ಲಕ್ನೋ: ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ (Agra-Lucknow Expressway) ನಡೆದ ರಸ್ತೆ ಅಪಘಾತದಲ್ಲಿ ಉತ್ತರ ಪ್ರದೇಶದ ಮಹಿಳಾ ಕಲ್ಯಾಣ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಬೇಬಿ ರಾಣಿ ಮೌರ್ಯ (Baby Rani Maurya) ಅವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಶುಕ್ರವಾರ ರಾತ್ರಿ ಲಕ್ನೋಗೆ (Lucknow) ತೆರಳುತ್ತಿದ್ದಾಗ ಸಚಿವೆಯ ಕಾರಿನ ಮುಂದೆ ಸಾಗುತ್ತಿದ್ದ ಟ್ರಕ್‌ನ ಒಂದು ಟೈರ್ ಇದ್ದಕ್ಕಿದ್ದಂತೆ ಸಿಡಿದಿದೆ. ಬಳಿಕ ನಿಯಂತ್ರಣ ತಪ್ಪಿ ಸಚಿವರ ಕಾರಿಗೆ ಡಿಕ್ಕಿ ಹೊಡೆದಿದೆ. ಚಾಲಕ ಚಾಣಾಕ್ಷ್ಯತನದಿಂದ ಕಾರನ್ನು ಬದಿಗೆ ತಂದಿದ್ದು ಭಾರೀ ಅಪಘಾತ ತಪ್ಪಿದಂತಾಗಿದೆ. ಅಪಘಾತಲ್ಲಿ ಕಾರಿಗೆ ಭಾರೀ ಹಾನಿಯಾಗಿದ್ದು, ಸಚಿವೆ ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ.
ಹತ್ರಾಸ್ ಜಿಲ್ಲೆಯ ಹಲವೆಡೆ ಆಯೋಜಿಸಿದ್ದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅವರು ಲಕ್ನೋಗೆ ವಾಪಸ್ ಆಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಘಟನೆಯ ನಂತರ ಪೊಲೀಸರು ಟ್ರಕ್‌ನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಬೇಬಿ ರಾಣಿ ಮೌರ್ಯ ಅವರನ್ನು ಮತ್ತೊಂದು ವಾಹನದಲ್ಲಿ ಲಕ್ನೋಗೆ ಕಳುಹಿಸಿದ್ದಾರೆ.
ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತಗಳನ್ನು ತಡೆಗಟ್ಟಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇನ್ನೂ ಅಪಘಾತದಿಂದಾಗಿ ಅಧಿಕಾರಿಗಳು ಎಕ್ಸ್‌ಪ್ರೆಸ್‌ವೇ ಸುರಕ್ಷತಾ ಪ್ರೋಟೋಕಾಲ್ ಪರಿಶೀಲಿಸುವ ಸಾಧ್ಯತೆ ಇದೆ.
