ರೋಗಿಗೆ ತಿಳಿಸದೇ ಕಿಡ್ನಿಯನ್ನೇ ತೆಗೆದ ವೈದ್ಯ!

Public TV
1 Min Read

ಲಕ್ನೋ: ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ರೋಗಿಯ ಕಿಡ್ನಿಯನ್ನು ಉತ್ತರ ಪ್ರದೇಶದ ಮುಜಾಫರ್ ನಗರದ ವೈದ್ಯ ಮಹಾಶಯನೊಬ್ಬ ತೆಗೆದಿದ್ದಾನೆ.

60 ವರ್ಷದ ಇಕ್ಬಾಲ್ ಮೂತ್ರಪಿಂಡದಲ್ಲಿ ಕಲ್ಲಿನ ಸಮಸ್ಯೆಯಿಂದ ಅಲ್ಲಿನ ಡಾ. ವಿಭು ಗಾರ್ಗ್ ರವರ ಆಸ್ಪತ್ರೆಗೆ ದಾಖಲಾಗಿದ್ದರು. ಆಗ ವೈದ್ಯರು ಮೂತ್ರ ಪಿಂಡಕ್ಕೆ ಶಸ್ತ್ರ ಚಿಕಿತ್ಸೆ ಮಾಡಬೇಕೆಂದು ಹೇಳಿದ್ದರು. ಆದರೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡವ ನೆಪದಲ್ಲಿ ಈಗ ಮೂತ್ರಪಿಂಡವನ್ನೇ ತೆಗೆದುಹಾಕಿದ್ದಾರೆ ಎಂದು ರೋಗಿಯ ಕುಟುಂಬಸ್ಥರು ಆರೋಪಿಸಿದ್ದಾರೆ.

ರೋಗಿ ಇಕ್ಬಾಲ್ ರ ಮಗ ಇಮ್ರಾನ್ ಮೂತ್ರಪಿಂಡ ತೆಗೆದುಹಾಕುವ ಕುರಿತು ಶಸ್ತ್ರಚಿಕಿತ್ಸೆಯ ಮೊದಲು ವೈದ್ಯರು ಯಾವುದೇ ಮಾಹಿತಿಯನ್ನು ನೀಡಿರಲಿಲ್ಲ ಎಂದು ತಿಳಿಸಿದ್ದಾರೆ.

ಶಸ್ತ್ರಚಿಕಿತ್ಸೆ ನಂತರ ಆಸ್ಪತ್ರೆಯಲ್ಲೇ ರೋಗಿಯ ಚರ್ಮ ಮುದುಡಲಾರಂಭಿಸಿತು. ಆಗ ಇಕ್ಬಾಲ್ ರ ಪತ್ನಿ ಉಮೇದ್ ಜಹಾನ್ ಈ ಕುರಿತಂತೆ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರೊಂದನ್ನು ದಾಖಲಿಸಿದರು. ಅದರಂತೆ ಭಾರತೀಯ ದಂಡ ಸಂಹಿತೆ 338ರ ಪ್ರಕಾರ ಡಾ. ಗಾರ್ಗ್ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆಸಿದ ವೈದ್ಯ ಗಾರ್ಗ್ ಈ ಮೊದಲೇ ರೋಗಿಯ ಕುಟುಂಬದವರೊಂದಿಗೆ ಕಿಡ್ನಿ ತೆಗೆಯುವ ಕುರಿತು ಮಾಹಿತಿ ನೀಡಿದ್ದೆ ಎಂದು ತಿಳಿಸಿದ್ದಾರೆ.

ಶಸ್ತ್ರಚಿಕಿತ್ಸೆ ಒಂದು ಗಂಟೆಯಲ್ಲಿ ಮುಗಿಯುತ್ತದೆ ಎಂದು ಹೇಳಿದ್ದರು. ಆದರೆ ಮೂರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಈ ಸಂದರ್ಭದಲ್ಲಿ ಎರಡು ಯೂನಿಟ್ ರಕ್ತವನ್ನೂ ಕೂಡ ನೀಡಲಾಗಿದೆ. ಕಿಡ್ನಿ ತೆಗೆದು ಐಸ್ ಬಾಕ್ಸ್ ನಲ್ಲಿ ಇಡಲಾಗಿದೆ. ಈ ಕುರಿತಾಗಿ ಕೇಳಿದರೆ ವೈದ್ಯರು ಸಮರ್ಪಕ ಉತ್ತರ ನೀಡುತ್ತಿಲ್ಲ ಎಂದು ರೋಗಿಯ ಕುಟುಂಬಸ್ಥರು ಆರೋಪಿಸಿದ್ದಾರೆ.

ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಇಕ್ಬಾಲ್ ಸಂಬಂಧಿಗಳು ಆಸ್ಪತ್ರೆಗೆ ಬಂದು ದಾಂಧಲೆ ಮಾಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ನ್ಯೂ ಮಾಂದಿ ಸರ್ಕಲ್ ಇನ್ಸ್ ಪೆಕ್ಟರ್ ಯೋಗೇಂದ್ರ ಸಿಂಗ್ ಹಾಗೂ ಸಿಬ್ಬಂದಿ ರೋಗಿಯ ಸಂಬಂಧಿಯನ್ನು ಶಾಂತಗೊಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *