ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಹೆಸರಲ್ಲಿ ಸಲ್ಮಾನ್‌ ಖಾನ್‌ ಮನೆಯಿಂದ ಕ್ಯಾಬ್‌ ಬುಕ್‌ ಮಾಡಿದ್ದ ವ್ಯಕ್ತಿ ಬಂಧನ

Public TV
2 Min Read

ಮುಂಬೈ: ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ (Lawrence Bishnoi) ಹೆಸರಿನಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಮನೆಯಿಂದ ಕ್ಯಾಬ್ ಬುಕ್ ಮಾಡಿದ್ದಕ್ಕಾಗಿ ಯುವಕನನ್ನು ಬಂಧಿಸಲಾಗಿದೆ.

ಆರೋಪಿ ಉತ್ತರ ಪ್ರದೇಶದ (Uttar Pradesh) ಗಾಜಿಯಾಬಾದ್‌ನ 20 ವಯಸ್ಸಿನ ರೋಹಿತ್ ತ್ಯಾಗಿ. ಆರೋಪಿಯು, ನಟ ಸಲ್ಮಾನ್ ಖಾನ್ ಮನೆ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಿಂದ ಬಾಂದ್ರಾ ಪೊಲೀಸ್ ಠಾಣೆಗೆ ಲಾರೆನ್ಸ್ ಬಿಷ್ಣೋಯ್ ಹೆಸರಿನಲ್ಲಿ ಕ್ಯಾಬ್ ಬುಕ್ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ಸಲ್ಮಾನ್ ಮನೆ ಮುಂದೆ ಗುಂಡಿನ ದಾಳಿ: ಸ್ಪೋಟಕ ವಿಚಾರ ಬಾಯ್ಬಿಟ್ಟ ಆರೋಪಿ

ಕ್ಯಾಬ್ ಡ್ರೈವರ್ ಸಲ್ಮಾನ್ ಖಾನ್ ಅವರ ಮನೆಯಲ್ಲಿರುವ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ಗೆ ಬಂದು ಬುಕ್ಕಿಂಗ್ ಬಗ್ಗೆ ಅಲ್ಲಿನ ವಾಚ್‌ಮನ್‌ ಬಳಿ ಕೇಳಿದ್ದಾರೆ. ಮೊದಲು ದಿಗ್ಭ್ರಮೆಗೊಂಡ ವಾಚ್‌ಮನ್, ತಕ್ಷಣ ಬುಕಿಂಗ್ ಬಗ್ಗೆ ಹತ್ತಿರದ ಬಾಂದ್ರಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.

ಅದರಂತೆ ಮುಂಬೈನ ಬಾಂದ್ರಾ ಪೊಲೀಸರು, ಕ್ಯಾಬ್ ಚಾಲಕನನ್ನು ವಿಚಾರಣೆಗೆ ಒಳಪಡಿಸಿದರು. ಆನ್‌ಲೈನ್‌ನಲ್ಲಿ ಕ್ಯಾಬ್ ಬುಕ್ ಮಾಡಿದ ವ್ಯಕ್ತಿಯ ಮಾಹಿತಿಯನ್ನು ಟ್ರ್ಯಾಕ್ ಮಾಡಿದ್ದಾರೆ. ಕ್ಯಾಬ್ ಬುಕ್ ಮಾಡಿದ ವ್ಯಕ್ತಿ ಘಾಜಿಯಾಬಾದ್‌ನ 20 ವರ್ಷದ ವಿದ್ಯಾರ್ಥಿಯಾಗಿದ್ದು, ರೋಹಿತ್ ತ್ಯಾಗಿ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಇಂಥ ಕೃತ್ಯ ಮಾಡುವವರನ್ನು ಗಲ್ಲಿಗೇರಿಸುವ ಬದಲು ಜನಸಾಮಾನ್ಯರ ಕೈಗೆ ಒಪ್ಪಿಸಿ: ನೇಹಾ ಕೊಲೆ ಬಗ್ಗೆ ನಟಿ ರಚಿತಾ ರಾಮ್‌ ಪ್ರತಿಕ್ರಿಯೆ

ಆರೋಪಿಗಳು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಹೆಸರಿನಲ್ಲಿ ಕ್ಯಾಬ್ ಬುಕ್ ಮಾಡಿರುವುದು ಚೇಷ್ಟೆಗಾಗಿ ಎಂದು ತನಿಖೆಯ ವೇಳೆ ತಿಳಿದುಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಬಂಧಿಸಿದರು. ನಂತರ ಅವರನ್ನು ಮುಂಬೈಗೆ ಕರೆತಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಎರಡು ದಿನಗಳ ಕಾಲ ಬಾಂದ್ರಾ ಪೊಲೀಸರ ಕಸ್ಟಡಿಗೆ ಒಪ್ಪಿಸಲಾಗಿದೆ.

ಈಚೆಗೆ ನಟ ಸಲ್ಮಾನ್‌ ಖಾನ್‌ ಮನೆಯ ಬಳಿ ಅಪರಿಚಿತರು ಹಲವು ಸುತ್ತಿನ ಗುಂಡು ಹಾರಿಸಿ ಪರಾರಿಯಾಗಿದ್ದರು. ಈ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಯಿತು. ತಕ್ಷಣ ತನಿಖೆ ಕೈಗೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಮುಂಬೈ ಅಪರಾಧ ವಿಭಾಗಕ್ಕೆ ಹಸ್ತಾಂತರಿಸಿದ್ದರು.

Share This Article