ಯುಪಿಎ ಅವಧಿಯಲ್ಲಿ 1,45,226 ಕೋಟಿ ರೂ. ‘ಸಾಲ ಮನ್ನಾ’ – ರಾಹುಲ್‍ಗೆ ಸೀತಾರಾಮನ್ ತಿರುಗೇಟು

Public TV
3 Min Read

– ಮನಮೋಹನ್ ಸಿಂಗ್ ಬಳಿ ರಾಹುಲ್ ರೈಟಾಫ್ ಬಗ್ಗೆ ತಿಳಿದುಕೊಳ್ಳಲಿ
– ಸರಣಿ ಟ್ವೀಟ್ ಮಾಡಿ ಆರೋಪಕ್ಕೆ ಸಚಿವೆಯಿಂದ ತಿರುಗೇಟು

ನವದೆಹಲಿ: ಜನರನ್ನು ದಿಕ್ಕುತ್ತಪ್ಪಿಸಲು ಲಜ್ಜೆಗೆಟ್ಟ ರೀತಿ ಪ್ರಯತ್ನಿಸುವುದೇ ಕಾಂಗ್ರೆಸ್ಸಿನ ವೈಶಿಷ್ಟ್ಯತೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿರುಗೇಟು ನೀಡಿದ್ದಾರೆ.

ಆರ್‌ಬಿಐ ರೈಟಾಫ್ ಮಾಡಿದ ವ್ಯಕ್ತಿಗಳ ವಿವರವನ್ನು ಬಹಿರಂಗ ಪಡಿಸಿದ ಬೆನ್ನಲ್ಲೇ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರು “ಆಡಳಿತ ಪಕ್ಷದ ಸ್ನೇಹಿತ”ರಾಗಿದ್ದ ಹಿನ್ನೆಲೆಯಲ್ಲಿ ಸರ್ಕಾರ ಈ ಮಾಹಿತಿಯನ್ನು ಸಂಸತ್ತಿನಲ್ಲಿ ಬಹಿರಂಗ ಪಡಿಸಲಿಲ್ಲ ಎಂದು ಆರೋಪಿಸಿದ್ದರು.

“ನಾನು ಸಂಸತ್ತಿನಲ್ಲಿ ಸರಳ ಪ್ರಶ್ನೆ ಕೇಳಿದ್ದೆ. ಬ್ಯಾಂಕುಗಳಿಗೆ ಹಗರಣ ಮಾಡಿದ್ದ 50 ಮಂದಿಯ ಪಟ್ಟಿಯನ್ನು ಬಿಡುಗಡೆ ಮಾಡಿ ಎಂದು ಕೇಳಿದ್ದೆ. ಆದರೆ ಹಣಕಾಸು ಸಚಿವರು ಈ ಪ್ರಶ್ನೆಗೆ ಉತ್ತರ ನೀಡಲು ನಿರಾಕರಿಸಿದರು. ಈಗ ಆರ್‌ಬಿಐ ನೀರವ್ ಮೋದಿ, ಮೆಹುಲ್ ಚೋಕ್ಸಿ, ಮತ್ತು ಬಿಜೆಪಿ ಸ್ನೇಹಿತರು ಈ ಪಟ್ಟಿಯಲ್ಲಿದ್ದಾರೆ. ಈ ಕಾರಣಕ್ಕೆ ಅವರು ಸಂಸತ್ತಿನಲ್ಲಿ ಸತ್ಯವನ್ನು ಮರೆಮಾಚಿದ್ದರು” ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿ ಕುಟುಕಿದ್ದರು.

50 ಮಂದಿ ಉದ್ಯಮಿಗಳ ಸಾಲವನ್ನು ರೈಟಾಫ್ ಮಾಡಿದ ವಿಚಾರಕ್ಕೆ ಕಾಂಗ್ರೆಸ್ ನಾಯಕರಿಂದ ಟೀಕೆ ವ್ಯಕ್ತವಾಗುತ್ತಿದ್ದಂತೆ ನಿರ್ಮಲಾ ಸೀತಾರಾಮನ್ ಸರಣಿ ಟ್ವೀಟ್ ಮಾಡಿ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

ಟ್ವೀಟ್‍ನಲ್ಲಿ ಏನಿದೆ?
ಜನರನ್ನು ದಿಕ್ಕುತ್ತಪ್ಪಿಸಲು ಲಜ್ಜೆಗೆಟ್ಟ ರೀತಿ ಪ್ರಯತ್ನಿಸುವುದೇ ಕಾಂಗ್ರೆಸ್ಸಿನ ವೈಶಿಷ್ಟ್ಯತೆ. ತಮಗೆ ತೋಚಿದ ವಿಚಾರವನ್ನು ಬೇಕಾದಂತೆ ಹೇಳುತ್ತಾರೆ. ಆರ್ಥಿಕ ವ್ಯವಸ್ಥೆಯನ್ನು ಸರಿ ಮಾಡಲು ಕಾಂಗ್ರೆಸ್ ವಿಫಲವಾಗಿದ್ದು ಯಾಕೆ ಎನ್ನುವುದನ್ನು ರಾಹುಲ್ ಗಾಂಧಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ಆಡಳಿತದಲ್ಲಿದ್ದಾಗಲೂ ಅಥವಾ ವಿರೋಧ ಪಕ್ಷದಲ್ಲಿದ್ದರೂ ಕಾಂಗ್ರೆಸ್ ಭ್ರಷ್ಟಾಚಾರ ನಿಲ್ಲಿಸಲು ಯಾವುದೇ ಬದ್ಧತೆ ತೋರಿಸಲಿಲ್ಲ.

ನರೇಂದ್ರ ಮೋದಿ ಸರ್ಕಾರ ಸುಸ್ತಿದಾರರ ವಿರುದ್ಧ ಕ್ರಮ ಕೈಗೊಂಡಿದೆ. ಈಗಾಗಲೇ 3,515 ಎಫ್‍ಐಆರ್ ದಾಖಲಾಗಿದೆ. ನೀರವ್ ಮೋದಿ, ಮೆಹುಲ್ ಚೋಕ್ಸಿ ಮತ್ತು ವಿಜಯ್ ಮಲ್ಯ ಪ್ರಕರಣಗಳ ಪೈಕಿ ಒಟ್ಟು 18,332 ಕೋಟಿ ಮೌಲ್ಯ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಚೋಕ್ಸಿ, ಮಲ್ಯ ಸೇರಿದಂತೆ 50 ಉದ್ಯಮಿಗಳ 68,607 ಕೋಟಿ ‘ಸಾಲ ಮನ್ನಾ’. ಯಾರ ಸಾಲ ಎಷ್ಟು ರೈಟಾಫ್ ಆಗಿದೆ?

2009-2010 ಮತ್ತು 2013-2014ರ ನಡುವೆ ವಾಣಿಜ್ಯ ಬ್ಯಾಂಕುಗಳು 1,45,226 ಕೋಟಿ ರೂ. ರೈಟಾಫ್ ಮಾಡಿವೆ. ಎನ್‍ಡಿಎ ಸರ್ಕಾರವನ್ನು ಟೀಕೆ ಮಾಡುವ ಮೊದಲು ರಾಹುಲ್ ಗಾಂಧಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಬಳಿ ರೈಟಾಫ್ ಎಂದರೇನು ಎಂದು ಕೇಳಿ ತಿಳಿದುಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ.

“2006ರಿಂದ 2008ರ ಮಧ್ಯೆ ದೊಡ್ಡ ಪ್ರಮಾಣದ ಅನುತ್ಪಾದಕ ಸಾಲಗಳು ಸೃಷ್ಟಿಯಾಗಿತ್ತು. ಸಾಲ ಹಿಂತಿರುಗಿಸದೆ ವಂಚಿಸದೆ ಹಿನ್ನಲೆಯಿರುವ ಪ್ರಮುಖ ಉದ್ಯಮಿಗಳೇ ಈ ಸಾಲಗಳನ್ನು ಹೊಂದಿದ್ದರು” ಎಂಬ ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರ ಹೇಳಿಕೆಯನ್ನು ತಮ್ಮ ವಾದಕ್ಕೆ ಉಲ್ಲೇಖಿಸಿ ನಿರ್ಮಲಾ ಸೀತಾರಾಮನ್ ಟ್ವೀಟ್ ಮಾಡಿದ್ದಾರೆ.

ವಿಜಯ್ ಮಲ್ಯ ಪ್ರಕರಣದಲ್ಲಿ 1,693 ಕೋಟಿ ರೂ. ಆಸ್ತಿಯನ್ನು ಜಪ್ತಿ ಮಾಡಲಾಗಿದೆ. ಈಗಾಗಲೇ ಉದ್ದೇಶಪೂರ್ವಕ ಸುಸ್ತಿದಾರ ಎಂದು ಘೋಷಿಸಲಾಗಿದ್ದು ಸರ್ಕಾರ ಇಂಗ್ಲೆಂಡ್ ಸರ್ಕಾರಕ್ಕೆ ಹಸ್ತಾಂತರ ಮಾಡುವಂತೆ ಕೇಳಿಕೊಂಡಿದೆ. ಹೈಕೋರ್ಟ್ ಸಹ ಹಸ್ತಾಂತರ ಪರವಾಗಿಯೇ ತೀರ್ಪು ನೀಡಿದೆ ಎಂದು ಹೇಳಿದ್ದಾರೆ.

ನೀರವ್ ಮೋದಿ ಪ್ರಕರಣದಲ್ಲಿ 2,387 ಕೋಟಿ ರೂ. ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆಯಲಾಗಿದೆ 53.45 ಕೋಟಿ ರೂ. ಮೌಲ್ಯದ ಲಕ್ಷುರಿ ವಸ್ತುಗಳನ್ನು ಹರಾಜು ಹಾಕಲಾಗಿದೆ. ಈಗಾಗಲೇ ಈ ವ್ಯಕ್ತಿ ಇಂಗ್ಲೆಂಡ್ ಜೈಲಿನಲ್ಲಿದ್ದಾರೆ. ಮೆಹುಲ್ ಚೋಕ್ಸಿ ಪ್ರಕರಣಲ್ಲಿ 1,936.95 ಕೋಟಿ ರೂ. ಮೌಲ್ಯ ಆಸ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಈಗಾಗಲೇ ರೆಡ್ ನೋಟಿಸ್ ಹೊರಡಿಸಲಾಗಿದ್ದು. ಆಂಟಿಗುವಾ ಸರ್ಕಾರಕ್ಕೆ ಹಸ್ತಾಂತರಿಸುವಂತೆ ಕೇಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಸಾಲ ಮರಳಿಸುವ ಶಕ್ತಿ ಇದ್ದರೂ ಹಿಂತಿರುಗಿಸದಿದ್ದವರನ್ನು ಉದ್ದೇಶಪೂರ್ವಕವಾಗಿ ಸಾಲ ಮರುಪಾವತಿ ಮಾಡದವರು ಎಂದು ಹೆಸರಿಸಲಾಯಿತು. ಇಂತವರು ಹಿಂದಿನ ಯುಪಿಎ ಸರ್ಕಾರದ  ‘ಫೋನ್ ಬ್ಯಾಂಕಿಂಗ್’ ಸೌಲಭ್ಯವನ್ನು ಬಹಳ ಚೆನ್ನಾಗಿ ಬಳಸಿಕೊಂಡಿದ್ದರು ಎಂದು ನಿರ್ಮಲಾ ಸೀತಾರಾಮನ್ ಆರೋಪಿಸಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *