ಕನಸಿನ ಬೆನ್ನೇರಿ ಬಂದಿದ್ದ ವಿದ್ಯಾರ್ಥಿನಿಗೆ ಸಿಕ್ಕಿದ್ದು ಬರೋಬ್ಬರಿ 17 ಚಿನ್ನದ ಪದಕ

Public TV
2 Min Read

-ಬಾಗಲಕೋಟೆ ತೋಟಗಾರಿಕಾ ವಿವಿ ಘಟಿಕೋತ್ಸವ

ಬಾಗಲಕೋಟೆ: ಅವಿರತ ಶ್ರಮಪಟ್ಟು, ಶ್ರದ್ಧೆಯಿಟ್ಟು ಅಭ್ಯಾಸ ಮಾಡಿದ್ರೆ ಎಂತಹ ಕನಸೂ ನನಸಾಗುತ್ತದೆ. ಕಂಡ ಕನಸು ಕಾಣುವುದು ಅದನ್ನ ಸಾಕಾರಗೊಳಿಸುವುದು ಅವರವರ ಕೈಯಲ್ಲಿಯೇ ಇದೆ. ಇಂತಹ ಅದ್ಭುತ ಕನಸನ್ನ ಸಾಕಾರಗೊಳಿಸಿರುವ ವಿದ್ಯಾರ್ಥಿನಿ ಇಂದು ಚಿನ್ನದ ಹುಡುಗಿಯಾಗಿದ್ದಾಳೆ. ತೋಟಗಾರಿಕಾ ವಿಶ್ವವಿದ್ಯಾಲಯದಲ್ಲಿ ಅತಿ ಹೆಚ್ಚು ಚಿನ್ನದ ಪದಕಗಳನ್ನ ಬಾಚಿಕೊಂಡು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕಬ್ಬೆ ಗ್ರಾಮದ ಸೀಮಾ ಹೆಗ್ಗಡೆ ಸಾಧನೆಯ ನಗು ಬೀರಿದ್ದಾರೆ.

ಬುಧವಾರ ಬಾಗಲಕೋಟೆ ತೋಟಗಾರಿಕಾ ವಿವಿಯಲ್ಲಿ ಎಂಟನೇ ಘಟಿಕೋತ್ಸವ ಕಾರ್ಯಕ್ರಮ ನಡೆಯಿತು. ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪದಕ ಪಡೆದು ಸಂಭ್ರಮಿಸಿದರು. ಬಾಗಲಕೋಟೆಯ ತೋಟಗಾರಿಕಾ ವಿವಿಯಲ್ಲಿಯೇ ಪದವಿ ಮುಗಿಸಿರುವ ಸೀಮಾ ಹೆಗ್ಗಡೆ 17 ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. 2018ರಲ್ಲಿ ಪದವಿ ಮುಗಿಸಿರುವ ಸೀಮಾ ಹೆಗ್ಗಡೆ ಸದ್ಯ ಬೆಂಗಳೂರು ಸಸ್ಯ ಜೈವಿಕ ತಂತ್ರಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿದ್ದಾರೆ.

ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಗೀತಾ ಹೆಗ್ಗಡೆ ಚಿಕ್ಕಂದಿನಿಂದಲೇ ತಾನೊಬ್ಬಳು ಅತ್ಯುತ್ತಮ ಕೃಷಿಕಳಾಗಬೇಕೆಂಬ ಮಹಾದಾಸೆಯನ್ನ ಹೊಂದಿದ್ದಳು. ಈಕೆ ಮೂಲತಃ ಕೃಷಿ ಕುಟುಂಬದವಳಾಗಿದ್ದು, ತಾತ ಮುತ್ತಜ್ಜರ ಕಾಲದಿಂದಲೂ ಹೊಲದಲ್ಲಿ ತೆಂಗು, ಅಡಿಕೆ ಕೃಷಿ ಮಾಡುತ್ತಾ ಬಂದಿದ್ದಾರೆ. ಇದೇ ಕಾರಣಕ್ಕೆ ಸೀಮಾ ಹೆಗ್ಗಡೆ ತೋಟಗಾರಿಕಾ ವಿಜ್ಞಾನಗಳ ಅಧ್ಯಯನವನ್ನು ಆಯ್ಕೆ ಮಾಡಿಕೊಂಡಿದ್ದು ಎಂಬುದು ವಿಶೇಷ. ವಿಶ್ವವಿದ್ಯಾಲಯದಲ್ಲಿ ಏನಾದ್ರೂ ಸಾಧನೆ ಮಾಡಬೇಕೆಂದು ಕನಸು ಕಂಡ ಸೀಮಾ ಪಿಯುಸಿ ಮುಗಿದ ತಕ್ಷಣ ರಾಜ್ಯದ ಏಕೈಕ ತೋಟಗಾರಿಕಾ ವಿಶ್ವವಿದ್ಯಾಲಯ ಬಾಗಲಕೋಟೆಯಲ್ಲಿ ಸೀಟು ಗಿಟ್ಟಿಸಿಕೊಂಡಿದ್ದರು.

ಸತತ ಪರಿಶ್ರಮ ಪ್ರತಿ ಫಲವಾಗಿಯೇ ಇಂದು ಪದವಿಯಲ್ಲಿ ಶೇ.92.30 ಅಂಕ ಪಡೆದು ಎಲ್ಲಾ ವಿಷಯಗಳಲ್ಲೂ ಅತ್ಯಧಿಕ ಅಂಕಗಳನ್ನ ಗಳಿಸಿ ಬಾಗಲಕೋಟೆ ವಿಶ್ವವಿದ್ಯಾಲಯದ ಚಿನ್ನದ ವಿದ್ಯಾರ್ಥಿನಿ ಎಂದೇ ಬಿರುದು ಪಡೆದಿದ್ದಾರೆ. ಒಂದಲ್ಲ ಎರಡಲ್ಲ ಒಟ್ಟು 17 ಚಿನ್ನದ ಪದಕಗಳನ್ನ ಪಡೆಯುವ ಮೂಲಕ ದೊಡ್ಡ ಸಾಧನೆಯನ್ನ ಮಾಡಿದ್ದಾರೆ. ಈ ಸಂಭ್ರಮದಲ್ಲಿ ಅವರ ತಂದೆ ತಾಯಿ ಕೂಡಾ ಭಾಗಿಯಾಗಿದ್ರು. ನಮ್ಮ ಮಗಳು ಮೊದಲಿನಿಂದಲೂ ಕೃಷಿ ಮೇಲೆ ಆಸಕ್ತಿ ಹೊಂದಿದ್ದಾಳೆ. ಕೃಷಿಯಲ್ಲೇ ಸಂಶೋಧನೆ ಸಾಧನೆ ಮಾಡಬೇಕೆಂಬ ಗುರಿ ಹೊಂದಿದ್ದಾಳೆ. ಆಕೆ ಪುನಃ ಊರಿಗೆ ಬಂದು ಕೃಷಿ ಮಾಡಲು ಬಯಸಿದ್ದಾಳೆ ಆಕೆಗೆ ನಮ್ಮೆಲ್ಲರ ಸಂಪೂರ್ಣ ಸಹಕಾರವಿದೆ ಎಂದು ಪೋಷಕರು ಬೆನ್ನು ತಟ್ಟಿದ್ದಾರೆ.

ಸಾಮಾನ್ಯವಾಗಿ ಇಂತಹ ಸಾಧನೆ ಮಾಡಿದವರು ಉತ್ತಮ ಸರ್ಕಾರಿ ನೌಕರಿ ಬಯಸುತ್ತಾರೆ. ಆದರೆ ಇಷ್ಟೆಲ್ಲಾ ಸಾಧನೆ ಮಾಡಿದ ಈ ಚಿನ್ನದ ಹುಡುಗಿ ಮುಂದೆ ತಮ್ಮೂರಿಗೆ ಹೋಗಿ ಕೃಷಿ ಮಾಡುವ ಕನಸನ್ನು ಕಟ್ಟಿಕೊಂಡಿದ್ದಾರೆ ಜೊತೆಗೆ ಸಂಶೋಧನೆಯಲ್ಲಿ ತೊಡಗಬೇಕೆಂಬ ಗುರಿ ಹೊಂದಿದ್ದಾರೆ. ಕಲಿಯುವ, ಸಾಧಿಸುವ ಛಲವಿದ್ದವರಿಗೆ ಯಾವುದು ಕಷ್ಟವಲ್ಲ ಅನ್ನೋದಕ್ಕೆ ಚಿನ್ನದ ಹುಡುಗಿ ಸೀಮಾ ಸಾಧನೆ ಮಾದರಿಯಾಗಿದೆ. ಛಲವೊಂದಿದ್ದರೆ ಗುರಿ ಮುಟ್ಟೋಕೆ ಅಡ್ಡಿಯಾಗಲ್ಲ ಅನ್ನೋದಕ್ಕೆ ಸೀಮಾ ತಾಜಾ ನಿದರ್ಶನವಾಗಿದ್ದಾರೆ ಈ ಚಿನ್ನದ ಹುಡುಗಿ ಮತ್ತಷ್ಟು ಸಾಧನೆ ಮಾಡುವಂತಾಗಲಿ ಅನ್ನೋದು ತೋಟಗಾರಿಕಾ ವಿವಿಯ ಎಲ್ಲ ಸಿಬ್ಬಂದಿ ಆಶಯವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *