ಲಕ್ನೋ: ವ್ಯಕ್ತಿಯೊಬ್ಬ ಹೆತ್ತ ತಂದೆ-ತಾಯಿಯನ್ನೇ ಹೊಡೆದು ಕೊಂದು, ಗರಗಸದಿಂದ ದೇಹಗಳನ್ನು ಕತ್ತರಿಸಿ ನದಿಗೆ ಎಸೆದು ರಾಕ್ಷಸಿ ಕೃತ್ಯ ಎಸಗಿರುವ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ.
ಜೌನ್‌ಪುರದ ನಿವಾಸಿ, ಎಂಜಿನಿಯರ್ ಅಂಬೇಶ್ ಕೊಲೆ ಆರೋಪಿ. ತನ್ನ ತಂದೆ-ತಾಯಿ ಶ್ಯಾಮ್ ಬಹದ್ದೂರ್ (62), ಬಬಿತಾ (60) ಅವರನ್ನು ಕೊಲೆ ಮಾಡಿ, ಅವರ ದೇಹಗಳನ್ನು ಗರಗಸದಿಂದ ಕತ್ತರಿಸಿ ನದಿಗೆ ಎಸೆದಿದ್ದ. ಡಬಲ್ ಮರ್ಡರ್ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತಂದೆಯ ಹಠಮಾರಿತನ ಹಾಗೂ ಮಗನ ಕೋಪವೇ ಈ ಕೃತ್ಯಕ್ಕೆ ಕಾರಣ ಎನ್ನಲಾಗಿದೆ. ಇದನ್ನೂ ಓದಿ: ಪತ್ನಿಯನ್ನೇ ಕಿಡ್ನ್ಯಾಪ್ ಮಾಡಿದ್ದ ಸಿನಿಮಾ ನಿರ್ಮಾಪಕ; ಕಳ್ಳತನ ಕೇಸಲ್ಲಿ ಅರೆಸ್ಟ್
ಅಂಬೇಶ್ ಮುಸ್ಲಿಂ ಸಮುದಾಯದ ಹೆಣ್ಣನ್ನು ವಿವಾಹವಾಗಿದ್ದ. ಇದೇ ವಿಚಾರವಾಗಿ ಈತನಿಗೆ ಅಪ್ಪ-ಅಮ್ಮನ ಜೊತೆ ಜಗಳವಾಗಿತ್ತು. ಮುಸ್ಲಿಂ ಹೆಣ್ಣನ್ನು ಮನೆಗೆ ಸೇರಿಸಿಕೊಳ್ಳಲು ಪೋಷಕರು ನಿರಾಕರಿಸಿದ್ದರು. ಅಂಬೇಶ್ ಮತ್ತು ಆತನ ಪತ್ನಿ ಅಂತಿಮವಾಗಿ ಬೇರೆಯಾಗಲು ನಿರ್ಧರಿಸಿದರು. ಜೀವನಾಂಶ ಪಾವತಿಸಲು ಆತನಿಗೆ ಹಣದ ಅಗತ್ಯವಿತ್ತು. ತನ್ನ ತಂದೆ ಬಳಿ ಹಣ ಕೇಳಿದ್ದ. ಆದರೆ, ಹಣ ಕೊಡಲು ನಿರಾಕರಿಸಿದ್ದರು. ಇದರಿಂದ ಕೋಪಗೊಂಡು ಪೋಷಕರನ್ನೇ ಹತ್ಯೆ ಮಾಡಿದ್ದಾನೆ. ಇದನ್ನೂ ಓದಿ:
ಡಿ.13 ರಂದು ಅಂಬೇಶ್ ಸಹೋದರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತಂದೆ-ತಾಯಿ ಮತ್ತು ಸಹೋದರ ಕಾಣೆಯಾಗಿದ್ದಾರೆಂದು ದೂರಿದ್ದರು. ಅಪ್ಪ-ಅಮ್ಮ ನನ್ನೊಟ್ಟಿಗೆ ಜಗಳವಾಡಿಕೊಂಡು ಮನೆಬಿಟ್ಟು ಹೋಗಿದ್ದಾರೆ. ಅವರನ್ನು ಹುಡುಕುತ್ತಿದ್ದೇನೆ ಎಂದು ಅಂಬೇಶ್ ನನಗೆ ಕರೆ ಮಾಡಿ ತಿಳಿಸಿದ್ದ. ಮತ್ತೆ ಫೋನ್ ಮಾಡಿದಾಗ ಸ್ವಿಚ್ಡ್ ಆಫ್ ಬಂತು ಎಂದು ಸಹೋದರಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅನುಮಾನಗೊಂಡು ಪೊಲೀಸರು ಅಂಬೇಶ್‌ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ, ಕೊಲೆ ವಿಚಾರ ಬಹಿರಂಗವಾಗಿದೆ.
ನಿವೃತ್ತ ರೈಲ್ವೆ ಉದ್ಯೋಗಿ ಶ್ಯಾಮ್ ಬಹದ್ದೂರ್ ಮತ್ತು ಅವರ ಪತ್ನಿ ಬಬಿತಾಗೆ ಮೂವರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ ಇದ್ದರು. ಮಗ ಅಂಬೇಶ್ ಐದು ವರ್ಷಗಳ ಹಿಂದೆ ಮುಸ್ಲಿಂ ಮಹಿಳೆಯನ್ನು ವಿವಾಹವಾಗಿದ್ದ. ಆದರೆ, ಪೋಷಕರು ಈ ವಿವಾಹವನ್ನು ಒಪ್ಪಲಿಲ್ಲ. ತಮ್ಮ ಮುಸ್ಲಿಂ ಸೊಸೆಯನ್ನು ತಮ್ಮ ಮನೆಗೆ ಬಿಡುವುದಿಲ್ಲ ಎಂದು ಹೇಳಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದರು. ಕೊನೆಗೆ ಅಂಬೇಶ್ ತನ್ನ ಪತ್ನಿಯಿಂದ ದೂರಾಗಲು ನಿರ್ಧರಿಸಿದರು. 5 ಲಕ್ಷ ರೂ. ಜೀವನಾಂಶವನ್ನು ಆತನ ಪತ್ನಿ ಕೇಳಿದ್ದಳು. ಹಣದ ವಿಚಾರಕ್ಕೆ ತಂದೆ-ತಾಯಿ ಜೊತೆ ಜಗಳ ಮಾಡಿಕೊಂಡು ಅಂಬೇಶ್ ಹತ್ಯೆ ಮಾಡಿದ್ದಾನೆ. ಇದನ್ನೂ ಓದಿ: ಇನ್ಸ್‌ಪೆಕ್ಟರ್‌ಗೆ ಲೆಟರ್ ಬರೆದು ಕಿರುಕುಳ ಕೇಸ್ – ʻಚಿನ್ನಿʼ ವಿರುದ್ಧ ಹನಿಟ್ರ್ಯಾಪ್ ಸೇರಿ ಸಾಲು ಸಾಲು ಪ್ರಕರಣ

