CAA ವಿರೋಧಿಸಿ ಪ್ರತಿಭಟನೆ – ಆರು ವರ್ಷ ಹಿಂದೆ ಮೃತಪಟ್ಟವರಿಗೆ ನೋಟಿಸ್ ನೀಡಿದ ಜಿಲ್ಲಾಡಳಿತ

Public TV
2 Min Read

ಲಕ್ನೋ: ಆರು ವರ್ಷಗಳ ಹಿಂದೆ ಪಿರೋಜಾಬಾದ್ ನಲ್ಲಿ ಮೃತರಾಗಿದ್ದ 87 ವರ್ಷದ ಬನ್ನೆಖಾನ್, ನ್ಯೂಮೋನಿಯಾದಿಂದ ಬಳಲಿ ದೆಹಲಿಯ ಗಂಗಾರಾಮ್ ಆಸ್ಪತ್ರೆಯಿಂದ ವಾಪಸ್ ಆದ 90 ವರ್ಷದ ಸೂಫಿ ಅನ್ಸಾರ್ ಹುಸೇನ್, ತಿಂಗಳುಗಳಿಂದ ಆರೋಗ್ಯ ಹದಗೆಟ್ಟು ಮಲಗಿರುವ ಕೊಟ್ಲಾ ಮೊಹಲ್ಲಾದ 93 ವರ್ಷದ ಫಸಹತ್ ಮೀರ್ ಖಾನ್ ಇವರೆಲ್ಲ ಸದ್ಯ ಜಾಮೀನು ಪಡೆಯಬೇಕಿದೆ.

ಸಿಎಎ ವಿರೋಧಿಸಿ ಉತ್ತರ ಪ್ರದೇಶದಲ್ಲಿ ಪ್ರತಿಭಟನೆಗಳಾಗುತ್ತಿದ್ದು, ಸಾಕಷ್ಟು ಮಂದಿಗೆ ನೋಟಿಸ್ ನೀಡಲಾಗಿದೆ. ನೋಟಿಸ್ ನೀಡುವ ಆತುರದಲ್ಲಿ ಮೃತ ವ್ಯಕ್ತಿಗಳು ಹಾಗೂ ವಯೋವೃದ್ಧರಿಗೂ ನೋಟಿಸ್ ನೀಡಿ ಈಗ ಉತ್ತರ ಪ್ರದೇಶ ಸರ್ಕಾರ ಟೀಕೆಗೆ ಗುರಿಯಾಗಿದೆ. ಈ ರೀತಿಯ ಸುಮಾರು 200 ಹೆಚ್ಚು ಮಂದಿ ಮ್ಯಾಜಿಸ್ಟ್ರೇಟ್ ಮುಂದೆ ಹೋಗಿ ಸಮಾಜದ ಶಾಂತಿ ಕದಡುವುದಿಲ್ಲ ಎಂದು ಜಾಮೀನು ಪಡೆಯಬೇಕಿದೆ.

ಫಿರೋಜಾಬಾದ್ ಜಿಲ್ಲಾ ಮ್ಯಾಜಿಸ್ಟ್ರೇಟ್ ವ್ಯಾಪ್ತಿಯಲ್ಲಿ ಫಸಹತ್ ಮೀರ್ ಖಾನ್ ಮತ್ತು ಸೂಫಿ ಅನ್ಸಾರ್ ಹುಸೇನ್ ಇಬ್ಬರೂ ಸ್ಥಳೀಯ ಶಾಂತಿ ಸಮಿತಿಗಳ ಸದಸ್ಯರಾಗಿದ್ದರು. ಕಳೆದ ಎರಡು ವಾರಗಳ ಹಿಂದೆ ಇವರನ್ನು ಭೇಟಿ ಮಾಡಿದ್ದ, ಜಿಲ್ಲಾಧಿಕಾರಿ ಚಂದ್ರ ವಿಜಯ್ ಸಿಂಗ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಚೀಂದ್ರ ಪಟೇಲ್ ಈ ಪ್ರದೇಶದಲ್ಲಿ ಶಾಂತಿ ಸಂದೇಶವನ್ನು ಹರಡುವಂತೆ ಮನವಿ ಮಾಡಿದ್ದರು.

ಫಸಹತ್ ಮೀರ್ ಖಾನ್ ಮತ್ತು ಸೂಫಿ ಅನ್ಸಾರ್ ಹುಸೇನ್ ಅವರ ಮನೆಯಿಂದ ಕೂಗಳತೆ ದೂರದಲ್ಲಿರುವ ಮೃತ ಬನ್ನೆಖಾನ್ ಅವರ ಹಿರಿಯ ಪುತ್ರ ಪರ್ವೇಜ್ ಖಾನ್ ಗೆ ತಂದೆಗೆ ಜಾಮೀನು ಪಡೆಯುವಂತೆ ಸೂಚಿಸಿದೆ. ಮೃತರನ್ನು ಗಮನಿಸದೇ ಜಿಲ್ಲಾಡಳಿತ ನೋಟೀಸ್ ನೀಡಿದ್ದನ್ನು ವಿರೋಧಿಸಿರುವ ಫರ್ವೆಜ್ ಖಾನ್ ಕನಿಷ್ಠ ಪರಿಶೀಲನೆ ನಡೆಸದೆ ನೋಟಿಸ್ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಪತ್ರಿಕೆಯಲ್ಲಿ ನೋಟಿಸ್ ಬಂದಿರುವುದನ್ನು ಗಮನಿಸಿದ್ದೇನೆ 2014 ರಲ್ಲಿ ತಂದೆ ಊಟ ಮಾಡುವಾಗ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಫರ್ವೇಜ್ ಖಾನ್ ಹೇಳಿದ್ದಾರೆ.

ಡಿಸೆಂಬರ್ 20 ರಂದು ಸಿಎಎ ವಿರೋಧಿಸಿ ನಡೆದ ಪ್ರತಿಭಟನೆಯ ವೇಳೆ ಹಿಂಸಾಚಾರ ನಡೆದಿತ್ತು ಈ ಹಿನ್ನೆಲೆ ಜಿಲ್ಲಾಡಳಿತವು ಸಿಆರ್ ಪಿಸಿ 107/116 (3) ಸೆಕ್ಷನ್‍ಗಳ ಅಡಿ “ತೊಂದರೆ ಕೊಡುವವರು” ಎಂದು ಪರಿಗಣಿಸಿ ಹಲವರಿಗೆ ನೋಟಿಸ್ ನೀಡಿ ಜಾಮೀನು ಪಡೆಯಲು ಜಿಲ್ಲಾಡಳಿತ ಸೂಚಿಸಿತ್ತು. ಬೀಟ್ ಕಾನ್‍ಸ್ಟೇಬಲ್, ಸಬ್ ಇನ್ ಸ್ಪೆಕ್ಟರ್ ಏರಿಯಾ ಇನ್ ಚಾರ್ಜ್ ಗಳು ಸೇರಿ ಗುಪ್ತಚರ ಇಲಾಖೆ ನೀಡಿದ ಆಧಾರದ ಮೇಲೆ ನೋಟಿಸ್ ನೀಡಲಾಗಿತ್ತು

Share This Article
Leave a Comment

Leave a Reply

Your email address will not be published. Required fields are marked *