ಅಫ್ಘಾನಿಸ್ತಾನದ ಐಸಿಸ್ ನೆಲೆ ಮೇಲೆ `ಮದರ್ ಆಫ್ ಆಲ್ ಬಾಂಬ್’ ಪ್ರಯೋಗಿಸಿದ ಅಮೆರಿಕ- 36 ಉಗ್ರರ ಹತ್ಯೆ

Public TV
2 Min Read

ವಾಷಿಂಗ್ಟನ್: ಅಪ್ಘಾನಿಸ್ತಾನದ ಐಸಿಸ್ ನೆಲೆಯ ಮೇಲೆ ಅಮೆರಿಕ ಮದರ್ ಆಫ್ ಆಲ್ ಬಾಂಬ್ಸ್ ಎಂದೇ ಕರೆಯಲಾಗುವ ಅತ್ಯಂತ ದೊಡ್ಡ ಬಾಂಬ್ ಪ್ರಯೋಗಿಸಿದ್ದು, 36 ಉಗ್ರರು ಸಾವನ್ನಪ್ಪಿರುವುದಾಗಿ ಅಫ್ಘಾನಿಸ್ತಾನದ ಅಧಿಕಾರಿಗಳು ಹೇಳಿದ್ದಾರೆ.

ಅಫ್ಘಾನಿಸ್ತಾನದ ನಂಗರ್‍ಹರ್ ಪ್ರಾಂತ್ಯದ ಮೇಲೆ ಎಲ್ಲಾ ಬಾಂಬ್‍ಗಳ ತಾಯಿ ಎಂದೇ ಕರೆಯಲಾಗುವ ಅತ್ಯಂತ ಪ್ರಬಲ ಜಿಬಿಯು-43/ಬಿ ಮ್ಯಾಸೀವ್ ಆರ್ಡ್‍ನೆನ್ಸ್ ಏರ್ ಬ್ಲಾಸ್ಟ್ ಬಾಂಬ್(ಎಮ್‍ಓಎಬಿ) ಬಾಂಬನ್ನು ಗುರುವಾರದಂದು ಅಮೆರಿಕ ಸ್ಫೋಟಿಸಿತ್ತು. ಅಮೆರಿಕ ಯುದ್ಧ ಇತಿಹಾಸದಲ್ಲಿ ಇದುವರೆಗೆ ಇಷ್ಟು ಗಾತ್ರದ ಬಾಂಬನ್ನು ಶತ್ರುಗಳ ವಿರುದ್ಧ ಪ್ರಯೋಗ ಮಾಡಿರಲಿಲ್ಲ. ಗುರುವಾರದಂದು ಅಪ್ಘಾನಿಸ್ತಾನದ ಸ್ಥಳೀಯ ಕಾಲಮಾನ ಸಂಜೆ 7 ಗಂಟೆ ಸುಮಾರಿಗೆ ದಾಳಿ ನಡೆಸಲಾಗಿತ್ತು.

ಎಮ್‍ಸಿ-130 ಸರಕು ಸಾಗಾಣಿಕೆ ಯುದ್ಧ ವಿಮಾನಗಳ ಮೂಲಕ ಐಸಿಸ್ ಭಯೋತ್ಪಾದಕರ ರಕ್ಷಣೆ ಪಡೆಯುತ್ತಿದ್ದ ಸುರಂಗ ಮಾರ್ಗಗಳು, ಬಂಕರ್‍ಗಳು, ಮನೆಗಳನ್ನು ಗುರಿಯಾಗಿರಿಸಿಕೊಂಡು ಬಾಂಬ್ ದಾಳಿ ನಡೆಸಲಾಗಿತ್ತು.

ದಾಳಿಯಲ್ಲಿ ಐಸಿಸ್ ಅಡಗುದಾಣ ಹಾಗೂ ಸುರಂಗ ನಾಶವಾಗಿದ್ದು, 36 ಉಗ್ರರು ಸಾವನ್ನಪ್ಪಿದ್ದಾರೆ ಎಂದು ರಕ್ಷಣಾ ಇಲಾಖೆ ಹೇಳಿಕೆ ನೀಡಿದೆ. ಬಾಂಬ್ ದಾಳಿ ವೇಳೆ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿತ್ತು ಎಂದು ವರದಿಯಾಗಿದೆ.

ನ್ಯೂಯಾರ್ಕ್ ಅವಳಿ ಕಟ್ಟಡ ದಾಳಿ ಬಳಿಕ ಅಮೆರಿಕ ಅಪ್ಘಾನಿಸ್ತಾನದ ಮೇಲೆ ದಾಳಿ ನಡೆಸಿತ್ತು. ಆದರೆ 15 ವರ್ಷಗಳ ಬಳಿಕ ಪಾಕಿಸ್ತಾನದೊಂದಿಗೆ ಗಡಿಹೊಂದಿರುವ ನಂಗರ್‍ಹರ್ ಪ್ರಾಂತ್ಯದಲ್ಲಿ ಐಸಿಸ್ ಸೇರಿದಂತೆ ಉಗ್ರರ ಸಂಘಟನೆಗಳು ಮತ್ತೆ ಉಪಟಳ ಶುರು ಮಾಡಿದ್ದವು. ಸುರಂಗ ಮಾರ್ಗ, ಗುಹೆಗಳನ್ನು ಬಳಸಿಕೊಂಡು ತಮ್ಮ ಚಟುವಟಿಕೆಗಳನ್ನು ನಡೆಸುತ್ತಿವೆ. ಇದು ಅಪ್ಘಾನಿಸ್ತಾನದಲ್ಲಿರುವ ಅಮೆರಿಕ ಸೇನೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕೆಲ ದಿನಗಳ ಹಿಂದೆಯಷ್ಟೇ ಸಿರಿಯಾದಲ್ಲಿ ಅಮೆರಿಕ ತೀವ್ರ ಸ್ವರೂಪದ ವೈಮಾನಿಕ ದಾಳಿ ನಡೆಸಿತ್ತು.

ಏನಿದು `ಮದರ್ ಆಫ್ ಆಲ್ ಬಾಂಬ್’? ಇದರ ವಿಶೇಷತೆಯೇನು?

– ಎಮ್‍ಓಎಬಿ ಅಂದ್ರೆ ಮ್ಯಾಸೀವ್ ಆರ್ಡ್‍ನೆನ್ಸ್ ಏರ್ ಬ್ಲಾಸ್ಟ್ ಬಾಂಬ್. ಆದ್ರೆ ಇದು ಮದರ್ ಆಫ್ ಆಲ್ ಬಾಂಬ್ಸ್ ಎಂದೇ ಪ್ರಖ್ಯಾತವಾಗಿದೆ.
– 1 ಜಿಬಿಯು-43 ಬಾಂಬ್ ಬರೋಬ್ಬರೀ 9,797 ಕೆಜಿ ತೂಕ ಭಾರವಿದೆ.
– ಈ ಬಾಂಬ್‍ನ ಉದ್ದ ಬರೋಬ್ಬರಿ 20 ಅಡಿ.
– ಯುದ್ಧವಿಮಾನದಿಂದ ಪ್ರಯೋಗವಾದಾಗ ಭೂಮಿಗಿಂತ 60 ಅಡಿ ಎತ್ತರದಲ್ಲೇ ಸ್ಫೋಟ.
– 200 ಮೀಟರ್‍ನಷ್ಟು ಭೂಗರ್ಭಕ್ಕೆ ನುಗ್ಗಿ ಶತ್ರುಗಳನ್ನು ಧ್ವಂಸಿಸುವ ಸಾಮಥ್ರ್ಯವಿದೆ.
– ಬಾಂಬ್ ಅಪ್ಪಳಿಸಿದ 32 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಭಾರೀ ಅನಾಹುತ ಸೃಷ್ಟಿ.
– ಇತರೆ ಬಾಂಬ್‍ಗಳಿಗೆ ಹೋಲಿಸಿದ್ರೆ ಜಿಬಿಯು-43 ಭೂಮಿ ಅಡಿಯೊಳಗೂ ಶತ್ರುಗಳ ಬೇಟೆಯಾಡುತ್ತದೆ.
– 1 ಜಿಬಿಯು-43 ಬಾಂಬ್ ನಿರ್ಮಿಸಲು ಮಾಡಲಾಗಿರುವ ವೆಚ್ಚ ಬರೋಬ್ಬರಿ 103 ಕೋಟಿ ರೂ.
– ಈ ಬಾಂಬನ್ನು ಇತರೆ ಬಾಂಬ್‍ಗಳಂತೆ ಯುದ್ಧ ವಿಮಾನ ಬಳಸಿ ಪ್ರಯೋಗಿಸಲು ಸಾಧ್ಯವಿಲ್ಲ.
– ವಾಯುಸೇನೆ ಬಳಸುವ ಸರಕು-ಸಾಗಾಣಿಕೆ ವಿಮಾನಗಳಲ್ಲಿ ಮಾತ್ರ ಇವುಗಳನ್ನು ಪ್ರಯೋಗಿಸಲು ಸಾಧ್ಯ.
– 2003ರ ಮಾರ್ಚ್‍ನಲ್ಲಿ ಈ ಬಾಂಬ್‍ನ ಯಶಸ್ವಿ ಪರೀಕ್ಷಾರ್ಥ ಪ್ರಯೋಗ ನಡೆಸಲಾಯಿತು.
– ಇರಾಕ್ ಸರ್ವಾಧಿಕಾರಿ ಸದ್ದಾಂ ಹುಸೇನ್ ಹಣಿಯುವ ಸಲುವಾಗಿ ಈ ಬಾಂಬ್‍ನ ಅಭಿವೃದ್ಧಿ.
– ಇರಾಕ್ ಯುದ್ಧಕ್ಕೂ ಮೊದಲು ಅಭಿವೃದ್ಧಿಪಡಿಸಲಾಗಿತ್ತಾದರೂ ಆ ಯುದ್ಧದಲ್ಲಿ ಬಳಸಿರಲಿಲ್ಲ.
– ಇದು ಜಿಪಿಎಸ್ ನಿರ್ದೇಶಿತ ಬಾಂಬ್ ಆಗಿದ್ದು ನಿರ್ದಿಷ್ಟ ಪ್ರದೇಶವನ್ನೇ ಟಾರ್ಗೆಟ್ ಮಾಡಿ ದಾಳಿ
– ಅಮೆರಿಕ ಸೇನೆ ಬಳಿ ಒಟ್ಟು 20 ಜಿಬಿಯು ಬಾಂಬ್‍ಗಳಿವೆ.
– ಮದರ್ ಆಫ್ ಆಲ್ ಬಾಂಬ್‍ಗಿಂತ ನಾಲ್ಕು ಪಟ್ಟು ಬಲಿಷ್ಠವಾಗಿರುವ ‘ಫಾದರ್ ಆಫ್ ಆಲ್ ಬಾಂಬ್’ ರಷ್ಯಾ ಬಳಿ ಇದೆ.

Share This Article
Leave a Comment

Leave a Reply

Your email address will not be published. Required fields are marked *