ಹೆಸರು ಬದಲಾವಣೆಗೆ ಮುಂದಾದ ಶೋಭಾ ಕರಂದ್ಲಾಜೆ – ಏನಿದು ಹೊಸ ವರಸೆ?

Public TV
3 Min Read

ಬೆಂಗಳೂರು: ಕರಾವಳಿ ಮೂಲದವರಾದ ಕೇಂದ್ರ ಕೃಷಿ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಇದೀಗ ದಿಢೀರ್ ಆಗಿ ತಮ್ಮ ಹೆಸರನ್ನು ಬದಲಾವಣೆ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂಬ ಚರ್ಚೆಯೊಂದು ಜೋರಾಗಿದೆ.

ರಾಜ್ಯ ರಾಜಕೀಯದಿಂದ ಕೇಂದ್ರ ಸಚಿವರಾಗುವ ಮಟ್ಟಿಗೆ ಬೆಳೆದಿರುವ ಶೋಭಾ ಕರಂದ್ಲಾಜೆ ಇದೀಗ ತಮ್ಮ ಹೆಸರನ್ನು ಬದಲಾವಣೆ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ. ಪ್ರಸ್ತುತ ಇರುವ ಸರ್ ನೇಮ್ ‘ಕರಂದ್ಲಾಜೆ’ ಬದಲಿಗೆ ‘ಗೌಡ’ ಸೇರಿಸಲು ಪ್ರಕ್ರಿಯೆ ನಡೆಯುತ್ತಿದೆ ಎಂದು ವರದಿಯಾಗಿದ್ದು, ಮುಂದೆ ಅವರ ಹೆಸರು ‘ಶೋಭಾ ಗೌಡ’ (Shobha Gowda) ಆಗುವ ಸಾಧ್ಯತೆ ಇದೆ. ಇದನ್ನೂ ಓದಿ: ಕೇರಳ, ತಮಿಳುನಾಡಿನಲ್ಲೂ PFI ಬ್ಯಾನ್

ಹೆಸರು ಬದಲಾವಣೆ ಯಾಕೆ..?:
ಇದೀಗ ಯಾಕೆ ಶೋಭಾ ಕರಂದ್ಲಾಜೆ ಹೆಸರು ಬದಲಾವಣೆಗೆ ಮುಂದಾಗಿದ್ದಾರೆ ಎಂಬ ಪ್ರಶ್ನೆ ಕಾಡುತ್ತಿದೆ. ಈ ನಡುವೆ ಹೆಸರು ಬದಲಾವಣೆಗೆ ಜ್ಯೋತಿಷಿಗಳ ಸಲಹೆಯೋ? ಸಂಖ್ಯಾಶಾಸ್ತ್ರವೋ? ಅಥವಾ ದೆಹಲಿ ಮೂಲದ ನಾಯಕರ ಸಲಹೆಯೋ ಎಂಬ ಅನುಮಾನವು ಇದೆ. ಬಿಜೆಪಿಯಲ್ಲಿ (BJP) ಒಂದು ವರ್ಗದ ಪ್ರಕಾರ 2023ರ ಚುನಾವಣೆಗೆ ತಯಾರಿ ನಡೆಸಿ ಶೋಭಾ ಗೌಡ ಎಂದು ಹೆಸರು ಬದಲಾವಣೆ ಮಾಡಿಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಹೆಸರು ಬದಲಾಯಿಸಿಕೊಂಡು ರಾಜ್ಯ ರಾಜಕಾರಣಕ್ಕೆ ಶೋಭಾ ಕರಂದ್ಲಾಜೆ ಬರಲಿದ್ದಾರೆ. ರಾಜ್ಯದಲ್ಲಿ ಮಹತ್ವದ ಸ್ಥಾನ ಅಲಂಕರಿಸಲಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ.  ಇದನ್ನೂ ಓದಿ: PFI ಸಂಘಟನೆಗಳ ಆಸ್ತಿ ಬಗ್ಗೆ ಸರ್ವೆ ಕಾರ್ಯ ಆಗ್ತಿದೆ: ಆರಗ ಜ್ಞಾನೇಂದ್ರ

ಚುನಾವಣಾ ವರ್ಷ ಆಗಿರುವುದರಿಂದಾಗಿ ಈಗಾಗಲೇ ಬಿಜೆಪಿ ಚುನಾವಣೆಗೆ ಸಿದ್ಧತೆ ಆರಂಭಿಸಿದೆ. ರಾಜ್ಯದಲ್ಲಿ ಒಕ್ಕಲಿಗ ಟ್ರಂಪ್ ಕಾರ್ಡ್ ಬಳಕೆಗೆ ಬಿಜೆಪಿ ಹೈಕಮಾಂಡ್ ಪ್ಲಾನ್ ಏನಾದರೂ ಹಾಕಿದ್ಯಾ ಎಂಬ ಪ್ರಶ್ನೆ ಕಾಡುತ್ತಿದೆ. ಯಾಕೆಂದರೆ ಶೋಭಾ ಕರಂದ್ಲಾಜೆ ತಂದೆ ದಿವಂಗತ ಮೋನಪ್ಪ ಗೌಡ ಆದರೆ ಶೋಭಾ ಈವರೆಗೆ ತಮ್ಮ ಸರ್ ನೇಮ್ ಆಗಿ ಕರಂದ್ಲಾಜೆ ಬಳಸುತ್ತಿದ್ದರು. ಇದೀಗ ಕರಂದ್ಲಾಜೆ ಬದಲಿಗೆ ಗೌಡ ಸೇರಿಸಿ 2023ರ ಚುನಾವಣಾ ಅಖಾಡದಲ್ಲಿ ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಫ್ಯಾಕ್ಟರ್, ಕರಾವಳಿ ಭಾಗದಲ್ಲಿ ಹಿಂದುತ್ವ ಫ್ಯಾಕ್ಟರ್‌ಗೆ ಕೈ ಹಾಕಿದ್ಯಾ ಬಿಜೆಪಿ ಹೈಕಮಾಂಡ್ ಎಂಬ ಅನುಮಾನ ಮೂಡಿದೆ.

ಇದರೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ನಳಿನ್ ಕುಮಾರ್ ಕಟೀಲ್ (Nalinkumar Kateel) ಅವರ ಅಧಿಕಾರವಧಿ ಅಂತ್ಯಗೊಂಡಿದೆ. ಇದೀಗ ಮುಂದಿನ ರಾಜ್ಯಾಧ್ಯಕ್ಷರ ರೇಸ್‍ನಲ್ಲಿ ಶೋಭಾ ಕರಂದ್ಲಾಜೆ ಕೂಡ ಇದ್ದು, ಹೀಗಾಗಿ ಹೆಸರು ಬದಲಾವಣೆಯೊಂದಿಗೆ ಸಿ.ಟಿ ರವಿ (C.T Ravi) ಅವರ ಪ್ರಬಲ ಸ್ಪರ್ಧಿಯಾಗುವ ಸೂಚನೆ ನೀಡಿದ್ದಾರೆ. ಇದೀಗ ಮುಂಚೂಣಿಯಲ್ಲಿ ಕೇಳಿ ಬರುತ್ತಿರುವ ಹೆಸರುಗಳ ಪೈಕಿ ಸಿ.ಟಿ ರವಿ ಹಾಗೂ ಶೋಭಾ ಒಕ್ಕಲಿಗರು (Vokkaliga). ಇದೀಗ ಇವರಿಬ್ಬರಲ್ಲಿ ಒಬ್ಬರಿಗೆ ಮಹತ್ವದ ಸ್ಥಾನ ನೀಡಿ ಒಕ್ಕಲಿಗರ ಮತ ಸೆಳೆಯಲು ಬಿಜೆಪಿ ಪ್ಲಾನ್ ಮಾಡಿದೆ. ಈ ಪೈಕಿ ಶೋಭಾ ಅವರಿಗೆ ಉನ್ನತ ಸ್ಥಾನಮಾನ ನೀಡಿ ಮಹಿಳೆಯರಿಗೆ ಉನ್ನತ ಸ್ಥಾನ ನೀಡಿದ ಹೆಸರಿನೊಂದಿಗೆ ಒಕ್ಕಲಿಗರ ಮತ ಸೆಳೆಯುವ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಪ್ಲಾನ್ ಹಾಕಿಕೊಂಡಂತಿದೆ. ಇದರೊಂದಿಗೆ ಈಗಾಗಲೇ ಕಾಂಗ್ರೆಸ್‍ನಲ್ಲಿ ಒಕ್ಕಲಿಗ ನಾಯಕರಾಗಿ ಡಿ.ಕೆ ಶಿವಕುಮಾರ್ (D.K Shivakumar) ಕಾಣಿಸಿಕೊಂಡರೆ, ಜೆಡಿಎಸ್‍ನಲ್ಲಿ ಹೆಚ್.ಡಿ ಕುಮಾರಸ್ವಾಮಿ (H.D Kumaraswamy) ಪ್ರಬಲರಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ಬಿಜೆಪಿಯಿಂದ ಶೋಭಾ ಕರಂದ್ಲಾಜೆಯನ್ನು ಒಕ್ಕಲಿಗ ನಾಯಕಿಯಾಗಿ ಮಾಡಿ ಕಾಂಗ್ರೆಸ್ (Congress), ಜೆಡಿಎಸ್‍ಗೆ (JDS) ಟಕ್ಕರ್ ನೀಡಲು ಬಿಜೆಪಿ ಹೈಕಮಾಂಡ್ ಚಿಂತಿಸಿದಂತಿದೆ.

ಈ ನಡುವೆ ಶೋಭಾ ಕರಂದ್ಲಾಜೆ ಆಪ್ತ ವಲಯ ಹೆಸರು ಬದಲಾವಣೆ ಬಗ್ಗೆ ಮಾಹಿತಿ ಇಲ್ಲ ಎನ್ನುತ್ತಿದೆ. ಹಾಗಾದ್ರೆ ಶೋಭಾ ಕರಂದ್ಲಾಜೆ ಹೆಸರು ಬದಲಾವಣೆಗೆ ನಿಜಕ್ಕೂ ಮುಂದಾಗಿದ್ದಾರಾ? ಅಥವಾ ಬಿಜೆಪಿಯೊಳಗಿನ ಆಂತರಿಕ ರಾಜಕೀಯ ರೆಕ್ಕೆಪುಕ್ಕನಾ? ಮುಂದಿನ ದಿನಗಳಲ್ಲಿ ಈ ಬಗ್ಗೆ ಸ್ಪಷ್ಟತೆ ಸಿಗುವ ಸಾಧ್ಯತೆ ಇದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *