ವಾಷಿಂಗ್ಟನ್: ಭಾರತಕ್ಕೆ 46 ಮಿಲಿಯನ್ ಡಾಲರ್‌ಗೆ ಜಾವೆಲಿನ್ ಕ್ಷಿಪಣಿ ಸಿಸ್ಟಮ್ ಮಾರಾಟಕ್ಕೆ ಅಮೆರಿಕ ಅನುಮೋದನೆ ನೀಡಿದೆ. ರಕ್ಷಣಾ ಭದ್ರತಾ ಸಹಕಾರ ಸಂಸ್ಥೆ (DSCA) ಅಗತ್ಯವಿರುವ ಪ್ರಮಾಣೀಕರಣವನ್ನು ತಲುಪಿಸಿದೆ ಎಂದು ತಿಳಿಸಲಾಗಿದೆ.
ಪ್ರಸ್ತಾವಿತ ಮಾರಾಟವು ಅಮೆರಿಕ-ಭಾರತದ ಕಾರ್ಯತಂತ್ರದ ಸಂಬಂಧವನ್ನು ಬಲಪಡಿಸಲು ಸಹಾಯ ಮಾಡುವ ಮೂಲಕ ಅಮೆರಿಕದ ವಿದೇಶಾಂಗ ನೀತಿ ಮತ್ತು ರಾಷ್ಟ್ರೀಯ ಭದ್ರತಾ ಉದ್ದೇಶಗಳನ್ನು ಬೆಂಬಲಿಸುತ್ತದೆ ಎಂದು ಡಿಎಸ್‌ಸಿಎ ಹೇಳಿದೆ.
ಭಾರತಕ್ಕೆ 45.7 ಮಿಲಿಯನ್ ಡಾಲರ್ ಮೌಲ್ಯದ ಮಾರಾಟ ಪ್ಯಾಕೇಜ್‌ನಲ್ಲಿ 100 FGM-148 ಜಾವೆಲಿನ್ ರೌಂಡ್ಸ್, ಒಂದು ಜಾವೆಲಿನ್ FGM-148 ಕ್ಷಿಪಣಿ, ಫ್ಲೈ-ಟು-ಬೈ, ಮತ್ತು 25 ಜಾವೆಲಿನ್ ಲೈಟ್‌ವೇಟ್ ಕಮಾಂಡ್ ಲಾಂಚ್ ಯೂನಿಟ್‌ಗಳು (LwCLU) ಅಥವಾ ಜಾವೆಲಿನ್ ಬ್ಲಾಕ್ 1 ಕಮಾಂಡ್ ಲಾಂಚ್ ಯೂನಿಟ್‌ಗಳು (CLU) ಸೇರಿವೆ.
ಈ ಮಾರಾಟವು ಇಂಡೋ-ಪೆಸಿಫಿಕ್ ಮತ್ತು ದಕ್ಷಿಣ ಏಷ್ಯಾ ಪ್ರದೇಶಗಳಲ್ಲಿ ರಾಜಕೀಯ ಸ್ಥಿರತೆ, ಶಾಂತಿ ಮತ್ತು ಆರ್ಥಿಕ ಪ್ರಗತಿಗೆ ಪ್ರಮುಖ ಶಕ್ತಿಯಾಗಿ ಮುಂದುವರೆದಿರುವ ಪ್ರಮುಖ ರಕ್ಷಣಾ ಪಾಲುದಾರ ಭಾರತದ ಭದ್ರತೆಯನ್ನು ಸುಧಾರಿಸುತ್ತದೆ ಎಂದು ಡಿಎಸ್‌ಸಿಎ ತಿಳಿಸಿದೆ.
ಪ್ರಸ್ತಾವಿತ ಮಾರಾಟವು ಭಾರತದ ಪ್ರಸ್ತುತ ಮತ್ತು ಭವಿಷ್ಯದ ಬೆದರಿಕೆಗಳನ್ನು ಎದುರಿಸುವ ಸಾಮರ್ಥ್ಯವನ್ನು ಸುಧಾರಿಸುತ್ತದೆ. ತನ್ನ ತಾಯ್ನಾಡಿನ ರಕ್ಷಣೆಯನ್ನು ಬಲಪಡಿಸುತ್ತದೆ. ಪ್ರಾದೇಶಿಕ ಬೆದರಿಕೆಗಳನ್ನು ತಡೆಯುತ್ತದೆ. ಇವುಗಳನ್ನು ತನ್ನ ಸಶಸ್ತ್ರ ಪಡೆಗಳಲ್ಲಿ ಸೇರಿಸಿಕೊಳ್ಳಲು ಭಾರತಕ್ಕೆ ಯಾವುದೇ ತೊಂದರೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
