ಅಭಿಮಾನಿಗಳಿಗೆ ಬಿಗ್‌ ಶಾಕ್‌ – ಆರ್‌ಸಿಬಿ ಸೇಲ್‌..?

Public TV
2 Min Read

ಮುಂಬೈ: ಬೆಂಗಳೂರಿನಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣ (Chinnaswamy Stampede Case) ಕೋಲಾಹಲ ಎಬ್ಬಿಸಿರುವ ಹೊತ್ತಿನಲ್ಲೇ ಆರ್‌ಸಿಬಿ ಫ್ರಾಂಚೈಸಿಯಲ್ಲಿ ಬಹುದೊಡ್ಡ ಬೆಳವಣಿಗೆ ನಡೆದಿದೆ. ಇಂಡಿಯನ್‌ ಪ್ರೀಮಿಯರ್‌ಲೀಗ್‌ನಲ್ಲಿ ಕೋಟ್ಯಂತರ ಅಭಿಮಾನಿಗಳ ನೆಚ್ಚಿನ ತಂಡವಾದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ಫ್ರಾಂಚೈಸಿಯನ್ನ ಮಾರಾಟ ಮಾಡಲು ಮಾಲೀಕತ್ವದ ಸಂಸ್ಥೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಹೌದು. ಆರ್‌ಸಿಬಿ ಫ್ರಾಂಚೈಸಿಯಲ್ಲಿ ಹೂಡಿಕೆಮಾಡಿರುವ ತನ್ನ ಪಾಲನ್ನು ಮಾರಾಟ ಮಾಡಲು ಪೋಷಕ ಕಂಪನಿಯಾದ ಡಿಯಾಜಿಯೊ (Diageo) ಮುಂದಾಗಿದೆ. ಹೀಗಾಗಿ ಆರ್‌ಸಿಬಿ ಶೀಘ್ರದಲ್ಲೇ ಹೊಸ ಮಾಲೀಕರನ್ನು ಪಡೆಯುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.

18 ವರ್ಷಗಳ ಬಳಿಕ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಟ್ರೋಫಿ ಗೆದ್ದ ಒಂದು ವಾರದಲ್ಲೇ ಈ ಬೆಳವಣಿಗೆ ನಡೆದಿದೆ. ಡಿಯಾಜಿಯೊ ಪ್ರೈವೆಟ್‌ ಲಿಮಿಟೆಡ್‌ ಕಂಪನಿ ಆರ್‌ಸಿಬಿಯಲ್ಲಿ ಹೂಡಿಕೆ ಮಾಡಿರುವ ತನ್ನ ಪಾಲನ್ನು ಮಾರಾಟ ಮಾಡಲು ಮಾತುಕತೆ ನಡೆಸುತ್ತಿರುವುದಾಗಿ ಬ್ಲೂಮ್‌ಬರ್ಗ್ ವರದಿ ಮಾಡಿದೆ. ಈ ಬೆನ್ನಲ್ಲೇ ಯುನೈಟೆಡ್‌ ಸ್ಪಿರಿಟ್ಸ್‌ನ (United Spirits) ಷೇರುಗಳಲ್ಲೂ ಭಾರೀ ಏರಿಕೆ ಕಂಡಿದೆ. ಬ್ರೂವರೀಸ್ ಮತ್ತು ಡಿಸ್ಟಿಲರೀಸ್ ಸಂಸ್ಥೆಯ ಷೇರುಗಳು ದಿನದಲ್ಲಿ ಶೇ.3.28 ರಷ್ಟು ಏರಿಕೆಯಾಗಿ ಪ್ರತಿ ಷೇರು 1,645 ರೂ.ಗಳಿಗೆ ತಲುಪಿದೆ. ಇದು ಕಳೆದ 5 ತಿಂಗಳಲ್ಲೇ ಗರಿಷ್ಠ ಮಟ್ಟವಾಗಿದೆ.

ವರದಿಗಳ ಪ್ರಕಾರ, ಡಿಯಾಜಿಯೊ ಕಂಪನಿಯು ಪ್ರಮುಖ ಸಲಹೆಗಾರರೊಂದಿಗೆ ಈಗಾಗಲೇ ಆರಂಭಿಕ ಸುತ್ತಿನ ಮಾತುಕತೆ ನಡೆಸಿದ್ದು, ಎರಡು ರೀತಿಯ ಬೆಳವಣಿಗೆಗಳು ಕಂಡುಬಂದಿವೆ. ಡಿಯಾಜಿಯೊ ಆರ್‌ಸಿಬಿ ಫ್ರಾಂಚೈಸಿಯಲ್ಲಿ ಹೂಡಿಕೆ ಮಾಡಿರುವ ತನ್ನ ಪಾಲನ್ನು ಅಥವಾ ಇಡೀ ಫ್ರಾಂಚೈಸಿ ಶೇರನ್ನೇ ಮಾರಾಟ ಮಾಡಲು ಮಾತುಕತೆ ನಡೆಸುತ್ತಿದೆ. ಆದ್ರೆ ಕಂಪನಿಯು ಇನ್ನೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಫ್ರಾಂಚೈಸಿಯನ್ನ ಒಟ್ಟು 200 ಕೋಟಿ ಡಾಲರ್‌ಗೆ ಮೌಲ್ಯೀಕರಿಸಬಹುದು ಎಂದು ಹೇಳಲಾಗಿದೆ. ಈ ನಿರ್ಧಾರ ಇನ್ನೂ ಅಧಿಕೃತವಾಗಿಲ್ಲ.

ಡಿಯಾಜಿಯೊ ನಿರ್ಧಾರಕ್ಕೆ ಕಾರಣವೇನು?
ಡಿಯಾಜಿಯೊ ಜಾಗತೀಕವಾಗಿ ಬದಲಾವಣೆ ತರಲು ತನ್ನ ಮಾಲೀಕತ್ವ ಬದಲಾವಣೆಗೆ ಎದುರುನೋಡುತ್ತಿದೆ. ಏಕೆಂದರೆ ಅಮೆರಿಕ ಡಿಯಾಜಿಯೊದ ಅತಿದೊಡ್ಡ ಮಾರುಕಟ್ಟೆ. ಆದ್ರೆ ಇತ್ತೀಚೆಗೆ ಸುಂಕದ ಹೊಡೆತ ಹಾಗೂ ಆಲ್ಕೋಹಾಲ್‌ ಉತ್ಪನ್ನಗಳಿಗೆ ಗ್ರಾಹಕರ ಬೇಡಿಕೆ ಕುಸಿದ ಬೆನ್ನಲ್ಲೇ ಮದ್ಯ ಮಾರಾಟಕ್ಕೆ ಹೊಡೆತ ಬಿದ್ದಿದೆ. ಆದ್ದರಿಂದ ಆರ್‌ಸಿಬಿಯಲ್ಲಿನ ತನ್ನ ಪಾಲನ್ನು ಮಾರಾಟ ಮಾಡಿದ್ರೆ ಆರ್ಥಿಕ ಚೇತರಿಕೆ ಜೊತೆಗೆ ತನ್ನ ಪ್ರಮುಖ ವ್ಯವಹಾರಗಳ ಮೇಲೆ ಗಮನಹರಿಸಲು ಸಾಧ್ಯವಾಗುತ್ತದೆ. ಅದಕ್ಕಾಗಿ ತನ್ನ ಪಾಲನ್ನು ಮಾರಾಟ ಮಾಡುವ ನಿರ್ಧಾರಕ್ಕೆ ಬಂದಿದೆ ಎಂದು ತಿಳಿದುಬಂದಿದೆ.

ಸರ್ಕಾರದ ಒತ್ತಡ ಕಾರಣವೇ?
ಮತ್ತೊಂದು ಕಡೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಆಯೋಜಿಸಿರುವ ವೃತ್ತಿಪರ ಟಿ20 ಕ್ರಿಕೆಟ್ ಲೀಗ್‌ನಲ್ಲಿ ಬಾಡಿಗೆ ಜಾಹೀರಾತು ಸೇರಿದಂತೆ ಎಲ್ಲಾ ರೀತಿಯ ತಂಬಾಕು ಮತ್ತು ಆಲ್ಕೋಹಾಲ್ ಪ್ರಚಾರಗಳನ್ನು ನಿಷೇಧಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಮತ್ತೊಮ್ಮೆ ಐಪಿಎಲ್‌ ಮಂಡಳಿಗೆ ನಿರ್ದೇಶನ ನೀಡಿದೆ. ಇದೂ ಸಹ ಒಂದು ಕಾರಣ ಇರಬಹುದು ಎಂದು ಹೇಳಲಾಗುತ್ತಿದೆ.

2008ರಲ್ಲಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಮೂಲಕ ಪದಾರ್ಪಣೆ ಮಾಡಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ವಿಜಯ್‌ ಮಲ್ಯ ಅವರ ಮಾಲೀಕತ್ವದಲ್ಲಿತ್ತು. ಮಲ್ಯ ಅವರ ಉದ್ಯಮ ಸಾಮ್ರಾಜ್ಯ ದಿವಾಳಿಯಾದ ನಂತರ ಡಿಯಾಜಿಯೊ ಕಂಪನಿಯ ಯುನೈಟೆಡ್ ಸ್ಪಿರಿಟ್ಸ್ ಸ್ವಾಧೀನಪಡಿಸಿಕೊಂಡಿತು.

Share This Article