ಮುಂಬೈ ಪಾತಕಿಗಳ ತಲೆಗೆ 35 ಕೋಟಿ ರೂ. ಅಮೆರಿಕ ಇನಾಮು

Public TV
1 Min Read

ನವದೆಹಲಿ: 2008 ನ. 26 ರಂದು ವಾಣಿಜ್ಯ ನಗರಿ ಮುಂಬೈನಲ್ಲಿ ನಡೆದಿದ್ದ ಉಗ್ರರ ದಾಳಿಯ ಸಂಚಿನ ಬಗ್ಗೆ ಮಾಹಿತಿ ನೀಡುವವರಿಗೆ 35 ಕೋಟಿ ರೂ. (5 ಮಿಲಿಯನ್ ಡಾಲರ್) ಬಹುಮಾನ ನೀಡುವುದಾಗಿ ಅಮೆರಿಕ ಘೋಷಿಸಿದೆ.

ಮುಂಬೈ ನಗರದ ದಾಳಿ ನಡೆದು ಇಂದಿಗೆ 10 ವರ್ಷ ಪೂರ್ಣಗೊಂಡಿದ್ದು, ಈ ಸಂದರ್ಭದಲ್ಲಿ ಅಮೆರಿಕ ಸರ್ಕಾರ ಈ ಘೋಷಣೆ ಮಾಡಿದೆ. ಮುಂಬೈ ದಾಳಿಯಲ್ಲಿ ಅಮೆರಿಕದ 6 ಪ್ರಜೆಗಳು ಮೃತಪಟ್ಟಿದ್ದರು. ಅಲ್ಲದೇ ಸತತ ಮೂರು ದಿನ ನಡೆದ ದಾಳಿಯಲ್ಲಿ ಒಟ್ಟು 166 ಮಂದಿ ಬಲಿಯಾಗಿದ್ದರು. ಇನ್ನು ಈ ದಾಳಿಯಲ್ಲಿ ಪಾಲ್ಗೊಂಡಿದ್ದ 10 ಭಯೋತ್ಪಾದಕರಲ್ಲಿ 9 ಮಂದಿಯನ್ನು ಭಾರತದ ಸೈನಿಕರು ಹೊಡೆದುರುಳಿಸಿದ್ದರು.

ಅಮೆರಿಕದ ಡಿಪಾರ್ಟ್‍ಮೆಂಟ್ ಆಫ್ ಸ್ಟೇಟ್ ರಿವಾರ್ಡ್ ಫಾರ್ ಜಸ್ಟಿಸ್ (ಆರ್‍ಎಫ್‍ಜೆ) ಸಂಸ್ಥೆಯ ಯೋಜನೆಯ ಅಡಿಯಲ್ಲಿ ಈ ಬಹುಮಾನ ಘೋಷಣೆ ಮಾಡಲಾಗಿದೆ. 2008ರ ಮುಂಬೈ ಘಟನೆಗೆ ನ್ಯಾಯ ಓದಗಿಸಲು, ದಾಳಿಗೆ ಕಾರಣರಾದವರ ವಿರುದ್ಧ ಕ್ರಮಕೈಗೊಳ್ಳಲು ಅಂತರಾಷ್ಟ್ರೀಯ ಪಾಲುದಾರರೊಂದಿಗೆ ಕೆಲಸ ಮಾಡಲು ಆರ್‍ಎಫ್‍ಜೆ ಸಿದ್ಧವಿದೆ ಎಂದು ತಿಳಿಸಿದೆ. ಈ ಹಿಂದೆ ಈ ಸಂಸ್ಥೆ ಲಷ್ಕರ್ ಎ ತೋಯಿಬಾ ಉಗ್ರ ಸಂಘಟನೆಯ ಸಂಸ್ಥಾಪಕರಾದ ಹಫೀಜ್ ಮೊಹಮ್ಮದ್ ಸೈಯದ್ ಮೇಲೆ 70 ಕೋಟಿ ರೂ. ಹಾಗೂ ಇದೇ ಸಂಘಟನೆ ಮತ್ತೊಬ್ಬ ನಾಯಕ ಅಫೀಜ್ ಅಬ್ದುಲ್ ರಹಮಾನ್ ಮಕ್ಕಿ ಬಗ್ಗೆ ಮಾಹಿತಿ ನೀಡಿದವರಿಗೆ 14 ಕೋಟಿ ರೂ. ಬಹುಮಾನ ಘೋಷಣೆ ಮಾಡಿತ್ತು.

ಉಳಿದಂತೆ ಮುಂಬೈ ದಾಳಿಯಲ್ಲಿ ಜೀವಂತ ಸೆರೆ ಹಿಡಿದಿದ್ದ ಅಜ್ಮಲ್ ಕಸಬ್ ನನ್ನು ನಾಲ್ಕು ವರ್ಷಗಳ ಬಳಿಕ 2012ರ ನವೆಂಬರ್ 21ರಂದು ಗಲ್ಲಿಗೇರಿಸಲಾಯಿತು. ಇಂದಿಗೆ ದಾಳಿ ನಡೆದು ಹತ್ತು ವರ್ಷಗಳಾಗಿದೆ. ಆದರೆ ಪಾಕಿಸ್ತಾನ ಮಾತ್ರ ಸಂಚುಕೋರರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Share This Article
Leave a Comment

Leave a Reply

Your email address will not be published. Required fields are marked *