UPI Down | ದೇಶಾದ್ಯಂತ ಯುಪಿಐ ಸೇವೆಗಳಲ್ಲಿ ವ್ಯತ್ಯಯ – ಬ್ಯಾಂಕಿಂಗ್‌ ಸೇವೆಗಳ ಮೇಲೂ ಪರಿಣಾಮ

Public TV
2 Min Read

ನವದೆಹಲಿ: ದೇಶಾದ್ಯಂತ ಹಲವು ನಗರಗಳಲ್ಲಿಂದು ಯುಪಿಐ (UPI) ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ.

ಗೂಗಲ್‌ಪೇ, ಫೋನ್‌ಪೇ (Phonepe), ಪೇಟಿಎಂ ಸೇರಿದಂತೆ ಹಲವಾರು ಯುಪಿಐ ಸಂಯೋಜಿತ ಅಪ್ಲಿಕೇಶನ್‌ಗಳಲ್ಲಿ ಏಕಕಾಲಕ್ಕೆ ಸಮಸ್ಯೆಯಾಗಿದೆ. ಇದರಿಂದ ಗ್ರಾಹಕರು ಬೇರೆಯವರಿಗೆ ಹಣ ಕಳುಹಿಸಲು ಸಾಧ್ಯವಾಗದೇ ಪರದಾಡಿದ್ದಾರೆ. ಯಾವ ಕಾರಣಕ್ಕೆ ಈ ಸಮಸ್ಯೆ ಎದುರಾಗಿದೆ ಎನ್ನುವುದು ತಿಳಿದು ಬಂದಿಲ್ಲ.

ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌:
ಶನಿವಾರ (ಇಂದು) ಮಧ್ಯಾಹ್ನ 12 ಗಂಟೆ ಸುಮಾರಿಗೆ ಏಕಕಾಲಕ್ಕೆ ದೇಶಾದ್ಯಂತ ಯುಪಿಐ ಸೇವೆಗಳಲ್ಲಿ ಸಮಸ್ಯೆಯಾಗಿದೆ, ಡೌನ್‌ಡೆಕ್ಟರ್‌ ಕೂಡ ಇದನ್ನು ವರದಿ ಮಾಡಿದೆ. ಕ್ಯೂಆರ್‌ ಕೋಡ್‌ (QR Code) ಸ್ಕ್ಯಾನ್‌ ಮಾಡಿದ ಗ್ರಾಹಕರು 5 ನಿಮಿಷವಾದ್ರೂ ಪೂರ್ಣಗೊಳ್ಳದೇ ಇರುವುದು ಕಂಡುಬಂದಾಗ ಸಮ್ಯಸ್ಯೆಯಾಗಿರುವುದು ಗೊತ್ತಾಗಿದೆ. ಬಳಿಕ ಬಹಳಷ್ಟು ಮಂದಿ ತಮ್ಮ ಸೋಷಿಯಲ್‌ ಮೀಡಿಯಾಗಳಲ್ಲಿ ಪೋಸ್ಟ್‌ ಹಾಕಿದ್ದಾರೆ. #upidown ಎನ್ನುವ ಹ್ಯಾಶ್‌ಟ್ಯಾಗ್‌ನೊಂದಿಗೆ ಎಕ್ಸ್‌ ಖಾತೆಯಲ್ಲಿ ಸ್ಕ್ರೀನ್‌ಶಾಟ್‌ ಅನ್ನು ಪೋಸ್ಟ್‌ ಮಾಡಿದ್ದಾರೆ. ಇದು ಸಮಸ್ಯೆಯಾದ ಕೆಲವೇ ನಿಮಿಷಗಳಲ್ಲಿ ಟ್ರೆಂಡಿಂಗ್‌ ಆಗಿದೆ.

ಬ್ಯಾಂಕಿಂಗ್‌ ಸೇವೆಗಳಲ್ಲೂ ವ್ಯತ್ಯಯ:
SBI, Google Pay, HDFC ಬ್ಯಾಂಕ್ ಮತ್ತು ICICI ಬ್ಯಾಂಕಿಂಗ್‌ನ UPI ಸೇವೆಗಳ ಮೇಲೂ ಪರಿಣಾಮ ಬೀರಿದೆ ಎಂದು ಡೌನ್‌ಡೆಕ್ಟರ್ ತನ್ನ ಪೋರ್ಟಲ್‌ನಲ್ಲಿ ಮಾಹಿತಿ ನೀಡಿದೆ. UPI ಭಾರತದಲ್ಲಿ ಜನಪ್ರಿಯ ಸೇವೆಯಾಗಿದೆ, ಇದರ ಸಹಾಯದಿಂದ ಬಳಕೆದಾರರು ಟೀ ಅಂಗಡಿಗಳಿಂದ ರೈಲ್ವೇ ಟಿಕೆಟ್ ಬುಕಿಂಗ್ ವರೆಗೂ ಪಾವತಿ ಮಾಡ್ತಾರೆ. ಹೀಗಿರುವಾಗ ಸೇವೆ ಏಕಕಾಲಕ್ಕೆ ಸ್ಥಗಿತಗೊಂಡರೆ ಸಮಸ್ಯೆ ಎದುರಿಸಬೇಕಾಗುತ್ತದೆ ಅನ್ನೋದು ಸುಳ್ಳಲ್ಲ.

ತಾಂತ್ರಿಕ ಸಮಸ್ಯೆ ಕಾರಣ: NPCI 
ಇನ್ನೂ ಇದಕ್ಕೆ ಪ್ರತಿಕ್ರಿಯಿಸಿ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ನ್ಯಾಷನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ, ಮಧ್ಯಂತರ ತಾಂತ್ರಿಕ ಸಮಸ್ಯೆಗಳಿಂದ ಯುಪಿಐ ವಹಿವಾಟಿನಲ್ಲಿ ಸಮಸ್ಯೆಯಾಗಿದೆ. ಈ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದೆ.

Share This Article