ಕೋರ್ಟ್ ಆವರಣದಲ್ಲೇ ಯುಪಿ ವಕೀಲ ಸಂಘದ ಮೊದಲ ಮಹಿಳಾ ಅಧ್ಯಕ್ಷೆಯ ಬರ್ಬರ ಹತ್ಯೆ

Public TV
1 Min Read

ಆಗ್ರಾ: ಉತ್ತರ ಪ್ರದೇಶದ ವಕೀಲರ ಸಂಘದ ಮೊದಲ ಮಹಿಳಾ ಅಧ್ಯಕ್ಷೆಯಾಗಿ 2 ದಿನಗಳ ಹಿಂದೆ ಆಯ್ಕೆಯಾಗಿದ್ದ ಧರ್ವೇಶ್ ಯಾದವ್ ಅವರನ್ನು ಕೋರ್ಟ್ ಆವರಣದಲ್ಲೇ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಸಹೋದ್ಯೋಗಿ ವಕೀಲನೇ ಧರ್ವೆಶ್ ಅವರನ್ನು ಗುಂಡು ಹಾರಿಸಿ ಕೊಲೆ ಮಾಡಿ ಬಳಿಕ ಆದೇ ಪಿಸ್ತೂಲಿನಿಂದ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೊಲೆ ಮಾಡಿದ ವಕೀಲನನ್ನು ಮನೀಶ್ ಶರ್ಮಾ ಎಂದು ಗುರುತಿಸಲಾಗಿದ್ದು ಕೊಲೆ ಮಾಡಿರುವುದಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಮನೀಶ್ ಶರ್ಮಾನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದು ಸ್ಥಿತಿ ಗಂಭೀರವಾಗಿದೆ.

2 ದಿನಗಳ ಹಿಂದೆ ನಡೆದ ಚುನಾವಣೆಯಲ್ಲಿ ಧರ್ವೇಶ್ ಯಾದವ್ ಅವರು ಅಧ್ಯಕ್ಷೆಯಾಗಿ ಆಯ್ಕೆ ಆಗುವ ಮೂಲಕ ಉತ್ತರ ಪ್ರದೇಶದಲ್ಲಿ ಇತಿಹಾಸ ಸೃಷ್ಟಿಸಿದ್ದರು. ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದ ಧರ್ವೇಶ್ ಯಾದವ್ ಅವರಿಗೆ ಇಂದು ಆಗ್ರಾ ನ್ಯಾಯಾಲಯದ ಅವರಣದಲ್ಲಿ ಸನ್ಮಾನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಸುಮಾರು ಮಧ್ಯಾಹ್ನ 2.30ಕ್ಕೆ ಈ ಕಾರ್ಯಕ್ರಮಕ್ಕೆ ಧರ್ವೇಶ್ ಯಾದವ್ ಅವರು ಬಂದಿದ್ದಾರೆ. ಈ ಸಂದರ್ಭದಲ್ಲಿ ಕಾರ್ಯಕ್ರಮದ ಮಧ್ಯದಲ್ಲಿ ಎದ್ದುನಿಂತ ಮನೀಶ್ ಶರ್ಮಾ 3 ಸುತ್ತಿನ ಗುಂಡಿನ ದಾಳಿ ಮಾಡಿದ್ದಾನೆ. ನಂತರ ಅವನು ಕೂಡ ಗುಂಡು ಹಾರಿಸಿಕೊಂಡಿದ್ದಾನೆ.

ಕೂಡಲೇ ಧರ್ವೆಶ್ ಅವರನ್ನು ಹತ್ತಿರದ ಪುಷ್ಪಾಂಜಲಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ತೀವ್ರ ಗಾಯಗೊಂಡಿದ್ದ ಧರ್ವೇಶ್ ಯಾದವ್ ಅವರು ಸಾವನ್ನಪ್ಪಿದ್ದಾರೆ.

ಮನೀಶ್ ಶರ್ಮಾ ಅನುಮತಿ ಪಡೆದ ರಿವಾಲ್ವರ್ ಬಳಕೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಬಾರ್ ಕೌನ್ಸಿಲ್ ಕೃತ್ಯವನ್ನು ಖಂಡಿಸಿದ್ದು 50 ಲಕ್ಷ ರೂ. ಹಣವನ್ನು ಉತ್ತರ ಪ್ರದೇಶ ಸರ್ಕಾರ ಧರ್ವೇಶ್ ಯಾದವ್ ಅವರ ಕುಟುಂಬಕ್ಕೆ ನೀಡಬೇಕೆಂದು ಆಗ್ರಹಿಸಿದೆ.

Share This Article
Leave a Comment

Leave a Reply

Your email address will not be published. Required fields are marked *