇವರು ಗರ್ಭಿಣಿಯರು ಎಂದು ಅಮೆರಿಕದ ಅಧಿಕಾರಿಗಳು ಹೇಗೆ ಪತ್ತೆ ಹಚ್ಚುತ್ತಾರೆ ಎನ್ನುವ ಪ್ರಶ್ನೆಯೂ ಈಗ ಎದ್ದಿದೆ.

ಪ್ರಸ್ತುತ ಅಮೆರಿಕ ಕಾನೂನು ಪ್ರಕಾರ, ಯಾವುದೇ ದೇಶದ ದಂಪತಿಗೆ ಅಮೆರಿಕದಲ್ಲೇ ಮಗು ಜನನವಾದರೆ ಆ ಮಗು ಸಹಜವಾಗಿಯೇ ಅಮೆರಿಕದ ಪೌರತ್ವಕ್ಕೆ ಅರ್ಹವಾಗಿರುತ್ತದೆ. ಅಷ್ಟೇ ಅಲ್ಲದೇ ಅಮೆರಿಕದ ಮಕ್ಕಳಿಗೆ ಸಿಗುವ ಎಲ್ಲ ಸೌಲಭ್ಯಗಳು ಆ ಮಗುವಿಗೆ ಸಿಗುತ್ತದೆ. ಈ ಕಾನೂನನ್ನೇ ರದ್ದು ಪಡಿಸುವುದಾಗಿ 2018 ರಲ್ಲೇ ಟ್ರಂಪ್ ಹೇಳಿದ್ದರು.

ಇಡೀ ವಿಶ್ವದಲ್ಲಿಯೇ ಅಮೆರಿಕ ಮಾತ್ರ ಈ ರೀತಿ ಪೌರತ್ವ ನೀಡುತ್ತದೆ. ಇದು ಹಾಸ್ಯಾಸ್ಪದ ಮತ್ತು ಅಸಂಬದ್ಧ. ಇದು ಕೊನೆಯಾಗಲೇಬೇಕು. ನಾನೇ ಇದಕ್ಕೆ ಇತಿಶ್ರೀ ಹಾಡುತ್ತೇನೆ ಎಂದು ಖಡಕ್ ಆಗಿ ಹೇಳಿದ್ದರು.

ಈಗಾಗಲೇ ಕಾಯ್ದೆಯನ್ನು ರದ್ದುಪಡಿಸುವ ಕೆಲಸ ಆರಂಭವಾಗಿದೆ. ನಾನು ಸಹಿ ಹಾಕಿಯೇ ಹಾಕುತ್ತೇನೆ. ಮುಂದೆ ಈ ಆದೇಶ ಅಧಿಕೃತವಾಗಿ ಜಾರಿಯಾಗಲಿದೆ ಎಂದು ಟ್ರಂಪ್ ಗುಡುಗಿದ್ದರು.

ತಾತ್ಕಾಲಿಕ ವೀಸಾ, ಟ್ರಾವೆಲ್ ವೀಸಾದಲ್ಲಿ ಬಂದಿರುವವರು, ಅಕ್ರಮವಾಗಿ ನೆಲೆಸಿರುವ ದಂಪತಿಗೆ ಮಗುವಾದರೆ ಹಾಲಿ ಕಾನೂನಿನ ಪ್ರಕಾರ ಅಮೆರಿಕದ ಜನ್ಮ ಪ್ರಮಾಣಪತ್ರ ದೊರೆಯುತ್ತದೆ. ಅಮೆರಿಕದಲ್ಲಿ ಉದ್ಯೋಗದಲ್ಲಿರುವ ಅನಿವಾಸಿ ಭಾರತೀಯರ ಮಕ್ಕಳು ಈಗಾಗಲೇ ಅಮೆರಿಕದ ಪೌರತ್ವ ಪಡೆದುಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *