ಚೀನಾ ಪರವಾಗಿರುವ WHOಗೆ ಫಂಡ್ ನೀಡಲ್ಲ -ಟ್ರಂಪ್

Public TV
2 Min Read

– ಮೊದಲೇ ಎಚ್ಚರಿಕೆ ನೀಡದ್ದರಿಂದ ವಿಶ್ವದಲ್ಲಿ ಅವಾಂತರ
– ಅಮೆರಿಕದಿಂದಲೇ ಅತಿ ಹೆಚ್ಚು ಫಂಡ್

ವಾಷಿಂಗ್ಟನ್: ವಿಶ್ವವ್ಯಾಪಿ ಹರಡುತ್ತಿರುವ ಕೊರೊನಾ ವೈರಸ್ ಮೊದಲು ಚೀನಾದಲ್ಲಿ ಪತ್ತೆಯಾದಾಗ ಇದು ಅತೀ ವೇಗವಾಗಿ ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್‍ಒ) ಮೊದಲೇ ಎಚ್ಚರಿಕೆ ನೀಡಬೇಕಿತ್ತು. ಆದರೆ ವಿಶ್ವಕ್ಕೆ ಈ ಬಗ್ಗೆ ಸಮರ್ಪಕ ಮಾಹಿತಿ ನೀಡುವಲ್ಲಿ ವಿಫಲವಾಗಿದ್ದಕ್ಕೆ ಅಮೆರಿಕ ಡಬ್ಲ್ಯೂಎಚ್‍ಒಗೆ ನೀಡುತ್ತಿದ್ದ ಧನಸಹಾಯವನ್ನು ನಿಲ್ಲಿಸಿದೆ.

ಚೀನಾ ದೇಶದಲ್ಲಿ ಕೊರೊನಾ ವೈರಸ್ ಸೋಂಕು ಮೊದಲು ಕಾಣಿಸಿಕೊಂಡಾಗ ಅದು ವೇಗವಾಗಿ ಹಬ್ಬುತ್ತಿರುವ ಬಗ್ಗೆ ಡಬ್ಲ್ಯೂಎಚ್‍ಒ ಮೊದಲೇ ಎಚ್ಚರಿಕೆ ನೀಡದೆ ಪ್ರಕರಣವನ್ನು ಮುಚ್ಚಿಹಾಕುವಲ್ಲಿ ಮತ್ತು ತೀವ್ರವಾಗಿ ನಿಗಾವಹಿಸುವಲ್ಲಿ ವಿಫಲವಾಗಿದೆ. ಡಬ್ಲ್ಯೂಎಚ್‍ಒ ಮೊದಲೇ ಸರಿಯಾಗಿ ಮಾಹಿತಿ ಕೊಟ್ಟಿದ್ದರೆ ವೈರಸ್ ಈ ರೀತಿ ವಿಶ್ವದಲ್ಲಿ ಅಟ್ಟಹಾಸ ಮೆರೆಯುವುದನ್ನು ತಡೆಗಟ್ಟಲು ಕ್ರಮ ತೆಗೆದುಕೊಳ್ಳಬಹುದಾಗಿತ್ತು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಿಡಿಕಾರಿದ್ದಾರೆ.

ಶ್ವೇತ ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಟ್ರಂಪ್ ಅವರು, ಕೊರೊನಾ ಬಗ್ಗೆ ಮಾಹಿತಿ ನೀಡುವಲ್ಲಿ ಡಬ್ಲ್ಯೂಎಚ್‍ಒ ವಿಫಲವಾಗಿದೆ. ಹೀಗಾಗಿ ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದ್ದು, ಡಬ್ಲ್ಯೂಎಚ್‍ಒಗೆ ನೀಡಲಾಗುತ್ತಿದ್ದ ಧನಸಹಾಯವನ್ನು ನಿಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಮ್ಮ ನಿರ್ಧಾರವನ್ನು ತಿಳಿಸಿದ್ದಾರೆ.

ಅಮೆರಿಕದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಬಾರದ ರೀತಿಯಲ್ಲಿ ಹಬ್ಬುತ್ತಿದೆ. ಈ ಅಪಾಯದ ಬಗ್ಗೆ ಅರಿವಿದ್ದರೂ ಕೂಡ ಡಬ್ಲ್ಯೂಎಚ್‍ಒ ತಮ್ಮ ದೇಶಕ್ಕೆ ಮುನ್ನೆಚ್ಚರಿಕೆ ನೀಡಿರಲಿಲ್ಲ, ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರಲಿಲ್ಲ ಎಂದು ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಲ್ಲದೇ ಚೀನಾದ ಪರವಾಗಿ ಡಬ್ಲ್ಯೂಎಚ್‍ಒ ಇದೆ ಎನಿಸುತ್ತಿದೆ ಎಂದು ಆರೋಪಿಸಿದ್ದಾರೆ. ಡಬ್ಲ್ಯೂಎಚ್‍ಒಗೆ ಅಮೆರಿಕದಿಂದ ಹೆಚ್ಚು ಧನಸಹಾಯವನ್ನು ಮಾಡಲಾಗುತ್ತಿತ್ತು. ಅಮೆರಿಕದ ಮಂದಿ ವಿಶ್ವ ಆರೋಗ್ಯ ಸಂಸ್ತೆಗೆ ಹೆಚ್ಚು ಫಂಡ್ ನೀಡುತ್ತಿದ್ದರು. ಕಳೆದ ವರ್ಷ ಸಂಸ್ಥೆಗೆ ಅಮೆರಿಕ 400 ದಶಲಕ್ಷ ಯುಎಸ್ ಡಾಲರ್(3,056 ಕೋಟಿ) ನೆರವನ್ನು ನೀಡಿತ್ತು. ಪ್ರತಿ ವರ್ಷ 400ರಿಂದ 500 ದಶಲಕ್ಷ ಯುಎಸ್ ಡಾಲರ್ ನೆರವನ್ನು ಡಬ್ಲ್ಯೂಎಚ್‍ಒಗೆ ಅಮೆರಿಕ ನೀಡುತ್ತದೆ. ಆದರೆ ಚೀನಾ ಡಬ್ಲ್ಯೂಎಚ್‍ಒಗೆ 40 ದಶಲಕ್ಷ ಯುಎಸ್ ಡಾಲರ್ ಗಿಂತ ಕಡಿಮೆ ಹಣವನ್ನು ನೀಡುತ್ತದೆ. ಆದರೂ ಡಬ್ಲ್ಯೂಎಚ್‍ಒ ಚೀನಾ ಪರವಾಗಿದೆ ಎಂದು ಟ್ರಂಪ್ ಆರೋಪಿಸಿದ್ದಾರೆ.

ಡಬ್ಲ್ಯೂಎಚ್‍ಒ ಕೊರೊನಾ ವೈರಸ್ ಬಗ್ಗೆ ಸರಿಯಾಗಿ ಮಾಹಿತಿ ವಿಶ್ವಕ್ಕೆ ನೀಡುತ್ತಿಲ್ಲ. ರಾಷ್ಟ್ರಗಳ ನಡುವಿನ ಬಾಂಧವ್ಯ ಹೆಚ್ಚಿಸಲು, ಸ್ನೇಹವನ್ನು ಹೆಚ್ಚಿಸಲು ಡಬ್ಲ್ಯೂಎಚ್‍ಒ ಕೆಲಸ ಮಾಡಬೇಕು. ಯಾವ ರಾಷ್ಟ್ರದ ಸ್ಥಿತಿ ಹೇಗಿದೆ ಎಂದು ವಿಶ್ವಕ್ಕೆ ಮಾಹಿತಿ ನೀಡಬೇಕು. ಆದರೆ ಡಬ್ಲ್ಯೂಎಚ್‍ಒ ಕೊರೊನಾ ವೈರಸ್ ಹುಟ್ಟಿಕೊಂಡ ರಾಷ್ಟ್ರದಲ್ಲಿ ಯಾವ ಹೊಸ ನಿಯಮ ಪಾಲಿಸುತ್ತಿದ್ದಾರೆ? ವಿಜ್ಞಾನಿಗಳ ಸಂಶೋಧನೆ ಏನಾಯಿತು? ವೈದ್ಯರು ಹೇಗೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ಇತರೆ ರಾಷ್ಟ್ರಗಳಿಗೆ ನೀಡುತ್ತಿಲ್ಲ. ಚೀನಾದ ಪರವಾಗಿ ಡಬ್ಲ್ಯೂಎಚ್‍ಒ ನಿಂತಿದೆ ಎಂದು ಟ್ರಂಪ್ ಹರಿಹಾಯ್ದಿದ್ದಾರೆ.

ಸದ್ಯ ವಿಶ್ವಾದ್ಯಂತ 1,17,217 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಇದರಲ್ಲಿ ಹೆಚ್ಚು ಮಂದಿ ಅಮೆರಿಕದಲ್ಲಿಯೇ ಸಾವನ್ನಪ್ಪಿದ್ದಾರೆ. ಅಮೆರಿಕದಲ್ಲಿ 25 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 5,94,207 ಮಂದಿಗೆ ಸೋಂಕು ತಗುಲಿರುವುದು ವರದಿಯಾಗಿದೆ. ಇದು ಜಾಗತಿಕ ಮಟ್ಟದಲ್ಲಿ ಆರ್ಥಿಕ ವ್ಯವಸ್ಥೆಯನ್ನು ಅಲ್ಲೋಲ ಕಲ್ಲೋಲ ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *