ಅಣ್ಣಾವ್ರು, ಬಿಗ್ ಬಿ ಬಳಸಿದಂಥ ಪಿಸ್ತೂಲ್ ಹಿಡಿದ ಉಪ್ಪಿ

Public TV
2 Min Read

ಬೆಂಗಳೂರು: ಉಪೇಂದ್ರ ಅಭಿನಯದ ಬಹುನಿರೀಕ್ಷಿತ ಕಬ್ಜ ಚಿತ್ರ ತೀವ್ರ ಸಂಚಲನ ಸೃಷ್ಟಿಸಿದ್ದು, ರಿಯಲ್ ಸ್ಟಾರ್ ಉಪೇಂದ್ರ ಸಹ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಕುರಿತ ಹಲವು ಅಚ್ಚರಿ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಉಪ್ಪಿ ಕೇವಲ ಸಿನಿಮಾ ಮಾತ್ರವಲ್ಲ ರಾಜಕೀಯದಲ್ಲೂ ಸಕ್ರಿಯರಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟಿವ್ ಆಗಿದ್ದಾರೆ. ತಮ್ಮ ಸಿನಿಮಾಗಳ ಅಪ್‍ಡೇಟ್ ಜೊತೆಗೆ ನೀತಿ ಬೋಧನೆಗಳು, ತಮ್ಮ ಪ್ರಜಾಕೀಯದ ವಿಷಯಗಳ ಕುರಿತು ಹಂಚಿಕೊಳ್ಳುತ್ತಿರುತ್ತಾರೆ.

ಇದೀಗ ಕಬ್ಜ ಸಿನಿಮಾದ ಕುರಿತು ಅಚ್ಚರಿಯ ವಿಷಯವೊಂದನ್ನು ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಮಾರ್ಚ್‍ನಿಂದ ಕಬ್ಜ ಸಿನಿಮಾ ಚಿತ್ರೀಕರಣ ಪ್ರಾರಂಭವಾಗಿದ್ದು, ಬಿರುಸಿನಿಂದ ಸಾಗಿದೆ. ಅಲ್ಲದೆ ಇದೊಂದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ, ಹಿಂದಿ, ಮರಾಠಿ ಹಾಗೂ ಬೆಂಗಾಲಿ ಒಟ್ಟು ಏಳು ಭಾಷೆಗಳಲ್ಲಿ ಸಿನಿಮಾ ಸಿದ್ಧವಾಗುತ್ತಿದೆ. ಮಾತ್ರವಲ್ಲದೆ ಚೀನಾದಲ್ಲಿ ಕನ್ನಡ ಚಿತ್ರಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚೀನಿ ಭಾಷೆಗೂ ಚಿತ್ರವನ್ನು ಡಬ್ ಮಾಡಲು ನಿರ್ದೇಶಕರು ಚಿಂತನೆ ನಡೆಸಿದ್ದಾರೆ.

ಆರ್.ಚಂದ್ರು ಇದಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಈ ಮೂಲಕ ಐ ಲವ್ ಯು ಚಿತ್ರದ ಬಳಿಕ ಮತ್ತೆ ಉಪೇಂದ್ರ ಹಾಗೂ ಆರ್.ಚಂದ್ರು ಜೋಡಿ ಒಂದಾಗುತ್ತಿದೆ. ಚಿತ್ರ ಭೂಗತ ಲೋಕದ ಕಥೆಯನ್ನು ಒಳಗೊಂಡಿದೆ. ಬರೀ ಲಾಂಗು, ಮಚ್ಚು ಮಾತ್ರವಲ್ಲದೆ ಲವ್ ಹಾಗೂ ಸೆಂಟಿಮೆಂಟ್‍ಗಳನ್ನೂ ಒಳಗೊಂಡಿದೆಯಂತೆ. ಅಲ್ಲದೆ ಉಪೇಂದ್ರ ನಿರ್ದೇಶನದ ಓಂ ಚಿತ್ರಕ್ಕೆ ಇದನ್ನು ಹೋಲಿಸಲಾಗುತ್ತಿದೆ. ಸುಮಾರು 40 ಕೋಟಿ ರೂ. ವೆಚ್ಚದಲ್ಲಿ ಸಿನಿಮಾ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇದೀಗ ಚಿತ್ರದ ಕುರಿತು ಉಪ್ಪಿ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದು, ಕುತೂಹಲಕ್ಕೆ ಕಾರಣವಾಗಿದೆ. 80ರ ದಶಕದ ಕಥೆಯನ್ನು ಹೇಳಲಾಗುತ್ತಿದ್ದು, ಈ ಹಿಂದೆ 80 ದಶಕದ ಶೈಲಿಯಂತೆ ಅಂಗಿ ಹಾಗೂ ಬೆಲ್ ಬಾಟಂ ಪ್ಯಾಂಟ್ ಧರಿಸಿ, ಲಾಂಗ್ ಹಿಡಿದಿದ್ದ ಪೋಸ್ಟರ್ ಮೂಲಕ ಉಪೇಂದ್ರ ಗಮನ ಸೆಳೆದಿದ್ದರು. ಇದೀಗ ಹಳೆ ಕಾಲದ ಪಿಸ್ತೂಲುಗಳನ್ನು ಹಿಡಿದು ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.

ಎರಡೂ ಕೈಯಲ್ಲಿ ಪಿಸ್ತೂಲುಗಳನ್ನು ಹಿಡಿದು ಮೂರು ವಿಭಿನ್ನ ಭಂಗಿಗಳಲ್ಲಿ ಕಾಣಿಸಿಕೊಂಡಿರುವ ಚಿತ್ರಗಳನ್ನು ಉಪೇಂದ್ರ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಇದಕ್ಕೆ ಸಾಲುಗಳನ್ನು ಬರೆದಿರುವ ಅವರು, ‘ಅಣ್ಣಾವ್ರು, ಅಮಿತಾಬ್ ಬಚ್ಚನ್ ಸಾರ್ ರಂತಹ ಮೇರು ನಟರು ಗಂಧದ ಗುಡಿ, ಶೋಲೆ ಚಿತ್ರಗಳಲ್ಲಿ ಬಳಸಿದಂತಹ ಪಿಸ್ತೂಲು ಚಿತ್ರೀಕರಣದಲ್ಲಿ ಬಳಸಿದಾಗ ಆದ ರೋಮಾಂಚನ ಅವಿಸ್ಮರಣೀಯ’ ಎಂದು ಬರೆದುಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *